More

    ಬ್ರೇಕ್ ಬದಲು ಎಕ್ಸಿಲೇಟರ್ ತುಳಿದ ಯುವಕ; ಬಾಲಕ ಸಾವು

    ಬೆಂಗಳೂರು: ಕಾರು ತೊರೆಯುವಾಗ ಯುವಕ ಬ್ರೇಕ್ ಬದಲು ಎಕ್ಸಿಲೇಟರ್ ತುಳಿದ ಪರಿಣಾಮ ಅಡ್ಡಾದಿಡ್ಡಿ ಚಲಾಯಿಸಿ ಇಬ್ಬರು ಬಾಲಕರಿಗೆ ಗುದ್ದಿದೆ. ಪರಿಣಾಮ 5 ವರ್ಷದ ಬಾಲಕ ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕ ಗಂಭೀರ ಗಾಯಗೊಂಡಿದ್ದಾನೆ.
    ಮುರುಗೇಶ್‌ಪಾಳ್ಯದ ಕಾಳಪ್ಪ ಲೇಔಟ್ ನಿವಾಸಿ ತಾಮರೆ ಕಣ್ಣನ್ ಪುತ್ರ ಆರವ್ (5) ಮೃತ ಬಾಲಕ. ಮತ್ತೊಂದು ಬಾಲಕ ಧನರಾಜ್ (5)ಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಕಾರು ಚಾಲಕ ದೇವರಾಜ್ (18) ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಾನುವಾರ ಬೆಳಗ್ಗೆ ದೇವರಾಜ್ ತಂದೆ ಕುಟುಂಬಸಮೇತ ದೇವಸ್ಥಾನಕ್ಕೆ ತೆರಳಲು ಸ್ನೇಹಿತರ ಕಾರು ತಂದಿದ್ದರು. ಮನೆಯಲ್ಲಿ ಎಲ್ಲರೂ ಹೊರಡಲು ಸಿದ್ಧವಾಗುತ್ತಿದ್ದರು. ತಂದೆ ಕಾರು ಸ್ವಚ್ಛಗೊಳಿಸುವಂತೆ ಸೂಚಿಸಿದ ಕಾರಣಕ್ಕೆ ದೇವರಾಜ್ ಬೆಳಗ್ಗೆ 10.30ರಲ್ಲಿ ಕಾರನ್ನು ತೊಳೆದು ಬಳಿಕ ವೈಪರ್ ಕ್ಲೀನ್ ಮಾಡುವ ಸಲುವಾಗಿ ಕಾರನ್ನು ಸ್ಟಾರ್ಟ್ ಮಾಡಿದ್ದಾನೆ.

    ಕಾರು ಏಕಾಏಕಿ ಮುಂದೆ ಚಲಿಸಿದ ಪರಿಣಾಮ ಬ್ರೇಕ್ ತುಳಿಯುವ ಬದಲು ಎಕ್ಸಿಲೇಟರ್ ತುಳಿದಿದ್ದಾನೆ. ಅಡ್ಡಾದಿಡ್ಡಿ ಚಲಿಸಿದ ಕಾರು ಮನೆ ಎದುರಿನ ರಸ್ತೆಯಲ್ಲಿ ಆಟವಾಡುತ್ತಿದ್ದ ಆರವ್ ಮತ್ತು ಧನರಾಜ್‌ಗೆ ಡಿಕ್ಕಿ ಹೊಡೆದಿದೆ. ಅಂತೆಯೇ ಮುಂದೆ ಸಾಗಿ ಮನೆಗಳ ಎದುರು ನಿಲುಗಡೆ ಮಾಡಿದ್ದ ಐದಾರು ದ್ವಿಚಕ್ರ ವಾಹನಗಳಿಗೂ ಡಿಕ್ಕಿಯಾಗಿ ನಿಂತಿದೆ.

    ಗುದ್ದಿದ ರಭಸಕ್ಕೆ ಆರವ್ ತಲೆಗೆ ಮತ್ತು ಧನರಾಜ್ ಕೈ-ಕಾಲುಗಳಿಗೆ ಗಾಯವಾಗಿದೆ. ಕೂಡಲೇ ಪಾಲಕರು ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆರವ್ ಚಿಕಿತ್ಸೆ ಫಲಿಸದೆ ಮಧ್ಯಾಹ್ನ 12 ಗಂಟೆಗೆ ಮೃತಪಟ್ಟಿದ್ದಾನೆ. ಧನರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಕಾರನ್ನು ಜಪ್ತಿ ಮಾಡಿದ್ದಾರೆ. ಅಪಘಾತ ಎಸೆಗಿದ ದೇವರಾಜ್‌ನನ್ನು ಬಂಧಿಸಿದ್ದಾರೆ. ಜೀವನಬೀಮಾನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪುತ್ರನ ರಕ್ಷಣೆಗೆ ಮುಂದಾದ ತಂದೆ

    ಅಪಘಾತ ಎಸೆಗಿದ ಬಳಿಕ ಚಾಲಕ ದೇವರಾಜ್ ಗಾಬರಿಗೊಂಡು ಕಾರಿನಿಂದ ಇಳಿದು ಮನೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಇದರ ಬೆನ್ನಲ್ಲೇ ದೇವರಾಜ್‌ನ ತಂದೆ ಕಾರಿನ ಚಾಲಕನ ಸೀಟಿನಲ್ಲಿ ಕುಳಿತು ತಾನೇ ಕಾರು ಚಾಲನೆ ಮಾಡುತ್ತಿದ್ದಾಗಿ ಬಿಂಬಿಸಲು ಪ್ರಯತ್ನಿಸಿದ್ದಾರೆ. ಈ ವಿಚಾರಕ್ಕೆ ಸಂತ್ರಸ್ತ ಮಕ್ಕಳ ಪಾಲಕರು ಮತ್ತು ದೇವರಾಜ್ ತಂದೆ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಅಪಘಾತದ ಬಳಿಕ ದೇವರಾಜ್ ಕಾರಿನಿಂದ ಇಳಿದು ಓಡುವುದನ್ನು ನೋಡಿದ್ದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆಯೊಳಗೆ ಬಚ್ಚಿಟ್ಟುಕೊಂಡಿದ್ದ ದೇವರಾಜ್‌ನ ಮನವೊಲಿಸಿ ಬಾಗಿಲು ತೆಗೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts