ಟಿ20 ವಿಶ್ವಕಪ್​ಗೆ ವರುಣನ ಅವಕೃಪೆ? ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೂ ಮಳೆ ಭೀತಿ

Ind vs Pak
Published on

ಬ್ರಿಸ್ಬೇನ್/ಮೆಲ್ಬೋರ್ನ್: ಬಹುನಿರೀಕ್ಷಿತ ಟಿ20 ವಿಶ್ವಕಪ್ 8ನೇ ಆವೃತ್ತಿಯ ಅಸಲಿ ಹೋರಾಟ ಸೂಪರ್-12 ಹಂತದಿಂದ ಶುರುವಾಗಲಿದೆ. ಆದರೆ ಪ್ರಧಾನ ಸುತ್ತಿನ ಪ್ರಮುಖ ಪಂದ್ಯಗಳಿಗೆ ಮಳೆ ಅಡಚಣೆ ತರುವ ಸಾಧ್ಯತೆ ಇದ್ದು, ಟೂರ್ನಿಯ ಅಸಲಿ ಮಜಾವನ್ನು ಇದು ಕಸಿಯುವ ಭೀತಿ ಎದುರಾಗಿದೆ. ಆತಿಥೇಯ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ಹಾಲಿ ರನ್ನರ್​ಅಪ್ ನ್ಯೂಜಿಲೆಂಡ್ ತಂಡಗಳ ನಡುವೆ ಶನಿವಾರ ಸಿಡ್ನಿಯಲ್ಲಿ ನಡೆಯಲಿರುವ ಸೂಪರ್-12 ಹಂತದ ಮೊದಲ ಮುಖಾಮುಖಿ ಮತ್ತು ಭಾನುವಾರ ಮೆಲ್ಬೋರ್ನ್​ನಲ್ಲಿ ನಡೆಯಲಿರುವ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಗಳಿಗೂ ಮಳೆ ಅಡಚಣೆ ತರುವ ಭೀತಿ ಇದೆ. ಪೂರ್ವ ಮತ್ತು ಆಗ್ನೇಯ ಆಸ್ಟ್ರೇಲಿಯಾದ ಭಾಗದಲ್ಲಿ ಮಳೆಗಾಲ ಇನ್ನೂ ಮುಗಿದಿಲ್ಲ. ಹೀಗಾಗಿ ಸೂಪರ್-12 ಹಂತದ ಕೆಲ ಆರಂಭಿಕ ಪಂದ್ಯಗಳು ಮಳೆಯಿಂದ ತೊಂದರೆ ಎದುರಿಸಬೇಕಾಗುತ್ತದೆ.

ಸಿಡ್ನಿ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಕಳೆದ ಆವೃತ್ತಿಯ ಫೈನಲ್ ಪಂದ್ಯದ ಪುನರಾವರ್ತನೆ ಆಗಿರುವ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕೆ ಮಳೆ ಅಡಚಣೆ ತರುವ ಸಾಧ್ಯತೆ ಶೇ. 80ರಷ್ಟಿದೆ. ಪಂದ್ಯ ಸ್ಥಳೀಯ ಕಾಲಮಾನ ಪ್ರಕಾರ ಸಂಜೆ 6 ಗಂಟೆಗೆ ಶುರುವಾಗಲಿದ್ದು, ಅದೇ ದಿನ ಮಧ್ಯಾಹ್ನದ ನಂತರ ಮತ್ತು ಸಂಜೆ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದೆ.

ಭಾರತ-ಪಾಕಿಸ್ತಾನ ಪಂದ್ಯಕ್ಕೆ ಶೇ. 90 ಮಳೆ ಅಡ್ಡಿ ಸಾಧ್ಯತೆ

ಭಾರತ-ಪಾಕಿಸ್ತಾನ ತಂಡಗಳ ನಡುವೆ ಭಾನುವಾರ ಸ್ಥಳೀಯ ಕಾಲಮಾನ ಪ್ರಕಾರ ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1.30) ಪಂದ್ಯ ಶುರುವಾಗಲಿದ್ದು, ಆ ದಿನ ಮೆಲ್ಬೋರ್ನ್​ನಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 90ರಷ್ಟಿದೆ. ಐಸಿಸಿ ನಿಯಮಾವಳಿ ಪ್ರಕಾರ, ಫಲಿತಾಂಶಕ್ಕೆ ಕನಿಷ್ಠ 5 ಓವರ್​ಗಳ ಪಂದ್ಯ ಅಗತ್ಯವಿದೆ ಮತ್ತು ಲೀಗ್ ಹಂತದ ಪಂದ್ಯಗಳಿಗೆ ಮೀಸಲು ದಿನವೂ ಇರುವುದಿಲ್ಲ. ಹೀಗಾಗಿ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಳ್ಳಬೇಕಾಗುತ್ತದೆ.

ಹೋಬರ್ಟ್​ನಲ್ಲೂ ಮಳೆಯ ಭಯ

ವಿಶ್ವಕಪ್ ಮೊದಲ ಸುತ್ತಿನ ಬಿ ಗುಂಪಿನ ಪಂದ್ಯಗಳು ಹೋಬರ್ಟ್​ನಲ್ಲಿ ನಡೆಯುತ್ತಿದ್ದು, ಎಲ್ಲ ಪಂದ್ಯಗಳು ತಲಾ 1ರಲ್ಲಿ ಗೆದ್ದಿರುವ ಈ ಗುಂಪಿನಲ್ಲಿ ಶುಕ್ರವಾರದ ಕೊನೇ ಲೀಗ್ ಪಂದ್ಯಗಳು ನಿರ್ಣಾಯಕವಾಗಿವೆ. ಆದರೆ ಶುಕ್ರವಾರ ಹೋಬರ್ಟ್​ನಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 60ರಷ್ಟಿದೆ. ನಂತರದಲ್ಲಿ ಶನಿವಾರ-ಭಾನುವಾರ ಟೂರ್ನಿಯ ಸೂಪರ್-12 ಹಂತದ 3 ಪಂದ್ಯಗಳೂ ಹೋಬರ್ಟ್​ನಲ್ಲಿ ನಡೆಯಲಿದ್ದು, ಅದಕ್ಕೂ ಮಳೆ ಭೀತಿ ಇದೆ.

ಭಾರತ-ನ್ಯೂಜಿಲೆಂಡ್ ಅಭ್ಯಾಸ ಪಂದ್ಯ ರದ್ದು

ಬ್ರಿಸ್ಬೇನ್​ನ ಬುಧವಾರ ನಿಗದಿಯಾಗಿದ್ದ ಭಾರತ-ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ಒಂದೂ ಎಸೆತವನ್ನು ಕಾಣದೆ ರದ್ದುಗೊಂಡಿತು. ಪಾಕಿಸ್ತಾನ-ಅಫ್ಘಾನಿಸ್ತಾನ ನಡುವೆ ಗಾಬಾ ಕ್ರೀಡಾಂಗಣದಲ್ಲಿ ನಡೆದ ದಿನದ ಮೊದಲ ಪಂದ್ಯದ ನಡುವೆ ಮಳೆ ಶುರುವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಆಫ್ಘನ್ 6 ವಿಕೆಟ್​ಗೆ 154 ರನ್ ಗಳಿಸಿದರೆ, ಪ್ರತಿಯಾಗಿ ಪಾಕ್ 2.2 ಓವರ್​ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದ್ದಾಗ ಮಳೆ ಕಾಡಿತು. ನಂತರ ಪಂದ್ಯ ಮುಂದುವರಿಯದೆ ರದ್ದುಗೊಂಡಿತು. ನಂತರ ಬಾಂಗ್ಲಾದೇಶ-ದಕ್ಷಿಣ ಆಫ್ರಿಕಾ ನಡುವಿನ ದಿನದ 2ನೇ ಪಂದ್ಯವೂ ಒಂದೂ ಎಸೆತ ಕಾಣದೆ ರದ್ದುಗೊಂಡಿತು. ಇದರಿಂದಾಗಿ ಭಾರತ-ಕಿವೀಸ್ ತಂಡಗಳು ದಿನದ 3ನೇ ಪಂದ್ಯಕ್ಕಾಗಿ ಕನಿಷ್ಠ ಕ್ರೀಡಾಂಗಣಕ್ಕೂ ತೆರಳಲಿಲ್ಲ. ವಿಶ್ವಕಪ್​ನಲ್ಲಿ ಸೂಪರ್-12 ಹಂತದ ಆರಂಭಕ್ಕೆ ಮುನ್ನ ಭಾರತಕ್ಕೆ ಇದು ಕೊನೇ ಅಭ್ಯಾಸ ಪಂದ್ಯವಾಗಿತ್ತು. ಇನ್ನೀಗ ನೇರವಾಗಿ ವಿಶ್ವಕಪ್ ಅಭಿಯಾನ ಆರಂಭಿಸಬೇಕಾಗಿದೆ.

6 ಪಂದ್ಯ ಕ್ಯಾನ್ಸಲ್! ಟೂರ್ನಿಯ ಮೊದಲ ಸುತ್ತು ಮತ್ತು ಸೂಪರ್-12ಕ್ಕೆ ಮುನ್ನ 15 ಅಭ್ಯಾಸ ಪಂದ್ಯಗಳು ನಿಗದಿಯಾಗಿದ್ದವು. ಈ ಪೈಕಿ 7 ಪಂದ್ಯಗಳು ರದ್ದುಗೊಂಡಿವೆ. ಅದರಲ್ಲೂ ಅ. 12-13ರಂದು ಮೆಲ್ಬೋರ್ನ್​ನಲ್ಲಿ 4 ಪಂದ್ಯಗಳು ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದವು.

ಭಾರತ ವಿಶ್ವಕಪ್ ಟ್ರೋಫಿಯೊಂದನ್ನು ಗೆದ್ದು ಹಲವು ವರ್ಷಗಳೇ ಕಳೆದಿವೆ. ಇದೀಗ ಮತ್ತೆ ವಿಶ್ವಕಪ್ ಗೆಲ್ಲಲು ಹಲವು ವಿಷಯಗಳು ಸರಿಯಾಗಿ ಕೂಡಿಬರಬೇಕಿದೆ. ನಮಗೆ ಎದುರಾಗುವ ಪ್ರತಿ ಎದುರಾಳಿಯ ಮೇಲಷ್ಟೇ ಗಮನಹರಿಸುತ್ತೇವೆ. ಈಗಲೇ ಸೆಮೀಸ್ ಅಥವಾ ಫೈನಲ್ ಬಗ್ಗೆ ಯೋಚಿಸುತ್ತಿಲ್ಲ. ನನಗೆ ನಾಯಕನಾಗಿ ಇದು ಮೊದಲ ವಿಶ್ವಕಪ್ ಆಗಿರುವುದರಿಂದ ಸಾಕಷ್ಟು ಕಾತರದಿಂದಿರುವೆ. | ರೋಹಿತ್ ಶರ್ಮ ಟೀಮ್ ಇಂಡಿಯಾ ನಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net