ನೈಸರ್ಗಿಕ ಮೌತ್​ ಫ್ರೆಶ್ನರ್​ಗಳ ಹುಡುಕಾಟದಲ್ಲಿದ್ದೀರಾ? ಹಾಗಿದ್ದರೆ ಒಮ್ಮೆ ಇಲ್ಲಿ ನೋಡಿ...

Mouth Freshners
Published on

ಸಾಮಾನ್ಯವಾಗಿ ಹೋಟೆಲ್‍ಗಳಲ್ಲಿ ನಾವು ತಿಂದುಂಡು ಹೊರಡುವ ಸಮಯದಲ್ಲಿ ಹೋಟೆಲ್‍ನ ಮಾಣಿ ಸಕ್ಕರೆಲೇಪಿತ ಮುಖ್ವಾಸ್ (ಮೌತ್‍ಫ್ರೆಶರ್) ಅನ್ನು ತಂದುಕೊಡುತ್ತಾನೆ. ಅದನ್ನು ನೋಡುತ್ತಲೇ ಒಂದು ಕ್ಷಣ ಮುಖ ಅರಳುವುದಂತು ನಿಜ. ಏಕೆಂದರೆ, ಇವು ಬಾಯಿಯ ದುರ್ಗಂಧ ಹೋಗಲಾಡಿಸುವುದಲ್ಲದೆ, ಹೊಟ್ಟೆ ಉಬ್ಬರ, ತೇಗು, ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಹೋಟೆಲ್​ನಲ್ಲಿರುವ ಸಣ್ಣ ಬೌಲ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೋಂಪು, ಸಣ್ಣ ಸಣ್ಣ ಬೀಜಗಳು ಮುಂತಾದ ಪರಿಚಿತ ಮಸಾಲೆಗಳನ್ನು ಒಳಗೊಂಡಿರುತ್ತದೆ. ಇದರು ಬಾಯಿ ದುರ್ಗಂಧ ಹೋಗಲಾಡಿಸಲು ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗಿವೆ. ಆದರೆ ನಿಮಗೆ ತಿಳಿದಿದೆಯೇ, ನಿಮ್ಮ ಅಡುಗೆಮನೆಯಲ್ಲಿ ಕಾಣಸಿಗುವ ಕೆಲವು ನೈಸರ್ಗಿಕ ಮತ್ತು ಸಾಮಾನ್ಯ ಪದಾರ್ಥಗಳು ಅತ್ಯುತ್ತಮ ಮೌತ್ ಫ್ರೆಶ್ನರ್​ಳಾಗಿವೆ ಎಂದು? ಇವುಗಳನ್ನು ಅಗಿಯುವುದರಿಂದ ಹಲವು ಪ್ರಯೋಜನಗಳು ಸಿಗುತ್ತವೆ. ಇವು ಬಾಯಿಯ ದುರ್ಗಂಧ ಹೋಗಲಾಡಿಸುವುದಲ್ಲದೆ, ತಿಂದ ಆಹಾರ ಜೀರ್ಣವಾಗಲು, ಹೃದಯ ಆರೋಗ್ಯ, ಚರ್ಮದ ಕಾಯಿಲೆಯಲ್ಲಿ ಸುಧಾರಣೆ ಸೇರಿದಂತೆ ಹತ್ತು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ವಿಶೇಷವಾಗಿ ನಿಮ್ಮ ಬಾಯಿಯ ಆರೋಗ್ಯ ವೃದ್ಧಿಗೆ ಇಂತಹ ಪದಾರ್ಥಗಳು ಅವಶ್ಯಕವಾಗಿವೆ. ಹೀಗೆ ನಿಮ್ಮ ಅಡುಗೆಕೋಣೆಯಲ್ಲಿರುವ ಬಹು ಉಪಯೋಗಿ 8 ಮೌತ್‍ಫ್ರೆಶ್ನರ್ ಪದಾರ್ಥಗಳನ್ನು ನಿಮಗಾಗಿ ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿ.

ಫೆನ್ನೆಲ್ ಬೀಜಗಳು ಅಥವಾ ಸೋಂಪು ಕಾಳುಗಳು

ಸೋಂಪು ಕಾಳುಗಳು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಮಸಲಾ ಪದಾರ್ಥಗಳಲ್ಲಿ ಒಂದಾಗಿದೆ. ಇದು ಮೌತ್‍ಫ್ರೆಶ್ನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಊಟದ ನಂತರ ಕೆಲವು ಸಕ್ಕರೆ ಲೇಪಿತ ಅಥವಾ ಹಾಗೆಯೇ ಸೋಂಪು ಕಾಳುಗಳನ್ನು ಜಗಿಯುವುದರಿಂದ ತಕ್ಷಣವೇ ಉಲ್ಲಾಸ ನೀಡುತ್ತದೆ. ಜತೆಗೆ ಕೆಟ್ಟ ಉಸಿರನ್ನು ನಿಯಂತ್ರಿಸುತ್ತದೆ. ಅಲ್ಲದೆ ಈ ಸಣ್ಣ ಬೀಜಗಳು ಹಲವು ಔಷಧೀಯ ಗುಣಗಳನ್ನು ಹೊಂದಿವೆ. ಈ ಬೀಜಗಳನ್ನು ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಹೊಟ್ಟೆಗೆ ಸಂಬಂಧಿಸಿದ, ಅಂತಃಸ್ರಾವಕ ಸಮಸ್ಯೆ, ಸಂತಾನೋತ್ಪತ್ತಿ ಹಾಗೂ ಉಸಿರಾಟ ಸಮಸ್ಯೆಗಳು ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರೌಷಧಿಗಳಲ್ಲಿ ಬಳಸಲಾಗುತ್ತದೆ. ಏಕೆಂದರೆ ಈ ಕಾಳುಗಳು ವಿಟಮಿನ್ ಸಿ, ಕೆ, ಇ, ಮ್ಯಾಂಗನೀಸ್, ತಾಮ್ರ, ಸತು ಮತ್ತು ರಂಜಕದಂತಹ ಅತ್ಯಮೂಲ್ಯ ಪೋಷಕಾಂಶಗಳಿಂದ ತುಂಬಿವೆ. ಇದು ಉತ್ಕರ್ಷಣಾ ನಿರೋಧಕಗಳು ಮತ್ತು ಫೈಟೋನ್ಯೂಟ್ರಿಯೆಂಟ್‍ಗಳನ್ನು ಹೊಂದಿರುವುದರಿಂದ ಆರೋಗ್ಯಕ್ಕೆ ಪೂಕರವಾಗಿದೆ.

ಫೆನ್ನೆಲ್ ಬೀಜಗಳನ್ನು ಅಗಿಯುವುದರಿಂದ ಇದು ನೈಟ್ರೇಟ್ ಬಿಡುಗಡೆಗೆ ಉತ್ತೇಜನ ನೀಡುತ್ತದೆ. ಇದು ರಕ್ತದೊತ್ತಡ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಇದು ಜೀರ್ಣಕಾರಿ ಕಿಣ್ವಗಳ ಸ್ರವಿಕೆಯನ್ನು ಉತ್ತೇಜಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಅಲ್ಲದೆ ಸತು, ಕ್ಯಾಲ್ಸಿಯಂ ಮತ್ತು ಸೆಲೆನಿಯಮ್ ನಂತಹ ಹಲವು ಖನಿಜಗಳ ಮೂಲವಾಗಿರುವುದರಿಂದ ಹಾರ್ಮೋನ್‍ಗಳ ಅಸಮತೋಲನಕ್ಕೆ ಚಿಕಿತ್ಸೆ ನೀಡಲು, ಚರ್ಮದ ವಿನ್ಯಾಸವನ್ನು ಸರಿಪಡಿಸಲು, ಮೊಡವೆಗಳ ವಿರುದ್ಧ ಹೋರಾಡಲು, ಹೊಳೆಯುವ ಚರ್ಮ ಪಡೆಯಲು ನೆರವಾಗುತ್ತದೆ. ಅಲ್ಲದೆ ಉತ್ತಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು, ಬಾಣಂತಿಯರಲ್ಲಿ ಹಾಲು ಹೆಚ್ಚಾಗಲು ಮತ್ತು ತೂಕ ನಷ್ಟದಲ್ಲೂ ಸೋಂಪು ಪರಿಣಾಮಕಾರಿಯಾಗಿದೆ ಎಂಬುದನ್ನು ಕೆಲ ಸಂಶೋಧನೆಗಳು ತಿಳಿಸಿದೆ.

ಹಸಿರು ಏಲಕ್ಕಿ ಕಾಳುಗಳು

ಪರಿಮಳಯುಕ್ತ ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವ ಏಲಕ್ಕಿ, ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಆರೋಗ್ಯ ಉತ್ತೇಜಿಸುವ ಪೋಷಕಾಂಶಗಳ ಆಗರವೇ ಆಗಿರುವ ಏಲಕ್ಕಿಯು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಬಾಷ್ಪಶೀಲ ತೈಲ(ಸಿನೋಲ್), ಫ್ಲೇವನಾಯ್ಡ್‍ಗಳಂತಹ ಹಲವು ಅಂಶಗಳನ್ನು ಹೊಂದಿದೆ. ಇದು ಉತ್ಕರ್ಷಣಾ ನಿರೋಧಕ ಮತ್ತು ಉರಿಯೂತ ತಡೆಯುವ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಬಾಯಿಯ ಕಾಯಿಲೆ ಮತ್ತು ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟಿರೀಯಾಗಳನ್ನು ತಡೆಯುತ್ತದೆ. ಇದಲ್ಲದೆ ಏಲಕ್ಕಿಯು ಜೀರ್ಣಕ್ರಿಯೆ ಸಂಬಂಧಿತ ಕಾಯಿಲೆ ಹಾಗೂ ಹೃದಯದ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ.

ಹುರಿದ ಕೊತ್ತಂಬರಿ ಬೀಜಗಳು

ಹುರಿದ ಕೊತ್ತಂಬರಿ ಬೀಜಗಳು ಮುಖ್ವಾಸ್‍ನಲ್ಲಿನ ಪ್ರಮುಖ ಘಟಕವಾಗಿದೆ. ಇದು ಅತ್ಯುತ್ತಮ ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿದೆ. ಪ್ರತಿ ಭಾರತೀಯ ಅಡುಗೆಮನೆಯಲ್ಲಿಯೂ ಕಂಡುಬರುವ ಈ ಮಸಾಲೆ ಪದಾರ್ಥ ಇದರ, ಸುವಾಸನೆಯಿಂದಲೇ ಹೆಸರು ಪಡೆದಿದೆ. ಕೊತ್ತಂಬರಿ ಬೀಜಗಳಲ್ಲಿ ಸಿಟ್ರೋನೆಲೊಲ್ ಎಂಬ ಸಂಯುಕ್ತವು ಉಸಿರಾಟವನ್ನು ರಿಫ್ರೆಶ್ ಮಾಡುತ್ತದೆ. ಇದರ ನಂಜುನಿರೋಧಕ ಗುಣದಿಂದಾಗಿ ಬಾಯಿಯಲ್ಲಿನ ಗಾಯಗಳು ಮತ್ತು ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಬೀಜಗಳು ಫೈಟೊನ್ಯೂಟ್ರಿಯೆಂಟ್‍ಗಳು ಮತ್ತು ವಿಟಮಿನ್‍ಗಳಿಂದ ತುಂಬಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ ಆ್ಯಂಟಿಬ್ಯಾಕ್ಟಿರಿಯಲ್ ಮತ್ತು ಆಂಟಿಫಂಗಲ್ ಲಕ್ಷಣಗಳನ್ನು ಹೊಂದಿದೆ. ಅಧ್ಯಯನದ ಪ್ರಕಾರ, ಕೊತ್ತಂಬರಿ ಬೀಜಗಳಲ್ಲಿರುವ ಸಾರಭೂತ ತೈಲಗಳು ನಿದ್ರಾಜನಕ ಗುಣಗಳನ್ನು ಹೊಂದಿದ್ದು, ನರಗಳಿಗೆ ವಿಶ್ರಾಂತಿ ನೀಡಲು ಮತ್ತು ನಿದ್ದೆಯನ್ನು ಪ್ರೇರೆಪಿಸುತ್ತದೆ.

