

ಡೆಹ್ರಾಡೂನ್: ಉತ್ತರಾಖಂಡದ ಹಿರಿಯ ಬಿಜೆಪಿ ಮುಖಂಡನ ಪುತ್ರನಿಗೆ ಸೇರಿದ ರೆಸಾರ್ಟ್ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಭಂಡಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಮಾಜಿ ಡಿಜಿಪಿ ಅಲೋಕ್ ಬಿ ಲಾಲ್ ಅವರು ನೀಡಿರುವ ಹೇಳಿಕೆಯೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅಂಕಿತಾಳ ಕೊಲೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ಉಚ್ಛಾಟಿತ ಬಿಜೆಪಿ ನಾಯಕ ವಿನೋದ್ ಆರ್ಯ ಪುತ್ರ ಹಾಗೂ ಆರೋಪಿ ಪುಳ್ಕಿತ್ ಆರ್ಯ ಹೆಸರಿನಲ್ಲಿದ್ದ ರೆಸಾರ್ಟ್ ಅನ್ನು ಧ್ವಂಸ ಮಾಡಿದ್ದು, ಉದ್ದೇಶಪೂರ್ವಕವಾಗಿಯೇ ರೆಸಾರ್ಟ್ ಹೊಡೆದುರುಳಿಸಲಾಗಿದೆ ಎಂದು ಡಿಜಿಪಿ ಅಲೋಕ್ ಬಿ ಲಾಲ್ ಆರೋಪ ಮಾಡಿದ್ದಾರೆ.
ರೆಸಾರ್ಟ್ನಲ್ಲಿದ್ದ ಮಹತ್ವದ ಸಾಕ್ಷಿಗಳನ್ನು ನಾಶ ಮಾಡಲೆಂದು ಕಟ್ಟದ ನೆಲಸಮ ದಾರಿಯನ್ನು ಆಯ್ದುಕೊಂಡಿದ್ದಾರೆ. ಇದಕ್ಕೆ ಸರ್ಕಾರ ಕುಮ್ಮಕ್ಕು ಸಹ ನೀಡಿದೆ. ಏಕೆಂದರೆ, ರೆಸಾರ್ಟ್ ಧ್ವಂಸ ಮಾಡಲು ಅನುಸರಿಸಬೇಕಾದ ನಿಯಮವನ್ನು ಗಾಳಿಗೆ ತೂರಲಾಗಿದೆ. ರೆಸಾರ್ಟ್ ಅಕ್ರಮ ಎಂದು ಕಾರಣ ನೀಡಿರುವುದು ಸಮಂಜಸವಲ್ಲ. ಅಕ್ರಮ ಎಂದು ತಿಳಿದಾಗ ಮೊದಲು ನೋಟಿಸ್ ಕೊಟ್ಟು, ಆ ಬಳಿಕ ಕಾರ್ಯಾಚರಣೆ ಆರಂಭಿಸಲಾಗುತ್ತದೆ. ಆದರೆ, ಇಲ್ಲಿ ಯಾವುದೇ ನಿಯಮವನ್ನು ಅನುಸರಿಸಿಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ದಿಢೀರನೇ ಕಟ್ಟಡವನ್ನು ಧ್ವಂಸ ಮಾಡುವ ಮೂಲಕ ಸಾಕ್ಷಿ ನಾಶ ಮಾಡಿರಬಹುದು ಎಂದು ಅಲೋಕ್ ಬಿ ಲಾಲ್ ದೂರಿದರು.
ಈ ಪ್ರಕರಣದಲ್ಲಿ ಸರ್ಕಾರವು ತಾನು ಪರಿಣಾಮಕಾರಿ ಎಂದು ಹೇಳಿಕೊಳ್ಳುವ ಸಲುವಾಗಿ ತರಾತುರಿಯಲ್ಲಿ ರೆಸಾರ್ಟ್ ಅನ್ನು ನಾಶಪಡಿಸಿದೆ. ಆರೋಪಿಗಳೇ ಆವರಣವನ್ನು ಕೆಡವಿದ್ದಾರೆಯೇ ಎಂದು ಅವರು ಲಾಲ್ ಆಶ್ಚರ್ಯ ವ್ಯಕ್ತಪಡಿಸಿದರು.
ರೆಸಾರ್ಟ್‌ನ ಮಾಲೀಕರ ಬೇಡಿಕೆಯಂತೆ ಅತಿಥಿಗಳೊಂದಿಗೆ ಲೈಂಗಿಕ ಸಂಭೋಗ ನಡೆಸಲು ನಿರಾಕರಿಸಿದ್ದರಿಂದ ಅಂಕಿತಾಳನ್ನು ಕೊಲ್ಲಲಾಗಿದೆ ಎಂದು ಆಕೆಯ ಫೇಸ್‌ಬುಕ್ ಫ್ರೆಂಡ್ ಒಬ್ಬರು ಆರೋಪ ಮಾಡಿದ್ದಾರೆ. ಅಂಕಿತಾಳನ್ನು ಕೊಲೆ ಮಾಡಿದ್ದಾಗಿ ಉಚ್ಛಾಟಿತ ಬಿಜೆಪಿ ನಾಯಕ ವಿನೋದ್ ಆರ್ಯ ಪುತ್ರ ಪುಳ್ಕಿತ್ ಆರ್ಯ ಪೊಲೀಸ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅಂಕಿತಾಳ ಜೊತೆ ನಡೆದ ವಾಗ್ವಾದದ ವೇಳೆ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಕಾಲುವೆಗೆ ನೂಕಿ ಕೊಂದಿದ್ದಾಗಿ ಆರೋಪಿಗಳು ಸಹ ತಪ್ಪೊಪ್ಪಿಕೊಂಡಿದ್ದಾರೆ. ಈಗಾಗಲೇ ಪುಳ್ಕಿತ್ ಆರ್ಯ ಸೇರಿ ಮೂವರನ್ನು ಉತ್ತರಾಖಂಡದ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)