More

    ಜನರಿಗೆ ಕ್ರಿಪ್ಟೋ ಧೋಖಾ!; ಲಾಭದ ನೆಪದಲ್ಲಿ 40 ಕೋಟಿ ರೂ. ವಂಚನೆ: ನಾಲ್ವರ ಬಂಧನ

    ಬೆಂಗಳೂರು: ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನೂರಾರು ಜನರಿಂದ ಹಣ ಹೂಡಿಕೆ ಮಾಡಿಸಿಕೊಂಡು 40 ಕೋಟಿ ರೂ.ಗೂ ಅಧಿಕ ಪ್ರಮಾಣದಲ್ಲಿ ವಂಚಿಸಿದ್ದ ಶೇರ್​ಹ್ಯಾಶ್ ಸಂಸ್ಥೆಯ ನಿರ್ದೇಶಕರು ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಭಾರತ ಮೂಲದ ಶೀತಲ್ ಬಾಸ್ತವುದ್, ಜಬಿವುಲ್ಲಾ ಖಾನ್, ಇಮ್ರಾನ್ ರಿಯಾಜ್, ರೆಹಮತ್ ಉಲ್ಲಾ ಖಾನ್ ಬಂಧಿತರು. ಆರೋಪಿಗಳು 44 ಬ್ಯಾಂಕ್ ಖಾತೆಗಳಲ್ಲಿ ಇಟ್ಟಿದ್ದ 15 ಕೋಟಿ ರೂ. ಫ್ರೀಜ್ ಮಾಡಲಾಗಿದೆ. 1 ಕೆಜಿ 650 ಗ್ರಾಂ ಚಿನ್ನ, 78 ಲಕ್ಷ ರೂ. ನಗದು, 44 ಡಿಎಸ್​ಸಿ ಟೋಕನ್​ಗಳು, 5 ಸೀಲುಗಳನ್ನು ಜಪ್ತಿ ಮಾಡಲಾಗಿದೆ.

    2021ರ ಲಾಕ್​ಡೌನ್ ಸಮಯದಲ್ಲಿ ಸಾರ್ವಜನಿಕರಿಗೆ ಎಸ್​ಎಂಎಸ್ ಹಾಗೂ ವಾಟ್ಸ್​ಆಪ್ ಗ್ರೂಪ್​ಗಳ ಮೂಲಕ ಶೇರ್​ಹ್ಯಾಶ್ ಗ್ರೂಪ್​ನಲ್ಲಿ ಹಣ ಹೂಡಿಕೆ ಮಾಡುವಂತೆ ಆರೋಪಿಗಳು ಪ್ರೇರೇಪಿಸುತ್ತಿದ್ದರು. ಶೇರ್ ಹ್ಯಾಶ್ ಆಪ್ ಇನ್​ಸ್ಟಾಲ್ ಮಾಡಿಕೊಂಡು ಹಣ ಹೂಡಿಕೆ ಮಾಡಿದರೆ ಹೆಲಿಯಮ್ ಕ್ರಿಪ್ಟೋ ಟೋಕನ್ (ಎಚ್​ಎನ್​ಟಿ) ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಜತೆಗೆ ಕ್ರಿಪ್ಟೋ ಮೈನಿಂಗ್ ಯಂತ್ರವನ್ನು ನೀಡುವ ಭರವಸೆ ಕೊಟ್ಟಿದ್ದರು. ಇದನ್ನು ನಂಬಿದ ಸಾರ್ವಜನಿಕರು ಶೇರ್​ಹ್ಯಾಶ್ ಆಪ್ ಇನ್​ಸ್ಟಾಲ್ ಮಾಡಿಕೊಂಡು ಖಾತೆ ತೆರೆದಿದ್ದರು. ಸಾರ್ವಜನಿಕರ ಉಳಿತಾಯ ಬ್ಯಾಂಕ್ ಖಾತೆಯಿಂದ ಯುಪಿಐ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಬೆಂಗಳೂರು ಹಾಗೂ ವಿವಿಧ ರಾಜ್ಯಗಳಲ್ಲಿ ನೊಂದಣಿಯಾಗಿರುವ ಕೋಟಾಟಾ ಟೆಕ್ನಾಲಜಿ ಪ್ರೖೆ.ಲಿ., ಸಿರಲೀನ್ ಟೆಕ್ ಸೊಲ್ಯೂಷನ್ಸ್ ಪ್ರೖೆ ಲಿ., ನೀಲಿನ್ ಇನ್ಪೋಚ್ ಪ್ರೖೆ.ಲಿ., ಮೋಲ್ಟ್ರೆಸ್ ಎಕ್ಸೀಮ್ ಪ್ರೖೆ.ಲಿ., ಕ್ರಾಂಪ್ಟಿಂಗ್ಟನ್ ಟೆಕ್ನಾಲಜಿ ಪ್ರೖೆ.ಲಿ. ಕಂಪನಿಗಳ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದರು.

    ಕಿಂಗ್​ಪಿನ್ ವಿದೇಶಿ ಪ್ರಜೆಗಾಗಿ ಶೋಧ: ಗ್ರಾಹಕರು ಆರೋಪಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿರುವ ದಾಖಲೆಗಳ ಮಾಹಿತಿ ಕಲೆ ಹಾಕಿದ ಸಿಸಿಬಿ, ಈ ಮೂಲಕ ಆರೋಪಿಗಳ ಜಾಡು ಪತ್ತೆಹಚ್ಚಿ ಬಂಧಿಸಿದೆ. ತಾಂತ್ರಿಕ ತನಿಖೆ ನಡೆಸಿದಾಗ ಒಟ್ಟು 40 ಕೋಟಿ ರೂ. ವಂಚನೆಯಾಗಿರುವುದು ಗೊತ್ತಾಗಿದೆ. ಪ್ರಕರಣದ ಕಿಂಗ್​ಪಿನ್ ವಿದೇಶಿ ಪ್ರಜೆ ಎಂಬ ಸುಳಿವು ಸಿಕ್ಕಿದೆ. ಆತನ ಸೂಚನೆ ಮೇರೆಗೆ ಆರೋಪಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇದೀಗ ಆತ ಸಿಕ್ಕಿದರೆ ಗ್ರಾಹಕರಿಂದ ಪಡೆದ ಹಣ ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದು ತಿಳಿದುಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಉತ್ತರ ಭಾರತ ಮೂಲದ ಶೀತಲ್ ಬಾಸ್ತವುದ್ ಶೇರ್​ಹ್ಯಾಶ್ ಕಂಪನಿ ಸೆಕ್ರೇಟರಿಯಾಗಿದ್ದರೆ, ಜಬಿವುಲ್ಲಾ ಖಾನ್, ಇಮ್ರಾನ್ ರಿಯಾಜ್, ರೆಹಮತ್ ಉಲ್ಲಾ ಖಾನ್ ನಿರ್ದೇಶಕರಾಗಿದ್ದರು.

    ಶೇಕಡ 30 ಲಾಭಾಂಶದ ಆಸೆ: ಕಳೆದ ಜ.11ರಂದು ಶೇರ್​ಹ್ಯಾಶ್ ವರ್ಷನ್ 1ರಲ್ಲಿ ತಾಂತ್ರಿಕ ದೋಷ ಹೊಂದಿದ್ದು, ಹೊಸ ವೈಶಿಷ್ಟ್ಯಗಳೊಂದಿಗೆ ತಮ್ಮ ಅಪ್ಲಿಕೇಶನ್ ಅನ್ನು ಅಪ್​ಗ್ರೇಡ್ ಮಾಡುವ ಅಗತ್ಯವಿದೆ. ಜ.18 ಮತ್ತು 19ರೊಳಗೆ ಶೇರ್​ಹ್ಯಾಶ್ 2.0 ವರ್ಷನ್ -2 ಹೊಸ ಅಪ್ಲಿಕೇಶನ್ ಬಿಡುಗಡೆಯಾಗಲಿದೆ. ಈಗ ಇದರಲ್ಲಿ ಅಧಿಕ ಹಣ ಹೂಡಿಕೆ ಮಾಡಿದವರಿಗೆ ಪ್ರೀಮಿಯಂ ಮೆಂಬರ್​ಶಿಪ್ ಸಿಗಲಿದೆ. ಜ.11ರಂದು ಸಂಜೆ 6 ಗಂಟೆಯೊಳಗೆ ಗ್ರಾಹಕರು ಹೆಚ್ಚಿನ ಹಣ ಹೂಡಿಕೆ ಮಾಡಿದರೆ, ಹೊಸ ಅಪ್ಲಿಕೇಶನ್ ಬಿಡುಗಡೆಯಾಗುವ ವೇಳೆ ಶೇ.30 ಲಾಭಾಂಶ ಸಿಗಲಿದೆ ಎಂದು ಆರೋಪಿಗಳು ಗ್ರಾಹಕರಿಗೆ ಸಂದೇಶ ಕಳುಹಿಸಿದ್ದರು. ಉದಾಹರಣೆಗೆ, ‘ಒಂದು ಸಾವಿರ ರೂ. ಬಂಡವಾಳ ಹಾಕಿದರೆ 24 ಗಂಟೆಯೊಳಗೆ 30 ರೂ. ಲಾಭಾಂಶ, ತಿಂಗಳಿಗೆ 2 ಸಾವಿರ ರೂ. ಬಂಡವಾಳ ಹೂಡಿದರೆ 730 ರೂ. ಲಾಭ ಪಡೆದುಕೊಳ್ಳಬಹುದು ಎಂದು ನಂಬಿಸಿದ್ದರು. ಇದನ್ನು ನಂಬಿ ನೂರಾರು ಗ್ರಾಹಕರು ಕೋಟ್ಯಂತರ ರೂ. ಹೂಡಿಕೆ ಮಾಡಿದ್ದರು. ಜ.19ರಂದು ಗ್ರಾಹಕರು ಶೇರ್​ಹ್ಯಾಶ್ ಆಪ್ ಲಾಗಿನ್ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ ಗೂಗಲ್ ಪ್ಲೇ ಸ್ಟೋರ್​ನಿಂದ ಶೇರ್​ಹ್ಯಾಶ್ ಅಪ್ಲಿಕೇಶನ್ ತೆಗೆದು ಹಾಕಿರುವುದು ಗ್ರಾಹಕರ ಗಮನಕ್ಕೆ ಬಂದಿತ್ತು. ಆರೋಪಿಗಳು ಯಾವುದೇ ಲಾಭಾಂಶ ನೀಡದೆ, ಕ್ರಿಪ್ಟೋ ಮೈನಿಂಗ್ ಯಂತ್ರವನ್ನೂ ನೀಡದೆ ವಂಚಿಸಿರುವ ಬಗ್ಗೆ ಗ್ರಾಹಕರು ಸಿಸಿಬಿ ಸೈಬರ್ ಕ್ರೖೆಂ ಪೊಲೀಸರಿಗೆ ದೂರು ನೀಡಿದ್ದರು.

    ಮೂರು ತಿಂಗಳ ಹಿಂದೆ ಪ್ರಕರಣದ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಹೆಚ್ಚಿನ ಲಾಂಭಾಂಶ ಪಡೆಯುವ ಉದ್ದೇಶದಿಂದ ಶೇರ್​ಹ್ಯಾಶ್ ಅಫ್ಲಿಕೇಶನ್ ಮೂಲಕ ಡಿಜಿಟಲ್ ಕರೆನ್ಸಿಯಲ್ಲಿ ಹೂಡಿಕೆ ಮಾಡಲು ಮುಂದಾಗಿ ಜನ ವಂಚನೆಗೊಳಗಾಗಿದ್ದಾರೆ.

    | ಕಮಲ್ ಪಂತ್ ನಗರ ಪೊಲೀಸ್ ಆಯುಕ್ತ

    ಡಿವೈಸ್ ಕಮೀಷನ್: ಕ್ರಿಪ್ಟೋ ಕರೆನ್ಸಿ ಮೈನಿಂಗ್ ಮಾಡಲು ಡಿವೈಸ್ ಕೊಡುತ್ತೇವೆ. ಆ ಡಿವೈಸ್ ಮೂಲಕ ನೀವೇ ಮನೆಗಳಲ್ಲಿ ಮೈನ್ ಮಾಡಿ ಹೆಚ್ಚಿನ ಲಾಭಾಂಶ ಪಡೆದುಕೊಳ್ಳಬಹುದು. ಕ್ರಿಪ್ಟೋ ಮೈನಿಂಗ್​ನಲ್ಲಿ ಹಣ ಹೂಡಿಕೆ ಮಾಡುವವರು ಡಿವೈಸ್ ಅನ್ನು ಬಾಡಿಗೆಗೆ ಪಡೆಯುತ್ತಾರೆ. ಲಾಭಾಂಶದಲ್ಲಿ ಕಮಿಷನ್ ಕೊಡುತ್ತಾರೆ. ನಮ್ಮ ಕಂಪನಿಗಳು ಕ್ರಿಪ್ಟೊ ಕರೆನ್ಸಿಯಲ್ಲಿ ಹಣ ಹೂಡಿಕೆ ಮಾಡುತ್ತದೆ. ಇದಕ್ಕಾಗಿ ಹಗಲಿರುಳು ಸಾವಿರಾರು ಜನ ವಹಿವಾಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಗಳು ನಂಬಿಸಿದ್ದರು. ಆರಂಭದಲ್ಲಿ 5 ಸಾವಿರ ರೂ. ಹೂಡಿಕೆ ಮಾಡಿದರೆ ಪ್ರತಿದಿನ 49 ರೂ. ಲಾಭಾಂಶ ಕೊಡುತ್ತಿದ್ದರು. ಈ ಬಗ್ಗೆ ಜನರಿಗೆ ನಂಬಿಕೆ ಬಂದು ಹಣ ಹೂಡಿಕೆ ಮಾಡುತ್ತಿದ್ದರು. ಇದಕ್ಕಾಗಿ 900ಕ್ಕೂ ಅಧಿಕ ವಾಟ್ಸ್​ಆಪ್ ಗ್ರೂಪ್​ಗಳನ್ನು ಆರೋಪಿಗಳ ಸೃಷ್ಟಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts