ಕೊಡಲಿ ಹಿಡಿದು ಮದ್ವೆ ಮಂಟಪಕ್ಕೆ ನುಗ್ಗಿದ ಒನ್​ ಸೈಡ್​ ಲವರ್​: ಮುಂದಾಗಿದ್ದು ಹ್ಯಾಪಿ ಎಂಡಿಂಗ್​!

Bride
Published on

ಲಖನೌ: ಉತ್ತರ ಪ್ರದೇಶದ ಗೋರಖ್​​ಪುರದಲ್ಲಿ ಅದ್ಧೂರಿ ಮದುವೆಯೊಂದು ನಡೆಯುತ್ತಿತ್ತು. ನವಜೋಡಿ ಹಸಮಣೆಯಲ್ಲಿ ಕುಳಿತಿದ್ದರೆ, ಪುರೋಹಿತರು ಮಂತ್ರ ಪಠಿಸುತ್ತಿದ್ದರು. ಪರಸ್ಪರ ಹಾರ ಬದಲಾವಣೆಯು ಆಯಿತು. ಇದಾದ ಬಳಿಕ ಪುರೋಹಿತರು ಹೇಳಿದಂತೆ ವರ ತಾಳಿ ತೆಗೆದುಕೊಂಡು ಇನ್ನೇನು ವಧುವಿಗೆ ಕಟ್ಟಬೇಕು ಎನ್ನುವಷ್ಟರಲ್ಲಿ ಕೊಡಲಿ ಹಿಡಿದು ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ಯುವಕನೊಬ್ಬ ಇಡೀ ಮದುವೆ ಮಂಟಪದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಮದುವೆಗೆ ಬಂದಿದ್ದವರಲ್ಲಿ ಆತಂಕ ಮೂಡಿಸಿದ ಪ್ರಸಂಗ ಜರುಗಿದೆ.

ಅಷ್ಟಕ್ಕೂ ಆ ಯುವಕ ಯಾರು ಎಂಬ ಪ್ರಶ್ನೆಗೆ ಉತ್ತರ ಮುಂದಿದೆ. ಇದು ಒನ್​ ಸೈಡ್​ ಲವ್​ ಸ್ಟೋರಿಯ ದುರಂತ ಕತೆ. ಯುವಕ ವಧುವನ್ನು ಮನಸಾರೆ ಪ್ರೀತಿಸುತ್ತಿದ್ದ. ಆದರೆ, ಅದು ವಧುವಿಗೆ ತಿಳಿದೇ ಇಲ್ಲ. ಅಚ್ಚರಿಯೆಂದರೆ ಆತ ಯಾರೆಂಬುದು ಸಹ ಅವಳಿಗೆ ಗೊತ್ತಿಲ್ಲ.

ದಿಢೀರನೇ ಮದುವೆ ಮಂಟಪದ ವೇದಿಕೆ ಮೇಲೇರಿದ ಯುವಕ ಅರಿಶಿನವನ್ನು ತೆಗೆದುಕೊಂಡು ವಧುವಿನ ಹಣೆಗೆ ಇಟ್ಟ. ಇಲ್ಲಿಂದ ಕದಲಿದರೆ ಕೊಡಲಿಯಲ್ಲಿ ಕೊಚ್ಚಿ ಕೊಲೆ ಮಾಡುವುದಾಗಿಯೂ ಆತ ಬೆದರಿಕೆ ಹಾಕಿದ. ಬಲವಂತವಾಗಿ ತಾಳಿ ಕಟ್ಟಲು ಮುಂದಾದಾಗ ಮದುವೆ ಮಂಟದಲ್ಲಿ ಉಂಟಾದ ಗದ್ದಲವೂ ಉಂಟಾಯಿತು. ಇದನ್ನೂ ನೋಡಿ ಅತಿಥಿಗಳು ಸಹ ಆತಂಕಗೊಂಡರು.

ಕೊನೆಗೆ ಅಲ್ಲಿ ಸೇರಿದ್ದ ಜನಗಳೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಗಲಾಟೆಯಲ್ಲಿ ಆತನಿಗೆ ಗಾಯವೂ ಆಗಿತ್ತು. ಇದಾದ ಬಳಿಕ ಯುವಕನ ನಡೆಯಿಂದ ಸಂಶಯ ಉಂಟಾಗಿ ಮದುವೆ ಬೇಡವೆಂಬ ನಿರ್ಧಾರಕ್ಕೆ ವರನ ಕಡೆಯವರು ಬಂದರು. ಆದರೆ, ಈ ಪ್ರಕರಣದ ಮಧ್ಯ ಬಂದು ಹಿರಿಯರು ವಧು-ವರನ ಮನೆಯವರನ್ನು ಕೂರಿಸಿ ಪಂಚಾಯಿತಿ ನಡೆಸಲು ಮುಂದಾದರು.

ಪಂಚಾಯಿತಿಯಲ್ಲಿ ವಧು ನನಗೆ ಆತ ಯಾರೆಂಬುದು ಗೊತ್ತಿಲ್ಲ. ನನಗೂ ಆತನಿಗೂ ಸಂಬಂಧವಿಲ್ಲ ಎಂದು ಮನವರಿಕೆ ಮಾಡಿದಳು. ವಧುವಿನ ಮಾತನ್ನು ನಂಬಿದ ವರನ ಸಂಬಂಧಿಕರು ಮದುವೆಗೆ ಒಪ್ಪಿ, ಸಮಾರಂಭವನ್ನು ಮುಗಿಸಿಕೊಂಡು ವಧುವನ್ನು ತಮ್ಮ ಜತೆಯಲ್ಲೇ ಕರೆದೊಯ್ದರು.

ಇತ್ತ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಯುವಕನನ್ನು ಗೋಲು ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಈತ ಪಿಪ್ರಾಚ್​ ಏರಿಯಾದ ನಿವಾಸಿ. ನಾನು ಆಕೆಯನ್ನು ಬಹು ದಿನಗಳಿಂದ ಲವ್​ ಮಾಡುತ್ತಿದ್ದೇನೆ. ಆಕೆ ನನ್ನ ಲವ್​ ಒಪ್ಪಿಕೊಳ್ಳದಿದ್ದಾಗ, ನಾನು ಒನ್​ ಸೈಡ್​ ಲವ್​ ಮುಂದುವರಿಸಿದ್ದೇನೆಂದು ಒಪ್ಪಿಕೊಂಡಿದ್ದಾನೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net