ಆಸ್ಪತ್ರೆಯಲ್ಲಿ ಏರ್​ ಕೂಲರ್​ ಆನ್​ ಮಾಡಿ ಮಲಗಿದ ವ್ಯಕ್ತಿಗೆ ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಬಾರಿಸಿದ ಮಹಿಳಾ ಸಿಬ್ಬಂದಿ

Woman cruel
Published on

ರಾಯ್ಪುರ್​: ಆಸ್ಪತ್ರೆಯಲ್ಲಿ ಏರ್​ ಕೂಲರ್​ ಆಫ್​ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಸಿಬ್ಬಂದಿ ಒಬ್ಬರು, ವ್ಯಕ್ತಿಯೊಬ್ಬನಿಗೆ ಚಪ್ಪಲಿಯಿಂದ ಬಾರಿಸಿ, ಕಾಲಿನಿಂದ ಒದ್ದು ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಛತ್ತೀಸ್​ಗಢದ ಆಸ್ಪತ್ರೆಯೊಂದರಲ್ಲಿ ಕಳೆದ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಛತ್ತೀಸ್​ಗಢದ ಸುರ್ಗುಜಾ ಜಿಲ್ಲೆಯ ಅಂಬಿಕಾಪುರ ಮೆಡಿಕಲ್​ ಕಾಲೇಜು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ನೆಲದ ಮೇಲೆ ಕುಳಿತಿರುವ ವ್ಯಕ್ತಿಯ ಎದುರು ಪ್ರತ್ಯಕ್ಷಳಾಗುವ ಮಹಿಳೆ, ಇದ್ದಕ್ಕಿದ್ದಂತೆ ಆ ವ್ಯಕ್ತಿಗೆ ಚಪ್ಪಲಿಯಲ್ಲಿ ಬಾರಿಸಿ, ಕಾಲಿನಿಂದ ಒದಿಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಇನ್ನೊಬ್ಬ ವ್ಯಕ್ತಿ ಕಡ್ಡಿ ಹಿಡಿದು ಸಂತ್ರಸ್ತನಿಗೆ ಬಾರಿಸುವ ಮೂಲಕ ಮಹಿಳೆಗೆ ಸಾಥ್​ ನೀಡಿದ್ದಾನೆ.

ಸ್ಥಳೀಯ ವರದಿಗಳ ಪ್ರಕಾರ ಸಂತ್ರಸ್ತ ವ್ಯಕ್ತಿಯು ಸೋಮವಾರ ರಾತ್ರಿ ಆಸ್ಪತ್ರೆಯ ವೇಟಿಂಗ್​ ಹಾಲ್​ನಲ್ಲಿ ಏರ್​ ಕೂಲರ್​ ಆನ್​ ಮಾಡಿಕೊಂಡು ಮಲಗಿದ್ದರು. ಈ ಸಮಯದಲ್ಲಿ ಅದನ್ನು ನೋಡಿ, ಅಲ್ಲಿಗೆ ಬಂದ ಮಹಿಳೆ, ಏರ್​ ಕೂಲರ್​ ಅನ್ನು ಆಫ್​ ಮಾಡಿದ್ದಾಳೆ. ಈ ವೇಳೆ ಸಂತ್ರಸ್ತ ಆಫ್​ ಮಾಡಿದ್ದೇಕೆ? ಎಂದು ಪ್ರಶ್ನೆ ಮಾಡಿದ್ದಾನೆ. ಇಷ್ಟಕ್ಕೆ ತನ್ನ ತಾಳ್ಮೆ ಕಳೆದುಕೊಂಡ ಮಹಿಳೆ ಸಂತ್ರಸ್ತ ಮೇಲೆ ದರ್ಪ ಮೆರೆದಿದ್ದಾಳೆ.

ಅಷ್ಟೊಂದು ಬಾರಿಸುತ್ತಿದ್ದರೂ ಯಾವುದಕ್ಕೆ ಪ್ರತಿಕ್ರಿಯಿಸದ ಸಂತ್ರಸ್ತ, ಮಹಿಳೆಯಿಂದ ಹೊಡೆತಗಳನ್ನು ಅನುಭವಿಸುತ್ತಿರುವುದು ವಿಡಿಯೋದಲ್ಲಿದೆ. ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಮುನ್ನವೇ ಅಲ್ಲಿಗೆ ಬಂದ ಆಸ್ಪತ್ರೆಯ ಸೆಕ್ಯುರಿಟಿ ಗಾರ್ಡ್​, ಸಂತ್ರಸ್ತನನ್ನು ಅಲ್ಲಿಂದ ಬೇರೆ ಕಡೆ ಕರೆದೊಯ್ದರು.

ಸಂತ್ರಸ್ತ ವ್ಯಕ್ತಿ ಸಕಾರಣ ಇಲ್ಲದೆ, ಮಲಗಲು ಸ್ಥಳವನ್ನು ಹುಡುಕುತ್ತಿದ್ದ. ಆಸ್ಪತ್ರೆಯ ಆವರಣಕ್ಕೆ ಇಂತಹ ಅನಧಿಕೃತ ಪ್ರವೇಶಗಳ ಬಗ್ಗೆ ನಮ್ಮ ಸಿಬ್ಬಂದಿ ನಿಗಾ ಇಟ್ಟಿರುತ್ತಾರೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net