BBMP ಕಸದ ಲಾರಿಗೆ ನಗರದಲ್ಲಿ ಮತ್ತೊಂದು ಬಲಿ: ಕೆಲ್ಸ ಮುಗಿಸಿ ಮನೆಗೆ ಬರ್ತಿದ್ದ SBI ಉದ್ಯೋಗಿ ದುರಂತ ಸಾವು

BBMP Vehicle
Published on

ಬೆಂಗಳೂರು: ಬಿಬಿಎಂಪಿ ಕಸದ ಲಾರಿಗೆ ನಗರದಲ್ಲಿ ಮತ್ತೊಂದು ಬಲಿಯಾಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಬಿಬಿಎಂಪಿ ಗುರಿಯಾಗಿದೆ.

ಪದ್ಮಿನಿ (40) ಮೃತ ದುರ್ದೈವಿ. ಎಸ್​​ಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದ ಇವರು, ನಿನ್ನೆ (ಏ.18) ಸಂಜೆ 7 ಗಂಟೆಯ ಸುಮಾರಿನಲ್ಲಿ ಸೇಂಟ್ ಮಾರ್ಕ್ಸ್ ರಸ್ತೆಯಿಂದ ಆರ್.ಆರ್ ನಗರಕ್ಕೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಬಿಬಿಎಂಪಿ ಕಸದ ಲಾರಿ ನಂಬರ್ KA-01-AE-2937ರ ಚಾಲಕ ವಾಹನವನ್ನು ನಾಯಂಡಳ್ಳಿ ರಿಂಗ್ ರಸ್ತೆಯಲ್ಲಿ ನಾಗರಬಾವಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ಹೋಗಲು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುತ್ತಿದ್ದ.

ನಾಯಂಡಹಳ್ಳಿ ರೈಲ್ವೇ ಅಂಡರ್ ಪಾಸ್ ಹತ್ತಿರ ಸ್ಕೂಟರ್ ನಂಬರ್ KA-41-Y-6648ಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಕೂಟರ್ ಸವಾರಿ ಮಾಡುತ್ತಿದ್ದ ಪದ್ಮಿನಿ ಎಂಬುವರು ವಾಹನ ಸಮೇತ ರಸ್ತೆ ಮೇಲೆ ಬಿದ್ದಿದ್ದಾರೆ. ಇದರ ಬೆನ್ನಲ್ಲೇ ಸೊಂಟದ ಮೇಲೆ ಲಾರಿಯ ಮುಂಭಾಗದ ಎಡಭಾಗದ ಚಕ್ರ ಹರಿದು ಸೊಂಟಕ್ಕೆ ಹಾಗೂ ದೇಹದ ಇತರ ಭಾಗಗಳಿಗೆ ಪೆಟ್ಟಾಗಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಕಸದ ಲಾರಿಗೆ ಇದು ಮೂರನೇ ಬಲಿಯಾಗಿದೆ. ಹೆಬ್ಬಾಳ ಹಾಗೂ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ಕಸದ ಲಾರಿ ಹರಿದು ಓರ್ವ ಶಾಲಾ ಬಾಲಕಿ ಹಾಗೂ ವ್ಯಕ್ತಿಯೊಬ್ಬರು ಇದೇ ತಿಂಗಳಿನಲ್ಲಿ ಸಾವಿಗೀಡಾಗಿದ್ದರು. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಮಹಿಳೆ ಮೃತಪಟ್ಟಿದ್ದು, ಅಪಘಾತವಾಗುತ್ತಿದ್ದಂತೆ ಲಾರಿ ಚಾಲಕ ಎಸ್ಕೇಪ್​​ ಆಗಿದ್ದಾನೆ. ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net