

ಬೆಂಗಳೂರು: ನಿಶ್ವಿಕಾ ನಾಯ್ಡು ಸದ್ಯ ಸಂಭ್ರಮದಲ್ಲಿದ್ದಾರೆ. ಅದಕ್ಕೆ ಕಾರಣ ‘ಗುರು ಶಿಷ್ಯರು’ ಚಿತ್ರ. ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಇದುವರೆಗೂ ಅವರು ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ‘ಗುರು ಶಿಷ್ಯರು’ ಚಿತ್ರದಲ್ಲಿ ಲಂಗ ದಾವಣಿ ಧರಿಸಿ ಹಳ್ಳಿ ಹುಡುಗಿಯಾದ ಕಾರಣ ಚಿತ್ರದ ರಿಲೀಸ್ಗೆ ಎದುರು ನೋಡುತ್ತಿದ್ದಾರೆ.
ಇದೇ ಖುಷಿಯಲ್ಲಿ ‘ವಿಜಯವಾಣಿ’ ಜತೆ ಮಾತಿಗೆ ಸಿಕ್ಕ ಅವರು, ‘ರಜೆಗಳಲ್ಲಿ ಬೆಟ್ಟ, ಗುಡ್ಡ, ಕಾಡುಗಳಿಗೆ, ದೇವಸ್ಥಾನಕ್ಕೆ ಹೋದಾಗ ಹಳ್ಳಿಗಳನ್ನು ನೋಡುತ್ತಿದ್ದೆ ಅಷ್ಟೇ. ಆದರೆ, ಚಿತ್ರದ ಶೂಟಿಂಗ್ ವೇಳೆ ಹಳ್ಳಿ ಮನೆಗಳಲ್ಲಿ ಉಳಿದುಕೊಂಡಿದ್ದೆ. ಸುಜಾತಾ ನನ್ನ ಪಾತ್ರದ ಹೆಸರು. ಸೂಜಿ ಅಂತ ಎಲ್ಲರೂ ಕರೆಯುತ್ತಾರೆ. ಸೆಟ್ನಲ್ಲಿ ನಮ್ಮ ನಮ್ಮ ಪಾತ್ರದ ಹೆಸರುಗಳಿಂದ ಎಲ್ಲರನ್ನೂ ಕರೆಯುತ್ತಿದ್ದೆವು. ಎಲ್ಲರೂ ನೆಲದ ಮೇಲೆ ಕುಳಿತುಕೊಳ್ಳುತ್ತಿದ್ದೆವು. ಚಿತ್ರೀಕರಣಕ್ಕೂ ಮುನ್ನ ನಿರ್ದೇಶಕ ಜಡೇಶ್ ಮನೆಗೇ ಸೈಕಲ್ ಕಳಿಸಿ, ಕಲ್ಲು ಮಣ್ಣಿನ ರಸ್ತೆಯಲ್ಲಿ ಲಂಗ ದಾವಣಿಯಲ್ಲಿ ಪ್ರ್ಯಾಕ್ಟೀಸ್ ಮಾಡಲು ಹೇಳಿದ್ದರು. ‘ಆಣೆ ಮಾಡಿ ಹೇಳುತೀನಿ ...’ ಹಾಡಿನ ಚಿತ್ರೀಕರಣದಲ್ಲಿ ಮೂರು ದಿನಗಳ ಕರು ಎತ್ತಿಕೊಳ್ಳಬೇಕಿತ್ತು. ತುಂಬ ಭಯದಿಂದಲೇ ಆ ಸೀನ್ ಮಾಡಿದೆ’ ಎಂದು ಹೇಳಿಕೊಳ್ಳುತ್ತಾರೆ ನಿಶ್ವಿಕಾ.
ಅಂದಹಾಗೆ, ನಿಶ್ವಿಕಾ ಇಲ್ಲಿ ನಟ ರವಿಚಂದ್ರನ್ ಅಭಿಮಾನಿಯಂತೆ. ‘ನಾಯಕಿಯನ್ನು, ರವಿ ಸರ್ ತೋರಿಸಿರುವಂತೆ ಗ್ಲಾಮರಸ್ ಆಗಿ ಯಾರೂ ತೋರಿಸಿಲ್ಲ. ಆಗಿನ ಕಾಲದಲ್ಲಿ ರವಿಚಂದ್ರನ್ ಚಿತ್ರಗಳಲ್ಲಿ ನಟಿಸಿದ್ದ ನಾಯಕಿಯರು ತುಂಬ ಅದೃಷ್ಟವಂತರು. ‘ಹೆಣ್ಣಿಗೇ ಸೀರೆ ಯಾಕೆ ಅಂದ ...’ ಹಾಡು ನನಗೆ ತುಂಬ ಅಚ್ಚುಮೆಚ್ಚು. ಬರೀ ಸಿನಿಮಾದಲ್ಲಿ ಮಾತ್ರವಲ್ಲ, ನಿಜಜೀವನದಲ್ಲೂ ರವಿಚಂದ್ರನ್ ಅಂದರಿಷ್ಟ’ ಎಂದು ಹೇಳಿಕೊಳ್ಳುತ್ತಾರೆ ನಿಶ್ವಿಕಾ.
ನಿರ್ದೇಶಕ ಜಡೇಶ್ ಕೆ. ಹಂಪಿ ಖೋಖೋ ಕ್ರೀಡೆಯ ಹಿನ್ನೆಲೆಯಲ್ಲಿ ಕಥೆ ಹೆಣೆದಿದ್ದಾರೆ. ಅದರ ಕುರಿತು ಮಾತನಾಡುವ ನಿಶ್ವಿಕಾ, ‘ಶಾಲಾದಿನಗಳಲ್ಲಿ ಖೋಖೋ ಆಡಿದ್ದೆ. ಆದರೆ ಈ ಸಿನಿಮಾದಿಂದ ಕ್ರೀಡೆಯ ಬಗ್ಗೆ ಹೆಚ್ಚು ತಿಳಿದುಕೊಂಡೆ. ತರಬೇತುದಾರರು ಬಂದು ತರಬೇತಿ ನೀಡಿದರು. ಮೊದಲ ದಿನದ ಚಿತ್ರೀಕರಣದ ವೇಳೆ ಖೋಖೋ ಆಡಲು ಹೋಗಿ ಬಿದ್ದೆ. ಮೂರು ತಿಂಗಳು ಭುಜದ ನೋವಿತ್ತು’ ಎಂದು ನೆನಪಿಸಿಕೊಳ್ಳುತ್ತಾರೆ.
ಶರಣ್, ನಿಶ್ವಿಕಾ ಜತೆಗೆ ಶರಣ್ ಮಗ, ಪ್ರೇಮ್ ನವೀನ್ ಕೃಷ್ಣ, ಬುಲೆಟ್ ಪ್ರಕಾಶ್, ಶಾಸಕ ರಾಜೂ ಗೌಡ, ರವಿಶಂಕರ್ ಗೌಡ ಮಕ್ಕಳು ಸಹ ಚಿತ್ರದಲ್ಲಿ ನಟಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಅವರ ಜತೆಗಿನ ಒಡನಾಟ ನೆನಪಿಸಿಕೊಳ್ಳುವ ನಿಶ್ವಿಕಾ, ‘ಎಲ್ಲರೂ ತರಲೆ ಕೆಲಸ ಮಾಡಿ ನನ್ನನ್ನು ಸಿಕ್ಕಿಹಾಕಿಸುತ್ತಿದ್ದರು. ಯಾವ ನಟರ ಮಕ್ಕಳನ್ನೂ ನಾನು ನೋಡಿರಲಿಲ್ಲ. ಮೊದಲ ಬಾರಿ ಸೆಟ್ನಲ್ಲಿ ಗೊತ್ತಾಗಿ ಅವರಿಗೆಲ್ಲ ಇಷ್ಟು ದೊಡ್ಡ ಮಕ್ಕಳಿದ್ದಾರಾ ಅಂತ ಶಾಕ್ ಆಗಿದ್ದೆ. ಆದರೆ, ಎಲ್ಲರೂ ಪ್ರತಿಭಾವಂತರು’ ಎನ್ನುತ್ತಾರೆ. ಅಂದಹಾಗೆ, ‘ಗುರು ಶಿಷ್ಯರು’ ಇದೇ ಸೆ. 23ರಂದು ಬಿಡುಗಡೆಯಾಗಲಿದೆ.