ಕೆಲವೇ ದಿನಗಳಿಗೆ ಸೀಮಿತವಾದ ವೈವಾಹಿಕ ಜೀವನದ ಸುಮಧುರ ಕ್ಷಣ: ಯುವತಿ ದುರಂತ ಸಾವು

Girl Death
Published on

ಆನೇಕಲ್: ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಶವ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದ್ದು, ಪತಿ ಹಾಗೂ ಮನೆಯವರು ಕೊಲೆ ಮಾಡಿದ್ದಾರೆ ಎಂದು ಯುವತಿಯ ಪಾಲಕರು ಹಾಗೂ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು ಹೊರವಲಯದ ಜಿಗಣಿ ಸಮೀಪದ ರಾಜಾಪುರ ನಿವಾಸಿಯಾಗಿರುವ ಯಶವಂತ್ ಹಾಗೂ ಬೆಂಗಳೂರಿನ ಟೀಚರ್ಸ್ ಕಾಲೋನಿಯ ನಿವಾಸಿ ರಾಣಿ ಕಳೆದ ಆರು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಗೌರ್ಮೆಂಟ್ ಕೆಲಸ ಮಾಡಿಕೊಂಡಿದ್ದ ಯಶವಂತ್ ಆರು ತಿಂಗಳ ಹಿಂದೆ ರಾಣಿಯನ್ನು ಎರಡನೇ ಮದುವೆಯಾಗಿದ್ದ. ಆದರೆ, ರಾಣಿಯ ವೈವಾಹಿಕ ಜೀವನದ ಸುಮಧುರ ಕ್ಷಣ ಕೆಲವೇ ದಿನಗಳಿಗೆ ಸೀಮಿತವಾಗಿತ್ತು. ನಂತರದ ದಿನಗಳಲ್ಲಿ ರಾಣಿಗೆ ಯಶವಂತ್​​ ಕುಟುಂಬಸ್ಥರು ಚಿತ್ರಹಿಂಸೆ ನೀಡುತ್ತಿದ್ದರು. ತನ್ನ ಪಾಲಕರ ಬಳಿಯು ರಾಣಿ ಇದನ್ನು ಹೇಳಿಕೊಂಡಿದ್ದಳು. ಆದರೆ, ಅಂತರ್ಜಾತಿ ವಿವಾಹ ಕಾರಣ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.

ಇದೀಗ ಮನೆಯ ಮಹಡಿಯಲ್ಲಿ ರಾಣಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಇದ್ದರೂ ಕೂಡ ಆಕೆಯ ಪತಿ ಹಾಗೂ ಮನೆಯವರು ನೋಡಲು ಕೂಡ ಬಂದಿಲ್ಲ. ಅಂತರ್ಜಾತಿ ವಿವಾಹ ಆಗಿದ್ದರಿಂದ ಪತಿಯ ಮನೆಯವರೇ ಕೊಲೆ ಮಾಡಿದ್ದಾರೆ ಎಂದು ಯುವತಿಯ ಪಾಲಕರು ಆರೋಪಿಸಿದ್ದಾರೆ. ಇನ್ನು ಘಟನೆ ನಡೆದು ಅನೇಕ ಸಮಯಗಳಾದರೂ ಸಹ ಜಿಗಣಿ ಪೊಲೀಸರು ಆ್ಯಂಬುಲೆನ್ಸ್ ಅನ್ನು ಸ್ಥಳಕ್ಕೆ ಕಳುಹಿಸದೆ ಬೇಜವಾಬ್ದಾರಿ ತೋರಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದರೆ ಸತ್ಯಾಸತ್ಯತೆ ಹೊರಬರಲಿದೆ ಎಂದು ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net