ಜೈಭೀಮ್​ ಸಿನಿಮಾ ವಿವಾದ: ನಟ ಸೂರ್ಯ, ಜ್ಯೋತಿಕಾ, ನಿರ್ದೇಶಕ ಜ್ಞಾನವೇಲುಗೆ ಶಾಕ್​ ಕೊಟ್ಟ ಚೆನ್ನೈ ಕೋರ್ಟ್​!

Surya
Published on

ಚೆನ್ನೈ: ಸೂಪರ್​ ಸ್ಟಾರ್​ ಸೂರ್ಯ ಅವರ ತಮಿಳು ಚಲನಚಿತ್ರ ‘ಜೈಭೀಮ್​’ ವಿಶ್ವದಾದ್ಯಂತ ಮೆಚ್ಚುಗೆ ಪಾತ್ರವಾಗಿದ್ದಲ್ಲದೆ, ತಮಿಳುನಾಡಿನಲ್ಲಿ ವಿವಾದಕ್ಕೆ ಸಿಲುಕಿತು. ಚಿತ್ರದ ಕೆಲವು ಅಂಶಗಳು ಸ್ಥಳೀಯ ವನ್ನಿಯಾರ್​​ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಆರೋಪ ಕೇಳಿಬಂದಿತ್ತು. ಚಿತ್ರ ಬಿಡುಗಡೆಯಾಗಿ ಸಾಕಷ್ಟು ತಿಂಗಳುಗಳು ಕಳೆದ ಬಳಿಕ ಇದೀಗ ಚೆನ್ನೈ ನ್ಯಾಯಾಲಯ ನಟ ಸೂರ್ಯ, ಪತ್ನಿ ಜ್ಯೋತಿಕಾ ಹಾಗೂ ಚಿತ್ರದ ನಿರ್ದೇಶಕ ಜ್ಞಾನವೇಲು ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಆದೇಶಿಸಿದೆ.

ಚಿತ್ರದಲ್ಲಿ ವನ್ನಿಯಾರ್​​ ಸಮುದಾಯವನ್ನು ತಪ್ಪಾಗಿ ಚಿತ್ರೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರುದ್ರ ವನ್ನಿಯಾರ್ ಸೇನೆ ಎಂಬ ವನ್ನಿಯಾರ್ ಗುಂಪು ಅರ್ಜಿಯನ್ನು ಸಲ್ಲಿಸಿದ್ದು, ಸಿನಿಮಾದಲ್ಲಿ ಸಮುದಾಯದ ಜನರನ್ನು ಅತ್ಯಂತ ಕಳಪೆಯಾಗಿ ತೋರಿಸಲಾಗಿದೆ ಎಂದು ದೂರಿದೆ.

ಅರ್ಜಿದಾರರು ಚಿತ್ರಬಿಡುಗಡೆಯಾದ 2021ರ ನವೆಂಬರ್ ತಿಂಗಳಲ್ಲೇ ಚೆನ್ನೈ ಸೈದಾಪೇಟ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಚಿತ್ರದಲ್ಲಿರುವ ಹಲವಾರು ದೃಶ್ಯಗಳು ಮತ್ತು ಖಳನಾಯಕರ ಹೆಸರುಗಳು ನಮ್ಮ ಸಮುದಾಯವನ್ನು ಉಲ್ಲೇಖಿಸುತ್ತವೆ. ಈ ಚಲನಚಿತ್ರವನ್ನು "ವನ್ನಿಯಾರ್ ಫೋಬಿಯಾ" ದಿಂದ ನಿರ್ಮಿಸಲಾಗಿದೆ ಮತ್ತು "ಸಮುದಾಯಗಳ ನಡುವೆ ಕೋಮುಗಲಭೆಯನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿದೆ" ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅರ್ಜಿಯು ಏಪ್ರಿಲ್ 29, 2022 ರಂದು ವಿಚಾರಣೆಗೆ ಬಂದಿತು. ಕೋರ್ಟ್​ಗೆ ಹಾಜರಾಗುವಂತೆ ಹೇಳಿದ್ದರೂ ನಟ ಸೂರ್ಯ, ಜ್ಯೋತಿಕಾ ಮತ್ತು ನಿರ್ದೇಶಕ ಜ್ಞಾನವೇಲು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಈ ವೇಳೆ ವನ್ನಿಯಾರ್ ಸಮುದಾಯದ ಪರ ವಾದಿಸಿದ ವಕೀಲಕರು ಸಮುದಾಯವನ್ನು ಕೆಟ್ಟದಾಗಿ ತೋರಿಸುವುದಕ್ಕಾಗಿಯೇ ಸಿನಿಮಾದ ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ವಾದಿಸಿದ್ದರು.

ಅರ್ಜಿದಾರರ ವಾದವನ್ನು ಒಪ್ಪಿಕೊಂಡ ನ್ಯಾಯಾಲಯ, ಆರೋಪಿಗಳೆಂದು ಹೆಸರಿಸಲಾದ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಚೆನ್ನೈ ಪೊಲೀಸರಿಗೆ ಸೂಚಿಸಿದೆ. ಕಾನೂನಿನ ಪ್ರಕಾರ ಎಫ್‌ಐಆರ್ ದಾಖಲಿಸಿ ಪ್ರಕರಣದ ತನಿಖೆ ನಡೆಸುವಂತೆ ನ್ಯಾಯಾಲಯವು ದೂರನ್ನು ವೆಲಾಚೇರಿಯ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ರವಾನಿಸಿದೆ. ಮೇ 20 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.

ಕಳೆದ ವರ್ಷ ಜೈ ಭೀಮ್ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಪಕ್ಷದ ನಾಯಕ ಅನ್ಬುಮಣಿ ರಾಮದಾಸ್ ಅವರು ಚಲನಚಿತ್ರವನ್ನು "ವನ್ನಿಯಾರ್ ಸಮುದಾಯದ ಮೇಲಿನ ಯೋಜಿತ ದಾಳಿ" ಎಂದು ಆರೋಪಿಸಿದ ಬೆನ್ನಲ್ಲೇ ವಿವಾದವು ಸ್ಫೋಟಗೊಂಡಿತು. ಒಬ್ಬ ಕ್ರೂರ ಸಬ್‌ಇನ್‌ಸ್ಪೆಕ್ಟರ್ ಪಾತ್ರವನ್ನು ಪ್ರತಿನಿಧಿಸುವ ರೀತಿಯನ್ನು ಅವರು ಪ್ರಶ್ನಿಸಿದರು, ಇದು ವನ್ನಿಯಾರ್‌ಗಳಿಗೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿದರು. ಇದಾದ ಬಳಿಕ ವನ್ನಿಯಾರ್ ಸಂಘ ಸಹ ಚಲನಚಿತ್ರಕ್ಕೆ ಆಕ್ಷೇಪಣೆಯನ್ನು ಸಲ್ಲಿಸಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net