ಗುಲ್ಕಂದ್

ತಾಜಾ ಗುಲಾಬಿ ದಳಗಳು ಮತ್ತು ಸಕ್ಕರೆಯಿಂದ ತಯಾರಿಸಿದ ಈ ಸಿಹಿಲೇಪನ, ಪುರಾತನ ಮತ್ತು ಜನಪ್ರಿಯ ತಿನಿಸಾಗಿದೆ. ಇದರ ಪೌಷ್ಟಿಕಾಂಶ ಮತ್ತು ಗುಣಪಡಿಸುವ ಅಂಶಗಳಿಂದಾಗಿ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಜತೆಗೆ ಉತ್ತಮ ಮೌತ್‍ಫ್ರೆಶ್ನರ್ ಕೂಡ ಹೌದು. ಇದು ಬಾಯಿಯ ಹುಣ್ಣುಗಳನ್ನು ಗುಣಪಡಿಸುವುದಲ್ಲದೆ, ಪೀಡಿತ ಪ್ರದೇಶದ ಸುತ್ತಲಿನ ಜಾಗವನ್ನು ತಂಪಾಗಿಸುತ್ತದೆ. ಗುಲ್ಕನ್‍ನಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದಲ್ಲದೆ ಅಸಿಡಿಟಿ, ಜಠರದುರಿತ, ಅಜೀರ್ಣ ಮುಂತಾದ ಜೀರ್ಣಕಾರಿ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದರ ಆ್ಯಂಟಿಬ್ಯಾಕ್ಟಿರಿಯಲ್ ಮತ್ತು ಆ್ಯಂಟಿವೈರಲ್ ಲಕ್ಷಣಗಳು ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೊಡವೆ, ವೈಟ್‍ಹೆಡ್, ಬ್ಲಾಕ್‍ಹೆಡ್ ಸೇರಿದಂತೆ ವಿವಿಧ ಚರ್ಮದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಪುದೀನ ಎಲೆಗಳು

ಇದರ ವಿಶಿಷ್ಟ ಮತ್ತು ರಿಫ್ರೆಶ್ ಸುವಾಸನೆಯಿಂದಲೇ ಹೆಸರು ಪಡೆದಿರುವ ಪುದೀನ ಎಲೆಗಳು, ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಟೂತ್‍ಪೇಸ್ಟ್, ಮೌತ್‍ವಾಶ್‍ಗಳು, ಚೂಯಿಂಗ್ ಗಮ್‍ಗಳು ಹಾಗೂ ಒಸಡುಗಳ ಮೌಖಿಕ ನೈರ್ಮಲ್ಯ ಉತ್ಪನ್ನಗಳಲ್ಲಿ ಪುದೀನ ಎಲೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಪುದೀನ ಎಲೆಗಳು ವಿಟಮಿನ್ ಸಿ, ಎ, ಮ್ಯಾಂಗನೀಸ್, ಕಬ್ಬಿಣ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ಎಲೆಗಳನ್ನು ಅಗಿಯುವುದರಿಂದ ಬಾಯಿಯ ದುರ್ವಾಸನೆ ಕಡಿಮೆ ಆಗುವುದಲ್ಲದೆ, ಇಂತಹ ಬ್ಯಾಕ್ಟಿರೀಯಾಗಳ ವಿರುದ್ಧವೂ ಹೋರಾಡುತ್ತದೆ. ಇದರ ಸಾರವು ಕರುಳಿನ ಆರೋಗ್ಯ ಸುಧಾರಿಸುವುದಲ್ಲದೆ, ಮಲಬದ್ಧತೆಗೆ ಪರಿಹಾರವನ್ನು ನೀಡುತ್ತದೆ.

ಲವಂಗ

ಲವಂಗ ಮರಗಳ ಮೊಗ್ಗುಗಳು ಮತ್ತೊಂದು ಮಸಾಲೆಪದಾರ್ಥವಾಗಿದ್ದು, ಭಾರತೀಯರ ಅಡುಗೆಯಲ್ಲಿ ಗಾಢವಾದ ಪರಿಮಳ ಸೂಸುವ ಪದಾರ್ಥವಾಗಿದೆ. ಅಲ್ಲದೆ ಇದು ಅತ್ಯಂತ ಪರಿಣಾಮಕಾರಿ ಮೌತ್‍ಫ್ರೆಶ್ನರ್ ಕೂಡ ಆಗಿದೆ. ಲವಂಗವು ಬ್ಯಾಕ್ಟಿರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಬಾಯಿಯಲ್ಲಿ ಸೂಕ್ಷ್ಮಾಣುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜತೆಗೆ ಒಸಡುಗಳಲ್ಲಿ ರಕ್ತಸ್ರಾವ, ಹಲ್ಲಿನ ಕ್ಷಯ ಮುಂತಾದ ಹಲವು ಬಾಯಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಪರಿಮಳಯುಕ್ತ ಮಸಾಲೆಯಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ. ಇದರಲ್ಲಿ ಯುಜೆನಾಲ್ ಎಂಬ ಸಂಯುಕ್ತವಿದ್ದು, ಇದು ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿ.

ಪೇರಲ ಎಲೆಗಳು

ಬಾಯಿ ದುರ್ವಾಸನೆ ಹೋಗಲಾಡಿಸಲು ನೈಸರ್ಗಿಕ ಪರಿಹಾರ ಹುಡುಕುತ್ತಿರುವವರಿಗೆ ಪೇರಲೆ ಎಲೆಗಳು ಅತ್ಯುತ್ತಮ ಆಯ್ಕೆ. ಹಲವು ಅಧ್ಯಯನಗಳ ಪ್ರಕಾರ ಪೇರಲೆ ಎಲೆಯ ಸಾರವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಆದ್ದರಿಂದ ಈ ಎಲೆಗಳನ್ನು ಜಗಿಯುವುದರಿಂದ ಊದಿಕೊಂಡ ಒಸಡುಗಳ ಉರಿಯೂತ ಹಾಗೂ ಒಸಡುಗಳ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.

ತುಳಸಿ ಎಲೆಗಳು

ಈ ತುಳಸಿ ಎಲೆಗಳು ಅತ್ಯಂತ ಸುಲಭವಾಗಿ ಕೈಗೆಟಕುವ ಹಾಗೂ ಮನೆಗಳಲ್ಲೇ ಲಭ್ಯವಿರುವ ಮೌತ್‍ಫ್ರೆಶ್ನರ್​ಗಳಲ್ಲಿ ಒಂದಾಗಿದೆ. ಬಾಯಿಯ ಕುಳಿಯಲ್ಲಿನ ಹುಣ್ಣುಗಳು ಮತ್ತು ಸೋಂಕು ಗುಣಪಡಿಸಲು ಈ ಎಲೆಗಳನ್ನು ಅಗಿಯುವುದು ಸಾಕಷ್ಟು ಪರಿಣಾಮಕಾರಿಯಾಗಿದೆ. ಇದಲ್ಲದೆ ಪಯೋರಿಯಾ ಮತ್ತು ಇತರ ಒಸಡುಗಳ ಅಸ್ಟಸ್ಥತೆಗೂ ಒಳ್ಳೆಯದು. ತುಳಸಿ ಎಲೆಗಳು ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‍ಗಳಾದ ಯುಜೆನಾಲ್ ಅನ್ನು ಒಳಗೊಂಡಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವ ಜೈವಿಕ ಸಕ್ರಿಯ ಸಂಯುಕ್ತವಾಗಿದೆ. ಎಲೆಗಳಲ್ಲಿರುವ ಸಾರಭೂತ ತೈಲಗಳು ಜೀರ್ಣಕ್ರಿಯೆ ಹಾಗೂ ಹಲವು ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಪರಿಹಾರೋಪಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net