

ಚೆನ್ನೈ: ಸುಮಾರು 4 ವರ್ಷಗಳ ಬಳಿಕ ತಮಿಳು ಚಿತ್ರರಂಗದ ಕಾಮಿಡಿ ದಿಗ್ಗಜ ವಡಿವೇಲು ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಕೊನೆಯದಾಗಿ ನಟ ವಿಜಯ್ ಅಭಿನಯದ ಮೆರ್ಸಲ್ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ 2017ರಲ್ಲಿ ತೆರಕಂಡಿತ್ತು.
ಇಮ್ಸಾಯ್ ಅರಸನ್ 24 ಎಮ್ ಪುಲಿಕೇಶಿ ಚಿತ್ರದ ವಿವಾದದ ಬಳಿಕ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ 2018 ರಲ್ಲಿ ವಡಿವೇಲು ಅವರನ್ನು ಬ್ಯಾನ್ ಮಾಡಿತ್ತು. ಚಿತ್ರದ ನಿರ್ಮಾಪಕ ಎಸ್. ಶಂಕರ್ ಮತ್ತು ನಿರ್ದೇಶಕ ಚಿಂಬು ದೇವನ್ ಅವರು ಕೆಲವು ಭಿನ್ನಾಭಿಪ್ರಾಯಗಳಿಂದಾಗಿ ವಡಿವೇಲು ವಿರುದ್ಧ ನಿರ್ಮಾಪಕರ ಮಂಡಳಿಗೆ ದೂರು ನೀಡಿದ್ದರು. ಹೀಗಾಗಿ ವಡಿವೇಲು ಅವರನ್ನು ಬ್ಯಾನ್ ಮಾಡಲಾಗಿತ್ತು.
ಇದೀಗ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಿರುವ ಲೈಕಾ ಪ್ರೊಡಕ್ಷನ್ಸ್ ವಡಿವೇಲು ಮತ್ತೆ ಬಣ್ಣ ಹಚ್ಚಲು ದಾರಿ ಮಾಡಿಕೊಟ್ಟಿದೆ. ಲೈಕಾ ಬ್ಯಾನರ್ನಲ್ಲಿ ಮೂಡಿಬರಲಿರುವ ಮುಂದಿನ ಚಿತ್ರದಲ್ಲಿ ವಡಿವೇಲು ನಟಿಸಲಿದ್ದಾರೆ. ಇನ್ನು ಹೆಸರಿಡದ ಸಿನಿಮಾ ಕುರಿತು ನಡೆದ ಸಮಾರಂಭದಲ್ಲಿ ಮಾತನಾಡಿದ ವಡಿವೇಲು ಇನ್ನೆಂದು ಶಂಕರ್ ಜತೆ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ.
ಎಸ್. ಶಂಕರ್ ಖ್ಯಾತ ನಿರ್ದೇಶಕರೂ ಆಗಿದ್ದು, ಅವರೊಂದಿಗಿನ ಜಗಳ ಕಾರಣದಿಂದಾಗಿ ವಡಿವೇಲು ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಹೇಳಲಾಗಿದೆ. (ಏಜೆನ್ಸೀಸ್)