ಯುವ ರೈಡರ್ ಭರತ್ ಭರ್ಜರಿ ಆಟ: ಜಯದ ಹಾದಿಗೆ ಮರಳಿದ ಬೆಂಗಳೂರು ಬುಲ್ಸ್

Bengaluru Bulls
Published on

ಬೆಂಗಳೂರು: ಯುವ ರೈಡರ್ ಭರತ್ (12 ಅಂಕ) ತೋರಿದ ಉತ್ತಮ ನಿರ್ವಹಣೆ ಬಲದಿಂದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯಲ್ಲಿ ಸತತ 2 ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳಿದೆ.

ಬುಧವಾರ (ಅ.19) ನಡೆದ ‘ಸದರ್ನ್ ಡರ್ಬಿ’ಯಲ್ಲಿ ತಮಿಳ್ ತಲೈವಾಸ್ ತಂಡವನ್ನು 45-28 ಅಂಕಗಳ ಅಂತರದಿಂದ ಮಣಿಸಿದ ಬೆಂಗಳೂರು ಬುಲ್ಸ್ ಟೂರ್ನಿಯಲ್ಲಿ ಮೂರನೇ ಗೆಲುವಿನ ಸಂಭ್ರಮ ಕಂಡಿತು.

ಉದ್ಯಾನನಗರಿಯ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಸಮಬಲ ಪ್ರದರ್ಶಿಸಿದವು. ಎಂಟನೇ ನಿಮಿಷದಲ್ಲಿ ಸೂಪರ್ ರೈಡ್ ಮಾಡಿದ ಬುಲ್ಸ್​ನ ಭರತ್ ಆಲೌಟ್ ಸೇರಿ 5 ಅಂಕ ಕಲೆ ಹಾಕಿ ಮುನ್ನಡೆ ತಂದರು.

ಮೊದಲಾರ್ಧ ಮುಕ್ತಾಯಕ್ಕೆ ಆತಿಥೇಯ ಬುಲ್ಸ್ 18-12ರಿಂದ ಮುನ್ನಡೆ ಸಾಧಿಸಿತು. ದ್ವಿತೀಯಾರ್ಧದಲ್ಲಿ ಇನ್ನಷ್ಟು ವೇಗವಾಗಿ ಅಂಕ ಕಲೆ ಹಾಕಿದ ಬುಲ್ಸ್ 26ನೇ ನಿಮಿಷದಲ್ಲಿ 3ನೇ ಬಾರಿಗೆ ತಲೈವಾಸ್ ತಂಡವನ್ನು ಆಲೌಟ್ ಮಾಡಿ ಪಂದ್ಯದಲ್ಲಿ ಹಿಡಿತ ಸಾಧಿಸಿತು. ನಂತರ ಆರ್ಭಟ ಮುಂದುವರಿಸಿದ ಬೆಂಗಳೂರು ರೈಡರ್​ಗಳು 38 ನಿಮಿಷಕ್ಕೆ ನಾಲ್ಕನೇ ಬಾರಿ ತಲೈವಾಸ್ ತಂಡವನ್ನು ಆಲೌಟ್ ಮಾಡಿ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net