

ಭೋಪಾಲ್: ನಾಯಿ ಮತ್ತು ಬೆಕ್ಕು ಸೇರಿದಂತೆ ಕೆಲವೊಂದು ಸಾಕು ಪ್ರಾಣಿಗಳು ಮನುಷ್ಯರಂತೆಯೇ ಮನೆಯಲ್ಲಿ ಆರಾಮವಾಗಿ ಓಡಾಡಿಕೊಂಡು ಇರುತ್ತವೆ. ವಿಶೇಷವಾಗಿ ನಾಯಿ ಹಾಗೂ ಬೆಕ್ಕು ಮಾಲೀಕರ ಹಿಂದೆ ಸುತ್ತವುದು, ಕಾಲಿಗೆ ಸಿಕ್ಕಿಕೊಳ್ಳುವುದು ಸಾಮಾನ್ಯ. ಇಂತಹ ಪ್ರಾಣಿಗೆ ಬೃಹತ್ ಗಾತ್ರದ ಕಟ್ಟಡಗಳನ್ನು ಸುಲಭವಾಗಿ ಏರುತ್ತವೆ. ಇಂತಹ ಪ್ರಾಣಿಗಳು ಮನೆಯಲ್ಲಿದ್ದರೆ ಅಚ್ಚರಿಯೇನಿಲ್ಲ.
ಆದರೆ, ಮನೆಯ ಹೊರಗೆ ಕೊಟ್ಟಿಗೆಯಲ್ಲಿ ವಾಸಿಸುವ ಎತ್ತು ಅಥವಾ ಗೂಳಿ ಮನೆಯೊಳಗಿನ ಬೆಡ್ರೂಮ್ನಲ್ಲಿ ಕುಳಿತಿದೆ ಅಂದರೆ ಯಾರು ನಂಬಲಾರರು. ಸಾಮಾನ್ಯವಾಗಿ ಗೃಹಪ್ರವೇಶದ ದಿನಗಳಲ್ಲಿ ಮಾತ್ರ ಈ ಪ್ರಾಣಿಗಳನ್ನು ಮನೆಯೊಳಗೆ ಕರೆತರುತ್ತಾರೆ. ಆದರೆ, ಇನ್ನಿತರ ದಿನಗಳಲ್ಲಿ ಅದರ ಸ್ಥಾನವೇನಿದ್ದರೂ ಮನೆಯ ಹೊರಗಡೆಯಷ್ಟೇ. ಆದರೆ, ಇಲ್ಲೊಂದು ಗೂಳಿ ಕಟ್ಟಡದ ಮೂರನೇ ಮಹಡಿಯನ್ನು ಏರಿ ಬೆಡ್ರೂಮ್ನಲ್ಲಿ ಕುಳಿತಿದೆ ಅಂದರೆ ಯಾರು ನಂಬುವುದಿಲ್ಲ. ಆದರೆ ನಾವು ಹೇಳುತ್ತಿರುವುದು ಸತ್ಯ.
ಮಧ್ಯಪ್ರದೇಶದಲ್ಲಿ ರೇವಾ ಏರಿಯಾದಲ್ಲಿ ಘಟನೆ ನಡೆದಿದ್ದು, ಮೂರನೇ ಮಹಡಿ ಏರಿ ಬಂದ ಎತ್ತು, ಸುಸ್ತಾಗಿ ಮನೆಯೊಂದರ ಬೆಡ್ ರೂಮಿಗೆ ತೆರಳಿ ವಿಶ್ರಾಂತಿ ಪಡೆದಿದೆ. ಮನೆಯವರು ಟಿವಿ ನೋಡುವುದರಲ್ಲಿ ನಿರತರಾಗಿದ್ದ ಸಮಯದಲ್ಲಿ ಎತ್ತು ಮನೆಯೊಳಗೆ ಬಂದಿದೆ. ಆದರೆ, ಇದು ಯಾರ ಗಮನಕ್ಕೂ ಬಂದಿಲ್ಲ. ಎತ್ತು ಇಕ್ಕಟಾದ ಮೆಟ್ಟಿಲುಗಳನ್ನು ಏರಿ ಬಂದಿದ್ದು ನಿಜಕ್ಕೂ ಅಚ್ಚರಿ. ಮೊದಲೇ ಸುಸ್ತಾಗಿದ್ದ ಹಸು ಮನೆಯೊಳಗೆ ನುಗ್ಗಿ ಬೆಡ್ ಮೇಲೆ ಮಲಗಿದೆ.
ಟಿವಿ ನೋಡುತ್ತಿದ್ದವರಲ್ಲಿ ಒಬ್ಬರು ಕೆಲ ಸಮಯದ ಬಳಿಕ ಕೋಣೆಗೆ ಬಂದಾಗ ಎತ್ತನ್ನು ನೋಡಿ ಗಾಬರಿಯಾಗಿದ್ದಾರೆ. ಬಳಿಕ ಎತ್ತನ್ನು ಮನೆಯಿಂದ ಹೊರಗೆ ಓಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (ಏಜೆನ್ಸೀಸ್)