More

    ಹೀಗೊಂದು ಅನಿರೀಕ್ಷಿತ ಅತ್ಯಮೂಲ್ಯ ಹೊಸವರ್ಷದ ಉಡುಗೊರೆ

    ಹೀಗೊಂದು ಅನಿರೀಕ್ಷಿತ ಅತ್ಯಮೂಲ್ಯ ಹೊಸವರ್ಷದ ಉಡುಗೊರೆ

    ದೇಶದೊಳಗೆ ಹಾಗೂ ಹೊರಗೆ ಚೀನೀ ಕಮ್ಯೂನಿಸ್ಟರು ಎಸಗುತ್ತಿರುವ ಕರಾಳ ಕೃತ್ಯಗಳು ನಾಜಿ ಕೃತ್ಯಗಳನ್ನು ಮೀರಿಸುತ್ತವೆ. ಚೀನಾ ವಿರುದ್ಧ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಎತ್ತಿದ ದನಿಗೆ ಕೆನಡಾ ಕೂಡ ಸೇರಿದೆ.

    ಜಗತ್ತು ಮಾರಕ ಕರೊನಾ ವೈರಸ್ ವಿರುದ್ಧ ಜೀವನ್ಮರಣ ಸೆಣಸಾಟದಲ್ಲಿ ಎರಡು ವರ್ಷಗಳನ್ನು ಪೂರೈಸಿದೆ. ಈ ಹೋರಾಟ ಅಂತ್ಯಗೊಳ್ಳುವ ಸಾಧ್ಯತೆ ಸದ್ಯಕ್ಕಿಲ್ಲದಿದ್ದರೂ ಬಲು ದೊಡ್ಡ ಬೆಲೆ ತೆತ್ತು ಮಾನವಕುಲ ತೀವ್ರ ಅಪಾಯದ ಹಂತವನ್ನು ದಾಟಿ ಬಂದಿದೆ ಎನ್ನುವುದು ಸಮಾಧಾನದ ವಿಷಯ. ವೈರಸ್​ನ ರೂಪಾಂತರಗಳು ಹಂತಹಂತವಾಗಿ ತಮ್ಮ ಮಾರಕ ಶಕ್ತಿಯನ್ನು ಕಳೆದುಕೊಳ್ಳುತ್ತಿರುವುದಾದರೂ ನಾವಿನ್ನೂ ಎಚ್ಚರಿಕೆಯಲ್ಲೇ ಇರುವುದು ಅತ್ಯಗತ್ಯ. ಯಾಕೆಂದರೆ ಹೊಸ ರೂಪಾಂತರಿಗಳ ಬಗ್ಗೆ ನಿರ್ದಿಷ್ಟವಾಗಿ ಹೇಳುವುದೂ ತುಸು ಕಷ್ಟವೇ ಆಗಿದೆ. ಮೊದಲಿಗೆ, ವೇಗವಾಗಿ ಹರಡಿದರೂ ನಿರಪಾಯಕಾರಿ ಎಂದು ಪರಿಗಣಿತವಾದ ಒಮಿಕ್ರಾನ್ ರೂಪಾಂತರಿ ಜೀವ ತೆಗೆಯಲೂಬಲ್ಲುದು ಎನ್ನುವುದಕ್ಕೆ ಬ್ರಿಟನ್​ನಲ್ಲಿ ಉದಾಹರಣೆ ದೊರೆತಿರುವುದು ನಮಗೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಆದಾಗ್ಯೂ, ಒಮಿಕ್ರಾನ್ ಮಾರಕವಾಗುವುದು ಈಗಾಗಲೇ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ಅವರು ಸೂಕ್ತ ಎಚ್ಚರಿಕೆ ವಹಿಸಿದರೆ ಈ ಸಂಕಟವನ್ನು ಯಶಸ್ವಿಯಾಗಿ ದಾಟಬಹುದು ಎಂಬುದು ನಮ್ಮ ಆಶಾಭಾವನೆಯನ್ನು ಹೆಚ್ಚಿಸುತ್ತದೆ. ಇಷ್ಟಾಗಿಯೂ, ಒಂದಲ್ಲಾ ಒಂದು ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ ನಮ್ಮ ದೇಶದಲ್ಲಿ ಅಧಿಕವಾಗಿರುವ ಕಾರಣ ಮತ್ತು ಒಮಿಕ್ರಾನ್ ರೂಪಾಂತರಿ ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಕಳೆದೊಂದು ವಾರದಲ್ಲಿ ಉಂಟುಮಾಡಿರುವ ಹಾವಳಿ ಹಾಗೂ ಇತರೆಡೆಗಳಲ್ಲೂ ಅದು ವೇಗವಾಗಿ ಹರಡುತ್ತಿರುವುದು ಕನಿಷ್ಠ ಇನ್ನೆರಡು ತಿಂಗಳುಗಳಾದರೂ ನಾವು ಅತೀವ ಎಚ್ಚರಿಕೆಯಿಂದ ದಿನಗಳೆಯಬೇಕಾದ ಅಗತ್ಯವನ್ನು ಮನಗಾಣಿಸುತ್ತವೆ. ಐಐಟಿ ಕಾನ್​ಪುರ್​ನ ಸಂಶೋಧಕರ ತಂಡವೊಂದರ ಪ್ರಕಾರ ಪ್ರಸಕ್ತ ಒಮಿಕ್ರಾನ್ ಸಂಕಟ ಉತ್ತುಂಗಕ್ಕೇರುವುದು ಫೆಬ್ರವರಿ 3ರ ಹೊತ್ತಿಗೆ. ನಂತರ ಇಳಿಕೆ ಕಾಣಬಹುದು. ಇದರ ಜತೆಗೇ, ಅಮೆರಿಕಾದಲ್ಲಿ ಇನ್ನೂ ವ್ಯಾಕ್ಸಿನ್ ಪಡೆಯದ ಎಳೆಯರನ್ನು ಒಮಿಕ್ರಾನ್ ಗುರಿಯಾಗಿಸಿಕೊಳ್ಳುತ್ತಿರುವ ಲಕ್ಷಾಂತರ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ನಮ್ಮ ಎಳೆಯರ ಬಗ್ಗೆ ನಾವು ವಹಿಸಬೇಕಾದ ಎಚ್ಚರಿಕೆಯನ್ನು ನೆನಪಿಸುತ್ತವೆ. ಈ ಎಚ್ಚರಿಕೆ ಫೆಬ್ರವರಿ 3ರ ನಂತರವೂ ಇರಬೇಕು ಎನ್ನುವುದು ‘ಜಗದಗಲ’ದ ಆಗ್ರಹ.

    ಕರೊನಾ ಸಂಕಟ ಸಾಲದು ಎಂಬಂತೆ, ಮೊದಲಿಗೆ ವೈರಸ್ ಅನ್ನು ಸೃಷ್ಟಿಸಿ ಜಗತ್ತಿಗೆ ಹರಡಿದ ಚೀನೀ ಕಮ್ಯೂನಿಸ್ಟ್ ಸರ್ಕಾರ ನಂತರ ಸುತ್ತಲಿನ ದೇಶಗಳ ಗಡಿಗಳನ್ನು ಅತಿಕ್ರಮಿಸುವ ದುಸ್ಸಾಹಸಕ್ಕಿಳಿದು ಒಂದಕ್ಕಿಂತ ಹೆಚ್ಚು ಕಡೆ ಯುದ್ಧಭೀತಿಯನ್ನೂ ಉಂಟುಮಾಡಿದ್ದನ್ನು ಭಾರತ-ಚೀನಾ ಗಡಿಯಲ್ಲಿ, ತೈವಾನ್ ಜಲಸಂಧಿಯಲ್ಲಿ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ನಿರಂತರವಾಗಿ ನೋಡುತ್ತಿದ್ದೇವೆ. ಭಾರತ-ಚೀನಾ ಗಡಿಯಲ್ಲಂತೂ ರಕ್ತಪಾತವೇ ಆಗಿಹೋಗಿದೆ. ಬೀಜಿಂಗ್​ನಲ್ಲಿರುವ ಮಾನವತಾವಿರೋಧಿ ದುರುಳ ಸರ್ಕಾರ ಈಗ ಮಶಿನ್​ಗನ್ ಹಿಡಿದ ರೋಬಾಟ್​ಗಳನ್ನು ಗಡಿಗೆ ಕಳಿಸಿ ಮುಂದಿನ ಯುದ್ಧಗಳ ಸ್ವರೂಪವನ್ನೇ ಬದಲಾಯಿಸುವ ಕುಪ್ರಯತ್ನದಲ್ಲಿ ತೊಡಗಿದೆ! ಅತ್ತ ತೈವಾನ್​ಗೆ ಅದು ಒಡ್ಡುತ್ತಿರುವ ಆಕ್ರಮಣದ ಬೆದರಿಕೆ ಅಮೆರಿಕಾವನ್ನು ಅಲ್ಲಿ ರಣರಂಗಕ್ಕೆಳೆದು ತರುವ ಸ್ಥಿತಿಯನ್ನು ನಿರ್ವಣಮಾಡಿದೆ. ಈ ನಡುವೆ ಷಿನ್​ಜಿಯಾಂಗ್ ಪ್ರಾಂತ್ಯದಲ್ಲಿ ಉಯ್ಘರ್ ಮುಸ್ಲಿಮರ ಮಾರಣಹೋಮ, ಹಾಂಕಾಂಗಿಗಳ ಸ್ವಾತಂತ್ರ್ಯಹರಣವೂ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಟಿಬೆಟನ್ನರದಂತೂ ಏಳು ದಶಕಗಳ ನೋವು. ಹೀಗೆ ದೇಶದೊಳಗೆ ಹಾಗೂ ಹೊರಗೆ ಚೀನೀ ಕಮ್ಯೂನಿಸ್ಟರು ಎಸಗುತ್ತಿರುವ ಕರಾಳ ಕೃತ್ಯಗಳು ನಾಜಿ ಕೃತ್ಯಗಳನ್ನು ಮೀರಿಸುತ್ತವೆ. ಈ ರಕ್ಕಸರ ವಿರುದ್ಧ ಅಮೆರಿಕಾ ಮತ್ತು ಆಸ್ಟ್ರೇಲಿಯಾ ಎತ್ತಿದ ದನಿಗೆ ಈಗ ಕೆನಡಾ ತನ್ನ ದನಿಯನ್ನೂ ದೊಡ್ಡದಾಗಿ ಸೇರಿಸಿದೆ. ಚೀನೀ ಕಮ್ಯೂನಿಸ್ಟರ ವಿರುದ್ಧದ ಮಾತಿನ ಹಾಗೂ ಆರ್ಥಿಕ ಸಮರಗಳು ಶಸ್ತ್ರಾಸ್ತ್ರ ಸಮರಕ್ಕೇನಾದರೂ ದಾರಿ ಮಾಡಿಕೊಟ್ಟರೆ ಜಗತ್ತಿಗೆ ಉಳಿಗಾಲವಿರುವುದಿಲ್ಲ.

    ಅತ್ತ ಯೂರೋಪ್ ಮತ್ತೊಂದು ಅಪಾಯದ ಹೊಸ್ತಿಲಿನಲ್ಲಿ ನಿಂತಂತಿದೆ. ನವೆಂಬರ್​ನಲ್ಲಿ ಸುಮಾರು ಒಂದು ಲಕ್ಷ ರಶಿಯನ್ ಸೈನಿಕರು ಪೂರ್ವ ಯೂಕ್ರೇನ್​ನ ಗಡಿಯಲ್ಲಿ ಜಮಾವಣೆಗೊಂಡದ್ದನ್ನು ಆಕ್ರಮಣದ ತಯಾರಿ ಎಂದೇ ಅಮೆರಿಕಾ ಮತ್ತು ಪಶ್ಚಿಮ ಯೂರೋಪಿಯನ್ ದೇಶಗಳು ದನಿಯೆತ್ತಿ ಕೂಗತೊಡಗಿದವು. ಪರಿಣಾಮವಾಗಿ ಅಲ್ಲೊಂದು ಹೊಸದಾದ, ದೊಡ್ಡದಾದ ರಣಾಂಗಣ ಸೃಷ್ಟಿಯಾಗುವ ಅಪಾಯ ಜಗತ್ತಿಗೆ ಕಂಡಿತು.

    ಹೀಗೆ ಪೂರ್ವ ಏಶಿಯಾ ಮತ್ತು ಆಗ್ನೇಯ ಯೂರೋಪ್​ನಲ್ಲಿ ಸಂಘರ್ಷಗಳೇನಾದರೂ ಆರಂಭವಾದರೆ ಅಲ್ಲಿ ಅಣ್ವಸ್ತ್ರಗಳ ಬಳಕೆ ನಿಶ್ಚಿತ. ಹಾಗಾದಾಗ ಜಗತ್ತಿನ ಬಹುಭಾಗ, ಅದೂ ಜನಬಾಹುಳ್ಯ ಮತ್ತು ಆರ್ಥಿಕವಾಗಿ ಸಂಪದ್ಭರಿತ ಭಾಗ ನಿರ್ನಾಮದ ಅಪಾಯವನ್ನೆದುರಿಸುತ್ತದೆ. ಕಳೆದ ಒಂದೂವರೆ ತಿಂಗಳಲ್ಲಿ ನಾವು ಗಮನಿಸುತ್ತಿರುವ ಅಪಾಯವಿದು.

    ಹಾಗೆ ನೋಡಿದರೆ ಅಣ್ವಸ್ತ್ರ ಯುದ್ಧ ಮತ್ತು ಸಮೂಹನಾಶದ ಅಪಾಯವನ್ನು ಜಗತ್ತು ಎದುರಿಸಿದ್ದು ಇದೇ ಮೊದಲೇನಲ್ಲ. ಇದುವರೆಗೆ ಸಮೂಹನಾಶಕ ಅಸ್ತ್ರವಾಗಿ ಅಣ್ವಸ್ತ್ರ ಬಳಕೆಯಾಗಿರುವುದು ಎರಡೇ ಸಲವಾದರೂ, ಬೆದರಿಕೆಯ ಅಸ್ತ್ರವಾಗಿ ಅದು ಹಲವಾರು ಬಾರಿ ಅಂತಾರಾಷ್ಟ್ರೀಯ ಸಾಮರಿಕ ರಾಜಕಾರಣದಲ್ಲಿ ಉಪಯೋಗಿಸಲ್ಪಟ್ಟಿದೆ. ದ್ವಿತೀಯ ಮಹಾಯುದ್ಧದ ದಿನಗಳಲ್ಲಿ ಅಣ್ವಸ್ತ್ರಗಳನ್ನು ಗಳಿಸಿಕೊಳ್ಳುವ ಪ್ರಯತ್ನದಲ್ಲಿ ಜರ್ಮನಿ, ಬ್ರಿಟನ್, ಸೋವಿಯೆತ್ ಯೂನಿಯನ್ ತೀವ್ರತರಹದ ಪ್ರಯತ್ನ ನಡೆಸಿದ್ದರೂ ಯಶಸ್ವಿಯಾದದ್ದು ಅಮೆರಿಕಾ. ಅಣ್ವಸ್ತ್ರಗಳನ್ನು ಬಳಸಿದ್ದೂ ಅದೇ. ಆ ಬಳಕೆ ಜಪಾನ್ ಮೇಲಾದರೂ ಅದರ ಅಂತಿಮ ಗುರಿಯಾಗಿದ್ದದ್ದು ಸೋವಿಯೆತ್ ಯೂನಿಯನ್. ಇದೊಂದು ಆಸಕ್ತಿಕರ ಪ್ರಕರಣ.

    1945ನೇ ಇಸವಿ ಆರಂಭವಾಗುತ್ತಿದ್ದಂತೇ ಜರ್ಮನಿಯ ಸೋಲು ನಿಶ್ಚಿತವೆನಿಸತೊಡಗಿತ್ತು. ಆಗ ಯುದ್ಧಾನಂತರದ ಜಾಗತಿಕ ವ್ಯವಸ್ಥೆ ಹೇಗಿರಬೇಕೆಂದು ತೀರ್ವನಿಸಲು ಅಮೆರಿಕಾ, ಬ್ರಿಟನ್ ಮತ್ತು ಸೋವಿಯೆತ್ ನಾಯಕರು ಕಪ್ಪು ಸಮುದ್ರ ತೀರದ ಯಾಲ್ಟಾದಲ್ಲಿ ಫೆಬ್ರವರಿ 5-11ರಲ್ಲಿ ಸಭೆ ಸೇರಿದರು. ಆಗ ಅಮೆರಿಕಾದ ಮುಂದಿದ್ದ ದೊಡ್ಡ ಸವಾಲೆಂದರೆ ಜರ್ಮನಿ ಸೋತ ನಂತರವೂ ಯುದ್ಧವನ್ನು ಇನ್ನೂ ಒಂದೂವರೆ ವರ್ಷಗಳಷ್ಟು ಕಾಲ ಮುಂದುವರಿಸಬಲ್ಲ ಶಸ್ತ್ರಾಸ್ತ್ರಪೂರೈಕೆ ಮತ್ತು ಸಂಪನ್ಮೂಲಗಳಿದ್ದ ಜಪಾನ್ ಅನ್ನು ಹೇಗೆ ಶೀಘ್ರವಾಗಿ ಮಣಿಸುವುದು ಎನ್ನುವುದಾಗಿತ್ತು. ಸೋವಿಯೆತ್ ಸಹಕಾರವಿಲ್ಲದೇ ಅದು ಸಾಧ್ಯವಾಗದು ಎಂದು ತೀರ್ವನಿಸಿದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್​ವೆಲ್ಟ್ ಸಹಕಾರಕ್ಕಾಗಿ ಸೋವಿಯೆತ್ ನಾಯಕ ಜೋಸೆಫ್ ಸ್ಟಾಲಿನ್ ಮುಂದೆ ಬೇಡಿಕೆಯಿತ್ತರು. ಅದಕ್ಕೆ ಸಮ್ಮತಿಸಿದ ಸ್ಟಾಲಿನ್, ಯೂರೋಪ್​ನಲ್ಲಿ ಯುದ್ಧ ಮುಕ್ತಾಯವಾದ ನಂತರ ತಮ್ಮ ಸೇನೆಯನ್ನು ಪೆಸಿಫಿಕ್ ತೀರಕ್ಕೆ ಸಾಗಿಸಿ ಯುದ್ಧ ಆರಂಭಿಸಲು ಕನಿಷ್ಟ ಮೂರು ತಿಂಗಳುಗಳು ಬೇಕಾಗುತ್ತವೆ ಎಂದು ಹೇಳಿದರು.

    ಮೇ 8ರಂದು ಜರ್ಮನಿಯ ಶರಣಾಗತಿಯೊಂದಿಗೆ ಯೂರೋಪ್​ನಲ್ಲಿ ಯುದ್ಧವೇನೋ ಮುಕ್ತಾಯವಾಯಿತು. ಯಾಲ್ಟಾದಲ್ಲಿ ಕೊಟ್ಟ ಮಾತಿಗನುಗುಣವಾಗಿ ಆಗಸ್ಟ್ ಮಧ್ಯದ ಹೊತ್ತಿಗೆ ಸೋವಿಯತ್ ಸೇನೆ ಉತ್ತರದಿಂದ ಜಪಾನ್ ಮೇಲೆ ಎರಗಬೇಕಾಗಿತ್ತು. ಆದರೆ ಮೇ-ಜುಲೈ ಅವಧಿಯಲ್ಲಿ ಯೂರೋಪ್​ನಲ್ಲಿ ಅಮೆರಿಕಾಗೆ ಅನಿರೀಕ್ಷಿತ ಹಾಗೂ ಅಪಥ್ಯವೆನಿಸುವ ಕೆಲವು ಬೆಳವಣಿಗೆಗಳು ಘಟಿಸಿದವು. ತಾನು ನಾಜಿ ಆಕ್ರಮಣದಿಂದ ವಿಮೋಚನೆಗೊಳಿಸಿದ್ದ ಪೂರ್ವ ಯೂರೋಪಿಯನ್ ದೇಶಗಳೆಲ್ಲವುಗಳಲ್ಲಿಯೂ ಸ್ಟಾಲಿನ್ ಮಹಾಶಯ ಕಮ್ಯೂನಿಸ್ಟ್ ಕೈಗೊಂಬೆಗಳನ್ನು ಗದ್ದುಗೆಗೇರಿಸಿಬಿಟ್ಟರು! ಜತೆಗೆ, ತಾನು ಆಕ್ರಮಿಸಿಕೊಂಡ ಜರ್ಮನಿಯ ಪೂರ್ವ ಭಾಗದಲ್ಲೂ ಕಮ್ಯೂನಿಸ್ಟ್ ವ್ಯವಸ್ಥೆಗೆ ಮಾಸ್ಕೋ ಹಂತಹಂತದ ಯೋಜನೆ ಆರಂಭಿಸಿತು. ಅಂದರೆ ಜರ್ಮನಿಯ ವಿಭಜನೆ ಮತ್ತು ಪೂರ್ವಭಾಗದಲ್ಲಿ ಸೋವಿಯೆತ್ ಕೈಗೊಂಬೆ ಕಮ್ಯೂನಿಸ್ಟ್ ಸರ್ಕಾರದ ಸ್ಥಾಪನೆ ನಿಶ್ಚಿತವೆಂದಾಯಿತು. ಇದು ಮುಂದೆ ಜಪಾನ್​ನಲ್ಲಿ ಏನಾಗಬಹುದೆಂಬುದರ ಸೂಚನೆಯನ್ನು ಅಮೆರಿಕಾಗೆ ನೀಡಿತು.

    ಜಪಾನ್ ವಿರುದ್ಧ ಸೋವಿಯೆತ್ ಸೇನೆ ರಣರಂಗಕ್ಕಿಳಿದರೆ ಜರ್ಮನಿಯಲ್ಲಿ ಮಾಡಿದಂತೆ ಅದು ಉತ್ತರ ಜಪಾನ್​ನ ಹೊಕ್ಕೈಡೋ ದ್ವೀಪದ ಜತೆ ಹಾನ್ಷು ದ್ವೀಪದ ಉತ್ತರಾರ್ಧ ಭಾಗವನ್ನೂ ಆಕ್ರಮಿಸಿಕೊಂಡು ಅಲ್ಲಿ ಕಮ್ಯೂನಿಸ್ಟ್ ಕೈಗೊಂಬೆ ಸರ್ಕಾರ ಸ್ಥಾಪಿಸಿಕೊಳ್ಳುವುದು ಮತ್ತು ಆ ಕಾರಣದಿಂದ ಜರ್ಮನಿಯಂತೇ ಜಪಾನ್​ನ ವಿಭಜನೆ ಸಹಾ ಆಗಿಹೋಗುವುದು ನಿಶ್ಚಿತ ಎಂದು ಅಮೆರಿಕಾದ ಹೊಸ ಅಧ್ಯಕ್ಷ ಹ್ಯಾರಿ ಟ್ರೂಮನ್ ರ್ತಸಿದರು. ಆಗ ಪಕ್ಕದ ಕೊರಿಯಾ ಪರ್ಯಾಯದ್ವೀಪದಲ್ಲಿ ಘಟಿಸುತ್ತಿದ್ದ ಬೆಳವಣಿಗೆಗಳು ಉತ್ತರ ಕೊರಿಯಾದಂತೇ ಉತ್ತರ ಜಪಾನ್ ಎಂಬ ಹೊಸ ಕಮ್ಯೂನಿಸ್ಟ್ ದೇಶದ ಹುಟ್ಟಿನ ಸ್ಪಷ್ಟ ಸೂಚನೆಯನ್ನು ಶ್ವೇತಭವನಕ್ಕೆ ನೀಡಿದವು.

    ಹೀಗಾಗಬಾರದು ಎಂದರೆ ಹೊಕ್ಕೈಡೋ ಮೇಲೆ ಸೋವಿಯೆತ್ ಸೇನೆ ಎರಗುವ ಮೊದಲೇ ಜಪಾನ್ ಶರಣಾಗತಗೊಳ್ಳುವಂತೆ ಮಾಡುವುದು ಅಮೆರಿಕಾಗೆ ಅತ್ಯಗತ್ಯವಾಯಿತು. ಹೀಗಾಗಿಯೇ ಜುಲೈ 16, 1945ರಂದು ಅಣ್ವಸ್ತ್ರಪರೀಕ್ಷೆ ಯಶಸ್ವಿಯಾದೊಡನೇ ನವಅಸ್ತ್ರಗಳನ್ನು ರಣರಂಗದಲ್ಲಿ ಪ್ರಯೋಗಿಸುವ ತಯಾರಿಯನ್ನು ತರಾತುರಿಯಲ್ಲಿ ಆರಂಭಿಸಿದ ಅಮೆರಿಕಾ ಅದರಲ್ಲೂ ಯಶಸ್ವಿಯಾಗಿ ಆಗಸ್ಟ್ 6 ಮತ್ತು 9ರಂದು ಹಿರೋಷಿಮಾ ಮತ್ತು ನಾಗಸಾಕಿಗಳ ಮೇಲೆ ಅಣ್ವಸ್ತ್ರ ದಾಳಿಯೆಸಗಿ ಜಪಾನನ್ನು ಕಂಗೆಡಿಸಿ ಅದು ಶರಣಾಗತಗೊಳ್ಳುವಂತೆ ಮಾಡಿಬಿಟ್ಟಿತು ಮತ್ತು ನಿಮ್ಮ ಸಹಕಾರದ ಅಗತ್ಯ ಇಲ್ಲವೆಂದು ಸ್ಟಾಲಿನ್​ಗೆ ಸೂಚನೆ ಕಳುಹಿಸಿತು. ಸೋವಿಯೆತ್ ಸೇನೆಗೆ ದಕ್ಕಿದ್ದು ಕಳೆದ ನಲವತ್ತು ವರ್ಷಗಳಿಂದ ಜಪಾನ್ ಹಿಡಿದುಕೊಂಡಿದ್ದ ದಕ್ಷಿಣ ಸಖಾಲಿನ್ ದ್ವೀಪ ಮತ್ತು ಜಪಾನ್​ನವೇ ಅದ ನಾಲ್ಕು ಪುಟಾಣಿ ಕುರೈಲ್ ನಡುಗಡ್ಡೆಗಳು ಮಾತ್ರ. ಹೀಗೆ ಎರಡು ಶತ್ರುರಾಷ್ಟ್ರಗಳಾಗಿ ವಿಭಜನೆಗೊಳ್ಳುವುದರಿಂದ ಜಪಾನ್ ಬಚಾವಾಯಿತು. ಆದರೆ ಅದಕ್ಕಾಗಿ ಜಪಾನೀಯರು ತೆತ್ತ ಬೆಲೆ ಮಾತ್ರ ಅಗಾಧ ಎನ್ನುವುದು ನೋವಿನ ಸಂಗತಿ.

    ನಂತರ ಅಣ್ವಸ್ತ್ರ ಅಪಾಯದ ಹೊಸ್ತಿಲಲ್ಲಿ ಜಗತ್ತು ಹಲಬಾರಿ ನಿಂತದ್ದುಂಟು. ಅವುಗಳಲ್ಲಿ ಪ್ರಮುಖವಾದುವು ಇವು-

    1947-48ರಲ್ಲಿ ತನ್ನ ಹಿಡಿತದಲ್ಲಿದ್ದ ಪೂರ್ವ ಬರ್ಲಿನ್ ಮೇಲೆ ಮಾಸ್ಕೋ ದಿಗ್ಬಂಧನ ವಿಧಿಸಿದಾಗ ಬರ್ಲಿನಿಗರಿಗೆ ಅಗತ್ಯವಸ್ತುಗಳನ್ನು ಅಮೆರಿಕಾ ಎಂಟು ತಿಂಗಳ ಕಾಲ ವಿಮಾನಗಳ ಮೂಲಕ ಪೂರೈಸಿತು. ಅಮೆರಿಕನ್ ವಿಮಾನಗಳನ್ನು ಸೋವಿಯೆತ್ ಯೂನಿಯನ್ ತಡೆದಿದ್ದರೆ ಅದರ ಮೇಲೇ ಅಣ್ವಸ್ತ್ರ ಪ್ರಯೋಗಿಸುವ ಬೆದರಿಕೆಯನ್ನು ಅಮೆರಿಕಾ ಒಡ್ಡಿತ್ತು. ಆ ಬೆದರಿಕೆ ಹುಸಿಯೇನಲ್ಲ ಎಂದರಿತಿದ್ದ ಸ್ಟಾಲಿನ್​ಗೆ ಕೈಕೈ ಹಿಸುಕಿಕೊಂಡು ಕೂರದೇ ಬೇರೆ ಮಾರ್ಗವಿರಲಿಲ್ಲ. ಶೀಘ್ರವಾಗಿ ತಾನೂ ಅಣ್ವಸ್ತ್ರ ಗಳಿಸಿಕೊಳ್ಳಬೇಕೆಂದು ಅವರನ್ನು ಪ್ರೇರೇಪಿಸಿದ್ದು ಆ ಪ್ರಕರಣ. ಕೊನೆಗೆ ಸೋವಿಯೆತ್ ವಿಜ್ಞಾನಿಗಳಿಂದ ಆಗದ್ದನ್ನು ಕೆಜಿಬಿ ಬೇಹುಗಾರರು ಸಾಧಿಸಿದರು. ಅಮೆರಿಕಾದ ಅಣುಸಂಯಂತ್ರವೊಂದರಿಂದಲೇ ಅವರು ಕದ್ದುತಂದ ಅಣ್ವಸ್ತ್ರ ನಮೂನೆ ಸೋವಿಯೆತ್ ಯೂನಿಯನ್ 1949ರಲ್ಲಿ ಅಣ್ವಸ್ತ್ರ ರಾಷ್ಟ್ರವಾಗಲು ಸಹಕಾರಿಯಾಯಿತು.

    ನಂತರ ಏಪ್ರಿಲ್-ಜುಲೈ 1954ರಲ್ಲಿ ದಿಯಾನ್ ಬಿಯಾನ್ ಫೂ ಸೇನಾಠಿಕಾಣೆಯಲ್ಲಿದ್ದ ಫ್ರೆಂಚ್ ವಸಾಹತುಶಾಹಿ ಸೇನೆಯನ್ನು ವಿಯೆಟ್ನಾಮೀ ವಿಮೋಚನಾ ಸೇನೆ ಸುತ್ತುವರಿದು ನಿಂತಾಗ ಫ್ರೆಂಚರಿಗೆ ಸಹಕಾರಿಯಾಗಲೆಂದು ಐಸೆನ್​ಹೋವರ್ ಸರ್ಕಾರ ಸಣ್ಣಪ್ರಮಾಣದ ಅಣ್ವಸ್ತ್ರ ಪ್ರಯೋಗಿಸಲು ಆಲೋಚಿಸಿತ್ತು. ಸುದೈವ, ಅದಾಗಲಿಲ್ಲ. ಆದರೆ 1962ರ ಕ್ಯೂಬ ಕ್ಷಿಪಣಿ ಸಂಕಟ ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಜಗತ್ತು ಅಮೆರಿಕಾ-ಸೋವಿಯೆತ್ ಯೂನಿಯನ್ ನಡುವಿನ ಅಣ್ವಸ್ತ್ರ ಸಮರದಿಂದ ಕೊನೇಗಳಿಗೆಯಲ್ಲಿ ಬಚಾವಾಯಿತು. ಅಂತಹ ಇನ್ನೊಂದು ಆತಂಕದ ಗಳಿಗೆ ಎದುರಾದದ್ದು ನವೆಂಬರ್ 1983ರಲ್ಲಿ. ನ್ಯಾಟೋ ಪಡೆಗಳು ಯೂರೋಪ್​ನಲ್ಲಿ ಏಬ್ಲ್ ಆರ್ಚರ್ ಎಂಬ ಅಣ್ವಸ್ತ್ರ ಸಮರಾಭ್ಯಾಸ ಆರಂಭಿಸಿದಾಗ ಅದು ತನ್ನ ಮೇಲಿನ ಅಣ್ವಸ್ತ್ರ ದಾಳಿಯ ತಯಾರಿ ಎಂದು ತಿಳಿದು ಸೋವಿಯೆತ್ ಯೂನಿಯನ್ ತನ್ನ ಕ್ಷಿಪಣಿಗಳನ್ನು ಸನ್ನದ್ಧಗೊಳಿಸಿದ್ದಲ್ಲದೇ ವಿಮಾನಗಳಿಗೂ ಅಣ್ವಸ್ತ್ರ ಹೇರಿ, ಅವುಗಳನ್ನು ವಾಯುಗಡಿಯಲ್ಲಿ ಹಾರಾಡಲು ಕಳಿಸಿ, ಆಜ್ಞೆಗಾಗಿ ಕಾಯಿರಿ ಎಂದು ಪೈಲಟ್​ಗಳಿಗೆ ಆದೇಶಿಸಿತ್ತು! ಸದ್ಯ ಕೊನೇಗಳಿಗೆಯಲ್ಲಿ ಎರಡೂ ಪಕ್ಷಗಳಿಗೆ ವಿವೇಕೋದಯವಾಗಿ ನಾವೆಲ್ಲಾ ಬದುಕಿಕೊಂಡೆವು.

    ಈ ಎಲ್ಲಾ ಪ್ರಕರಣಗಳಿಗಿಂತಲೂ ಇಂದಿನ ಪ್ರಕರಣ ಹೆಚ್ಚು ಅಪಾಯಕಾರಿ. ಯಾಕೆಂದರೆ ಈಗ ಒಂದೇ ಸಮಯದಲ್ಲಿ ಎರಡು ರಣರಂಗಗಳು ಸೃಷ್ಟಿಯಾಗುತ್ತಿವೆ! ಈ ಆತಂಕದಲ್ಲಿ ಜಗತ್ತು ಬಳಲುತ್ತಿರುವಾಗಲೇ ಹೊಸವರ್ಷದ ಉಡುಗೊರೆಯೊಂದು ಅಣ್ವಸ್ತ್ರ ರಾಷ್ಟ್ರಗಳಿಂದ ಬಂದಿದೆ. ಇದೇ ಜನವರಿ 3, 2022ರಂದು ಐದು ಅಧಿಕೃತ ಅಣ್ವಸ್ತ್ರ ರಾಷ್ಟ್ರಗಳಾದ ಅಮೆರಿಕಾ, ರಶಿಯಾ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ಜಂಟಿ ಹೇಳಿಕೆ ಹೊರಡಿಸಿವೆ. ಅದರಲ್ಲಿನ ಮೂರು ಅಂಶಗಳಿವು- 1. ಅಣ್ವಸ್ತ್ರಯುದ್ಧಗಳನ್ನು ಗೆಲ್ಲಲಾಗದು, 2. ಅಣ್ವಸ್ತ್ರಯುದ್ಧ ನಮ್ಮ ಆಯ್ಕೆಯಲ್ಲ, 3. ಅಣ್ವಸ್ತ್ರಪ್ರಸರಣವನ್ನು ತಡೆಯಲೇಬೇಕು.

    ಇದರರ್ಥ ಅಣ್ವಸ್ತ್ರಯುದ್ಧ ತರಬಹುದಾದ ವಿನಾಶದ ಅರಿವು ಬೃಹದ್​ರಾಷ್ಟ್ರಗಳಿಗೆ ಮತ್ತೊಮ್ಮೆ, ಒಟ್ಟಿಗೆ, ದೊಡ್ಡದಾಗಿ ಆಗಿದೆ! ಐದೂ ರಾಷ್ಟ್ರಗಳ ನಡುವೆ ಈ ಬಗ್ಗೆ ತೆರೆಯ ಮರೆಯಲ್ಲಿ ಮಾತುಕಥೆಗಳೂ ಆಗಿವೆ ಎಂದೂ ಇದು ಹೇಳುತ್ತದೆ. ಸದ್ಯ, ಜಗತ್ತಿನ ಹಣೆಬರಹ ಬರೆಯಬಲ್ಲ ದೊಡ್ಡಮನುಷ್ಯರುಗಳು ಬಹಿರಂಗದ ಬೆದರಿಕೆಗಳ ಹಿಂದೆಯೇ ರಹಸ್ಯವಾಗಿ ಶಾಂತಿಮಾತುಗಳನ್ನೂ ಆಡುತ್ತಿದ್ದಾರೆ! ಇದು ಸದ್ಯಕ್ಕೆ ನೆಮ್ಮದಿಯ ವಿಷಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts