ಪಾರ್ಕ್​ ಮಾಡಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಲ್ಲದೆ ವ್ಯಕ್ತಿಯೊಬ್ಬನನ್ನು 100 ಮೀ. ಎಳೆದೊಯ್ದ ಎಸ್‌ಯುವಿ ಕಾರು!

SUV
Published on

ನವದೆಹಲಿ: ರಸ್ತೆ ಪಕ್ಕ ಪಾರ್ಕ್​ ಮಾಡಿದ್ದ ವಾಹನಗಳಿಗೆ ಸರಣಿ ಅಪಘಾತ ಮಾಡಿದ್ದಲ್ಲದೆ, ವ್ಯಕ್ತಿಯೊಬ್ಬನನ್ನು ಸುಮಾರು 100 ಮೀಟರ್​ವರಗೆ ಟೊಯೊಟಾ ಫಾರ್ಚುನರ್​ ಕಾರೊಂದು ಎಳೆದುಕೊಂಡು ಹೋದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ದೆಹಲಿ ಕರೊಲ್​ ಬಾಘ್​ ಏರಿಯಾದಲ್ಲಿ ಸೋಮವಾರ (ಸೆ.19) ರಾತ್ರಿ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಹಿಳೆಯೊಬ್ಬಳು ರಸ್ತೆ ಒಂದು ಬದಿಯಲ್ಲಿ ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವೇಳೆ ಎಸ್​ಯುವಿ ಕಾರು ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಪಾರ್ಕ್​ ಮಾಡಿರುವ ವಾಹನಗಳನ್ನು ಡಿಕ್ಕಿ ಹೊಡೆದುಕೊಂಡು ಮುಂದೆ ಸಾಗುತ್ತದೆ. ಅಲ್ಲದೆ, ಕಾರಿನ ಅಡಿಗೆ ಸಿಲುಕುವ ವ್ಯಕ್ತಿಯೊಬ್ಬನ್ನನು 100 ಮೀಟರ್​ ದೂರ ಎಳೆದುಕೊಂಡು ಬರುತ್ತದೆ. ಇದನ್ನು ನೋಡಿ ಅಲ್ಲಿದ್ದ ಜನರು ಒಂದು ಕ್ಷಣ ಶಾಕ್​ ಆಗುತ್ತಾರೆ. ಇದಿಷ್ಟು ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಹಾನಿಗೊಳಗಾದ ಕಾರುಗಳು ಮತ್ತು ದ್ವಿಚಕ್ರ ವಾಹನದ ಅವಶೇಷಗಳನ್ನು ಸಹ ವಿಡಿಯೋದಲ್ಲಿ ಕಾಣಬಹುದು. ಎಸ್‌ಯುವಿ ಕಾರು ಸದ್ಯ ಪೊಲೀಸರ ವಶದಲ್ಲಿದ್ದು, ಚಾಲಕ ನಾಪತ್ತೆಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net