More

    ಕೈ ಸ್ವಚ್ಛವಾಗಿಟ್ಟುಕೊಳ್ಳೋಣ: ಮನೋಲ್ಲಾಸ

    | ಗುರುನಾಥ ಸುತಾರ ಹುಲ್ಯಾಳ

    ಅದೊಂದು ಪುಟ್ಟದೇಶ. ಯಾರೇ ತಪ್ಪು ಮಾಡಿದರೂ ಆ ದೇಶದ ರಾಜ ಕಠಿಣ ಶಿಕ್ಷೆಗೆ ಗುರಿಪಡಿಸುತ್ತಿದ್ದ. ಒಮ್ಮೆ ಆ ದೇಶದಲ್ಲಿ ಒಂದು ಮನೆ ಕಳ್ಳತನವಾಯಿತು. ಕೆಲವೇ ದಿನಗಳಲ್ಲಿ ರಾಜಭಟರು ಕಳ್ಳತನ ಮಾಡಿದ ವ್ಯಕ್ತಿಯನ್ನು ಬಂಧಿಸಿ ರಾಜನ ಬಳಿಗೆ ತಂದರು. ‘ಈತ ಈ ರಾತ್ರಿ ಜೈಲಿನಲ್ಲಿರಲಿ, ನಾಳೆ ಬೆಳಗ್ಗೆ 7 ಗಂಟೆಗೆ ಗಲ್ಲುಗಂಬಕ್ಕೆ ಏರಿಸಿ’ ಎಂದು ರಾಜ ಆಜ್ಞೆ ಮಾಡಿದ. ಗಾಬರಿಗೊಂಡ ಆ ಕಳ್ಳ ದುಃಖಿಸುತ್ತಿರುವಾಗ ಮಂತ್ರಿ ಬಂದು ವಿಚಾರಿಸಿದ. ‘ನನ್ನ ಹತ್ತಿರ ಕಬ್ಬಿಣವನ್ನು ಬಂಗಾರ ಮಾಡುವ ವಿದ್ಯೆ ಇದೆ. ನಾನು ಗಲ್ಲಿಗೆ ಏರುವಂತಾದರೆ ನಾನು ಈ ದೇಶ ಹಾಗೂ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಕಳ್ಳ ಅಳಲು ತೋಡಿಕೊಂಡ.

    ಮಂತ್ರಿಯು ರಾಜನಿಗೆ ಈ ವಿಷಯ ತಿಳಿಸಿದ. ರಾಜ ಗಲ್ಲು ಶಿಕ್ಷೆ ತಡೆಹಿಡಿದ. ದೇಶದ ಎಲ್ಲ ಜನರು ತಮ್ಮ ಮನೆಯಲ್ಲಿರುವ ಕಬ್ಬಿಣವನ್ನು ರಾಜಧಾನಿಗೆ ತೆಗೆದುಕೊಂಡು ಬಂದು ಬಂಗಾರ ಮಾಡಿಕೊಂಡು ಹೋಗಬೇಕೆಂದು ಡಂಗುರ ಸಾರಿದ. ಜನರು ಕಬ್ಬಿಣವನ್ನು ಅರಮನೆ ಮೈದಾನದಲ್ಲಿ ಸಂಗ್ರಹಿಸಿದರು. ನಂತರ ರಾಜ ಹಾಗೂ ಮಂತ್ರಿಗಳು ಕಳ್ಳನನ್ನು ಕಬ್ಬಿಣದ ರಾಶಿ ಹತ್ತಿರ ಕರೆದುಕೊಂಡು ಹೋಗಿ, ಇದನ್ನು ಬಂಗಾರ ಮಾಡು ಎಂದರು. ಕೆಲವು ಕ್ಷಣ ಯೋಚಿಸಿದ ಕಳ್ಳ, ‘ಮಹಾರಾಜರೇ ನನ್ನ ಬಳಿ ಒಂದು ಚಿಕ್ಕ ಹಣ್ಣು ಇದೆ. ಈ ಹಣ್ಣಿನ ರಸವನ್ನು ಕೈಯಿಂದ ಹಿಸುಕಿ ಕಬ್ಬಿಣದ ಮೇಲೆ ಸಿಂಪಡಿಸಿದರೆ ಅದು ಬಂಗಾರವಾಗುತ್ತದೆ. ಆದರೆ, ಈ ಹಣ್ಣು ಹಿಸುಕುವವರ ಕೈ ಮಾತ್ರ ಸ್ವಚ್ಛವಾಗಿರಬೇಕು. ಸದಾ ಮತ್ತೊಬ್ಬರ ಹಣ ಕಳವು ಮಾಡಿ ನನ್ನ ಕೈ ಮಲಿನವಾಗಿದೆ. ನಿಮ್ಮಲ್ಲಿ ಯಾರ ಕೈ ಸ್ವಚ್ಛವಿದೆಯೋ ಅಂಥವರು ಮಾತ್ರ ಸಿಂಪಡಿಸಿ’ ಎಂದ.

    ಬಹುತೇಕ ಎಲ್ಲರ ಕೈಗಳು ಸಣ್ಣಪುಟ್ಟ ದೋಷಗಳಿಂದ ಮಲಿನವಾಗಿದ್ದರಿಂದ ಯಾರೂ ಮುಂದೆ ಬರಲಿಲ್ಲ. ಆಗ ರಾಜನು ಮಂತ್ರಿಯತ್ತ ತಿರುಗಿ, ‘ನೀವು ಹಣ್ಣಿನ ರಸವನ್ನು ಸಿಂಪಡಿಸಿರಿ’ ಎಂದ. ಆಗ ಮುಜುಗರಪಟ್ಟ ಮಂತ್ರಿ, ‘ನನ್ನ ಕೈ ಕೂಡ ಪರರ ಹಣ ಕಬಳಿಸಿ ಮಲಿನವಾಗಿದೆ. ತಾವೇ ಆ ಕೆಲಸ ಮಾಡಬೇಕು’ ಎಂದ. ರಾಜನೂ ಹಿಂದೆಮುಂದೆ ನೋಡುತ್ತಾ, ‘ಇಲ್ಲ ಮಂತ್ರಿಗಳೇ ನನ್ನ ಕೈ ಕೂಡ ಅನ್ಯಾಯದಿಂದ ಪರರ ಧನ ಮುಟ್ಟಿದೆ’ ಎಂದ. ಆಗ ಕಳ್ಳ, ‘ಮಹಾರಾಜರೇ ತಮ್ಮೆಲ್ಲರ ಕೈಗಳು ಸ್ವಚ್ಛವಿರದಿದ್ದರೂ ಇಷ್ಟೊಂದು ಸುಖೋಪಭೋಗದಲ್ಲಿದ್ದೀರಿ. ನನಗೆ ಮಾತ್ರ ಏಕೆ ಈ ಶಿಕ್ಷೆ’ ಎಂದ. ರಾಜನಿಗೆ ಜ್ಞಾನೋದಯವಾಗಿ, ಗಲ್ಲುಶಿಕ್ಷೆ ರದ್ದುಪಡಿಸಿದ.

    ನಾವು ಜೀವನದಲ್ಲಿ ಯಾರಿಗೇ ಉಪದೇಶ ಅಥವಾ ಮಾರ್ಗದರ್ಶನ ನೀಡಬೇಕಾದರೆ ನಮ್ಮ ನಡೆ-ನುಡಿ ಪವಿತ್ರವಾಗಿರಬೇಕು. ‘ಆಚಾರಕ್ಕೆ ಅರಸನಾಗು ನೀತಿಗೆ ಪ್ರಭುವಾಗು’ ಎಂಬಂತೆ ನಾವು ನಮ್ಮೆಲ್ಲರ ಕೈ-ಮನ ಸ್ವಚ್ಛವಾಗಿಟ್ಟುಕೊಳ್ಳೋಣ.

    (ಲೇಖಕರು ಹವ್ಯಾಸಿ ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts