More

    10 ಸಾವಿರಕ್ಕೆ ನನ್ನನ್ನು ನಾನು ಮಾರಿಕೊಳ್ಳಲ್ಲ: ಅಂಕಿತಾಳ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ಸ್ಫೋಟಕ ಮಾಹಿತಿ

    ಡೆಹ್ರಾಡೂನ್​: ಉತ್ತರಾಖಂಡದ ಹಿರಿಯ ಬಿಜೆಪಿ ಮುಖಂಡನ ಪುತ್ರನಿಗೆ ಸೇರಿದ ರೆಸಾರ್ಟ್​ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಭಂಡಾರಿಯ ಕೊಲೆ ಪ್ರಕರಣವು ಉತ್ತರಾಖಂಡದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಂಕಿತಾಗೆ ರಿಸೆಪ್ಷನಿಸ್ಟ್ ಕೆಲಸವು ಆಕೆಯ ಮೊದಲ ಉದ್ಯೋಗವಾಗಿದ್ದು, ರೆಸಾರ್ಟ್​ಗೆ ಬರುತ್ತಿದ್ದ ಅತಿಥಿಗಳಿಗೆ “ಸ್ಪೆಷಲ್ ಸರ್ವಿಸ್​” ನೀಡುವಂತೆ ಒತ್ತಾಯಿಸುತ್ತಿದ್ದರು ಎಂಬ ಸಂಗತಿ ಫ್ರೆಂಡ್ ಜೊತೆ ಅಂಕಿತಾ ನಡೆಸಿದ್ದ​ ವಾಟ್ಸ್​ಆ್ಯಪ್​ ಚಾಟ್​ನಿಂದ ಬಯಲಾಗಿದೆ.

    ರೆಸಾರ್ಟ್‌ನ ಮಾಲೀಕರ ಬೇಡಿಕೆಯಂತೆ ಅತಿಥಿಗಳೊಂದಿಗೆ ಲೈಂಗಿಕ ಸಂಭೋಗ ನಡೆಸಲು ನಿರಾಕರಿಸಿದ್ದರಿಂದ ಅಂಕಿತಾಳನ್ನು ಕೊಲ್ಲಲಾಗಿದೆ ಎಂದು ಆಕೆಯ ಫೇಸ್‌ಬುಕ್ ಫ್ರೆಂಡ್​ ಒಬ್ಬರು ಆರೋಪ ಮಾಡಿದ್ದಾರೆ. ಅಂಕಿತಾಳನ್ನು ಕೊಲೆ ಮಾಡಿದ್ದಾಗಿ ಉಚ್ಛಾಟಿತ ಬಿಜೆಪಿ ನಾಯಕ ವಿನೋದ್​ ಆರ್ಯ ಪುತ್ರ ಪುಳ್ಕಿತ್​ ಆರ್ಯ ಪೊಲೀಸ್​ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅಂಕಿತಾಳ ಜೊತೆ ನಡೆದ ವಾಗ್ವಾದದ ವೇಳೆ ತನ್ನಿಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಕಾಲುವೆಗೆ ನೂಕಿ ಕೊಂದಿದ್ದಾಗಿ ಆರೋಪಿಗಳು ಸಹ ತಪ್ಪೊಪ್ಪಿಕೊಂಡಿದ್ದಾರೆ. ಈಗಾಗಲೇ ಪುಳ್ಕಿತ್​ ಆರ್ಯ ಸೇರಿ ಮೂವರನ್ನು ಉತ್ತರಾಖಂಡದ ಪೊಲೀಸರು ಶನಿವಾರ ಬಂಧಿಸಿದ್ದಾರೆ.

    ಅಂಕಿತಾಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲು ಆರೋಪಿಗಳು ಯತ್ನಿಸಿದ್ದರು ಎಂಬ ವಿಚಾರ, ಫ್ರೆಂಡ್​ ಜೊತೆ ಅಂಕಿತಾ ನಡೆಸಿರುವ ವಾಟ್ಸ್​ಆ್ಯಪ್​ ಚಾಟ್​ನಿಂದ ಬಯಲಾಗಿದೆ. ನನ್ನನ್ನು ವೇಶ್ಯೆಯನ್ನಾಗಿ ಮಾಡಲು ಯತ್ನಿಸಿದರು. ನಾನು ಬಡವಳಾಗಿರಬಹುದು ಆದರೆ, ನನ್ನನ್ನು ನಾನು 10 ಸಾವಿರಕ್ಕೆ ಮಾರಿಕೊಳ್ಳುವುದಿಲ್ಲ ಎಂದು ಅಂಕಿತಾ, ಫ್ರೆಂಡ್​ಗೆ ವಾಟ್ಸ್​ಆ್ಯಪ್​ ಮಾಡಿರುವುದು ಪೊಲೀಸರಿಗೆ ಲಭ್ಯವಾಗಿದೆ.

    ಒಮ್ಮೆ ಪುಳ್ಕಿತ್​ ಆರ್ಯ, ಬಲವಂತವಾಗಿ ಮುತ್ತು ಕೊಡಲು ಯತ್ನಿಸಿದಾಗ ಆತನಿಗೆ ಅಂಕಿತಾ ಬುದ್ಧಿಮಾತು ಹೇಳಿದ್ದಳಂತೆ. ಅಲ್ಲದೆ, ಕುಡುಕ ಅತಿಥಿಯು ಒಮ್ಮೆ ತನ್ನನ್ನು ಬಲವಂತವಾಗಿ ತಬ್ಬಿಕೊಂಡನು. ಆದರೆ ಮೂವರು ಆರೋಪಿಗಳಲ್ಲಿ ಒಬ್ಬನಾದ ಪುಳ್ಕಿತ್​ನ ಸಹಾಯಕ ಅಂಕಿತ್ ಗುಪ್ತಾ, ಈ ವಿಷಯವನ್ನು ಎಲ್ಲಿಯೂ ಬಹಿರಂಗ ಮಾಡದೇ ಮೌನವಾಗಿರುವಂತೆ ಕೇಳಿಕೊಂಡನು ಎಂದು ಅಂಕಿತಾ ತನ್ನ ಫ್ರೆಂಡ್​ಗೆ ಹೇಳಿಕೊಂಡಿದ್ದಾಳೆ. ​

    ಒಮ್ಮೆ ಅಂಕಿತ್ ಗುಪ್ತಾ ನನ್ನ ಬಳಿ ಬಂದು ಏನೋ ಮಾತನಾಡಬೇಕೆಂದು ಹೇಳಿದ. ನಾನು ಒಪ್ಪಿ ನನ್ನ ರಿಸೆಪ್ಷನಿಸ್ಟ್ ಡೆಸ್ಕ್​ ಬಳಿಯ ಒಂದು ಮೂಲೆಗೆ ಹೋದೆ. ಅಲ್ಲಿ, ನಿಮ್ಮ ರೆಸಾರ್ಟ್‌ಗೆ 10,000 ರೂ ಪಾವತಿಸಲು ಸಿದ್ಧರಿರುವ ಅತಿಥಿಗೆ ‘ಹೆಚ್ಚುವರಿ ಸೇವೆ’ ನೀಡಲು ತಯಾರಾಗುವಿರಾ ಎಂದು ಕೇಳಿದರು. ಅದಕ್ಕೆ ನನ್ನ ಉತ್ತರ ನೀಡಿದ ಬಳಿಕ, ನಿಮ್ಮನ್ನು ಕೇಳುತ್ತಿಲ್ಲ. ನಿಮಗೆ ಗೊತ್ತಿರುವ ಯಾರಾದರು ಹುಡುಗಿಯರಿದ್ದರೆ, ಅವರು ಒಪ್ಪಿದರೆ ಹೇಳಿ ಎಂದು ಅಂಕಿತ್​ ಹೇಳಿದನು. ಆದರೆ, ಬೇಕಂತಲೇ ಆ ಆಫರ್ ಬಗ್ಗೆ ನಮ್ಮ ಮುಂದೆ ಚರ್ಚಿಸಿದನು. ಬಹುಶಃ ನಾನು ಒಪ್ಪಿಕೊಳ್ಳುತ್ತೇನೆ ಎಂಬುದು ಆತನ ಆಲೋಚನೆಯಾಗಿತ್ತು ಎಂದು ಅಂಕಿತಾ, ಫ್ರೆಂಡ್​ ಜೊತೆ ವಾಟ್ಸ್​ಆ್ಯಪ್​ ಮೂಲಕ ಬಿಟ್ಟಿದ್ದಾಳೆ.

    ಅತಿಥಿಗಳಿಗೆ ವಿಶೇಷ ಸೇವೆಗಳನ್ನು ನೀಡಲು ಒಪ್ಪದಿದ್ದರೆ ಕೆಲಸದಿಂದ ವಜಾಗೊಳಿಸಬಹುದು ಮತ್ತು ಬೇರೆ ಹುಡುಗಿಯನ್ನು ನೇಮಿಸುವ ಅಧಿಕಾರ ನನಗಿದೆ ಎಂದು ಅಂಕಿತ್​ ಹೇಳಿದ್ದ. ಪುಲ್ಕಿತ್ ಆರ್ಯ ಅವರ ನಿರ್ದೇಶನದ ಮೇರೆಗೆ ಅಂಕಿತ್ ಆ ಮಾತನ್ನು ನನಗೆ ಹೇಳಿದ್ದನು ಎಂದು ಅಂಕಿತಾ, ಫ್ರೆಂಡ್​ಗೆ ತಿಳಿಸಿದ್ದಳು.

    ಸಾಯುವ ಮುನ್ನ ಅಂಕಿತಾ, ರೆಸಾರ್ಟ್ ಉದ್ಯೋಗಿಯೊಬ್ಬರಿಗೆ ಕರೆ ಮಾಡಿರುವ ಆಡಿಯೋ ರೆಕಾರ್ಡ್​ ಕ್ಲಿಪ್ ಕೂಡ ವೈರಲ್ ಆಗಿದೆ. ಪೌರಿ ಜಿಲ್ಲೆಯ ವನತಾರಾ ರೆಸಾರ್ಟ್ ಯಮಕೇಶ್ವರ ಬ್ಲಾಕ್‌ನ ಬಾಣಸಿಗ ಮನ್ವೀರ್ ಸಿಂಗ್ ಚೌಹಾಣ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ಕೊಲೆಯಾದ ದಿನದಂದು ಅಳುತ್ತಿದ್ದ ಅಂಕಿತಾ, ಚೌಹಾಣ್​ಗೆ ಕರೆ ಮಾಡಿ ತನ್ನ ಬ್ಯಾಗ್ ತರುವಂತೆ ಕೇಳಿಕೊಂಡಿದ್ದಾಳೆ. ಆದರೆ ಸಿಬ್ಬಂದಿಯೊಬ್ಬರು ಬ್ಯಾಗ್‌ನೊಂದಿಗೆ ಹೋದಾಗ ಅಂಕಿತಾ ತಾನು ಹೇಳಿದ ಸ್ಥಳದಲ್ಲಿ ಪತ್ತೆಯಾಗಲಿಲ್ಲ. ಅಲ್ಲದೆ, ಆಕೆ ಕೊನೆಯದಾಗಿ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 3 ಗಂಟೆಗೆ ರೆಸಾರ್ಟ್‌ನಲ್ಲಿ ಕಾಣಿಸಿಕೊಂಡಿದ್ದಳು.

    ಆಕೆಯ ಸಾವಿಗೆ ಕೆಲವೇ ಗಂಟೆಗಳ ಮೊದಲು, ಅಂಕಿತಾ ಅವರ ಫೇಸ್‌ಬುಕ್ ಫ್ರೆಂಡ್​ಗೆ ಕರೆ ಮಾಡಿದ್ದರು. ಇದಾದ ಬಳಿಕ ಅದೇ ದಿನ ರಾತ್ರಿ 8:30 ರ ಸುಮಾರಿಗೆ ಫೇಸ್​ಬುಕ್​ ಫ್ರೆಂಡ್​ ಮತ್ತೆ ಅಂಕಿತಾಗೆ ಕರೆ ಮಾಡಿದ್ದಾರೆ. ಆದರೆ, ಆಕೆ ರಿಸೀವ್​ ಮಾಡದಿದ್ದಾಗ, ಪುಳ್ಕಿತ್​ ಆರ್ಯಗೆ ಕರೆ ಮಾಡಿ ವಿಚಾರಿಸಲು, ಅವಳು ಮಲಗಲು ತನ್ನ ಕೋಣೆಗೆ ಹೋಗಿದ್ದಾಳೆ ಎಂದು ಪುಳ್ಕಿತ್​ ಹೇಳಿದ್ದಾನೆ. ಮರುದಿನ ಬೆಳಗ್ಗೆ ಅಂಕಿತಾ ಫ್ರೆಂಡ್​, ಪುಳ್ಕಿತ್​ಗೆ ಮತ್ತೆ ಕರೆ ಮಾಡಿದ್ದಾರೆ. ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಅವರು ರೆಸಾರ್ಟ್‌ನ ಮ್ಯಾನೇಜರ್ ಅಂಕಿತ್‌ಗೆ ಕರೆ ಮಾಡಿ ಅಂಕಿತಾ ಬಗ್ಗೆ ವಿಚಾರಿಸಿದ್ದರು. ಆದರೆ, ಅಂಕಿತಾ ಜಿಮ್‌ನಲ್ಲಿದ್ದಾರೆ ಎಂದು ಮ್ಯಾನೇಜರ್​ ಹೇಳಿದ್ದ. ನಂತರ ಅಂಕಿತಾ ಫ್ರೆಂಡ್​, ರೆಸಾರ್ಟ್‌ನ ಬಾಣಸಿಗರೊಂದಿಗೆ ಮಾತನಾಡಿದ್ದಾರೆ, ಅವರು ಆ ದಿನ ಮಹಿಳೆಯನ್ನು ನೋಡಿಲ್ಲ ಎಂದು ಹೇಳಿದ್ದಾರೆ. ಆಗ ಫ್ರೆಂಡ್​ಗೆ ಅನುಮಾನ ಮೂಡಿತು.

    ಬಳಿಕ ಆಕೆಯ ಕೊಲೆ ಆಗಿದೆ ಎಂಬ ಸಂಗತಿ ಹೊರಬಿತ್ತು. ಆ ಕೊಲೆಗೂ ಪುಳ್ಕಿತ್ ಆರ್ಯಗೂ ಸಂಬಂಧ ಇದೆ ಎಂಬುದಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಪೊಲೀಸರು ರೆಸಾರ್ಟ್​ ಮಾಲೀಕ ಪುಳ್ಕಿತ್ ಆರ್ಯ, ಮ್ಯಾನೇಜರ್​ ಸೌರಭ್ ಭಾಸ್ಕರ್, ಅಸಿಸ್ಟೆಂಟ್ ಮ್ಯಾನೇಜರ್​ ಅಂಕಿತ್ ಗುಪ್ತಾ ಅವರನ್ನು ನಿನ್ನೆ ಬಂಧಿಸಿದ್ದರು. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ ಅವರು ಆಕೆಯನ್ನು ಕೊಲೆ ಮಾಡಿ ನಾಲೆಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ನಿನ್ನೆ ಛೀಲಾ ನಾಲೆಯಲ್ಲಿ ಅಂಕಿತಾ ಭಂಡಾರಿ ಶವ ಸಿಕ್ಕಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

    ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್​ ಸಿಂಗ್ ಧಾಮಿ ಅವರು ಈ ಪ್ರಕರಣದ ತನಿಖೆ ಸಂಬಂಧ ವಿಶೇಷ ತನಿಖಾ ದಳವನ್ನು ರಚಿಸಿ, ತನಿಖೆಗೆ ಆದೇಶಿಸಿದ್ದಾರೆ. ಮೂವರು ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    ನೈಸರ್ಗಿಕ ಮೌತ್​ ಫ್ರೆಶ್ನರ್​ಗಳ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ಒಮ್ಮೆ ಇಲ್ಲಿ ನೋಡಿ…

    ನಯನತಾರಾ-ವಿಘ್ನೇಶ್​ ಅದ್ಧೂರಿ ಮದ್ವೆಯ ಸಣ್ಣ ಝಲಕ್​ ಬಿಡುಗಡೆ ಮಾಡಿದ ನೆಟ್​ಫ್ಲಿಕ್ಸ್: ವೈರಲ್​ ಆಯ್ತು ವಿಡಿಯೋ

    ಯಾವನೋ-ಗೀವನೋ ಅಂದ್ರೆ ಸರಿಯಿರಲ್ಲ… ನಾಲಿಗೆ ಹರಿಬಿಟ್ಟ ನಲಪಾಡ್​ಗೆ ರೈತನ ಖಡಕ್ ಎಚ್ಚರಿಕೆ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts