

ಬೆಂಗಳೂರು: ಕಿವಿಹಣ್ಣಿನ ಸೇವನೆ ಆರೋಗ್ಯಕ್ಕೆ ಬಹುಪ್ರಯೋಜನಕಾರಿಯಾಗಿದೆ. ಇದು ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುವ ಸಂಪದ್ಭರಿತ ಹಣ್ಣಾಗಿದ್ದು, ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಸೂಕ್ಷ್ಮ ರೋಮಗಳಿಂದ, ಕಂದುಬಣ್ಣದಲ್ಲಿ ಮೊಟ್ಟೆ ಆಕಾರದಲ್ಲಿರುವ ಕಿವಿಹಣ್ಣು ವಿಟಮಿನ್ ಸಿ ಪೋಷಕಾಂಶದ ಸಮೃದ್ಧ ಆಗರವಾಗಿದೆ. ಈ ಹಣ್ಣುಗಳು ಹುಳಿಮಿಶ್ರಿತ ಸಿಹಿ ರುಚಿ ಹೊಂದಿದ್ದು, ಕಂದು ಬಣ್ಣದ ಸಿಪ್ಪೆ ಸುಲಿದರೆ ತಿಳಿ ಹಸಿರಿನ ತಿರುಳಿನಲ್ಲಿ ಸಣ್ಣ ಸಣ್ಣ ಕಪ್ಪು ಬೀಜಗಳೊಂದಿಗೆ ವಿಶಿಷ್ಟ ಪರಿಮಳ ಸೂಸುತ್ತದೆ.
ಕಿವಿಯು ಫೈಬರ್, ವಿಟಮಿನ್ ಸಿ, ಪೋಲೇಟ್, ತಾಮ್ರ, ಪೊಟ್ಯಾಶಿಯಂ, ಉತ್ಕರ್ಷಣಾ ನಿರೋಧಕಗಳು, ವಿಟಮಿನ್ ಇ ಮತ್ತು ಕೆ ಯಂತಹ ಸಂಪೂರ್ಣ ಶ್ರೇಣಿಯ ಪೋಷಕಾಂಶಗಳನ್ನು ಹೊಂದಿದೆ. ಕಿವಿಹಣ್ಣು ವಾರ್ಷಿಕ ಬೆಳೆಯಾಗಿದ್ದು, ಎಲ್ಲ ಋತುಮಾನದಲ್ಲಿಯೂ ದೊರಕುವ ಹಣ್ಣು. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನವೆಂಬರ್ನಿಂದ ಮೇ ವರೆಗೆ ಕಿವಿಹಣ್ಣು ಬೆಳೆದರೆ, ನ್ಯೂಜಿಲ್ಯಾಂಡ್‍ನಲ್ಲಿ ಜೂನ್‍ನಿಂದ ಅಕ್ಟೋಬರ್ವರೆಗೆ ಕಿವಿಹಣ್ಣು ಕೃಷಿ ಮಾಡುತ್ತಾರೆ.
ಈ ಕಿವಿಹಣ್ಣಿನಲ್ಲಿ 50 ವಿವಿಧ ಪ್ರಭೇದಗಳಿದ್ದು, ಇದರ ತಿರುಳು ಚಿನ್ನದ ಬಣ್ಣದ ಕಸ್ಟರ್ಡ್‍ನಂತಹ ಬಣ್ಣ ಹೊಂದಿದ್ದರೆ, ಮತ್ತೆ ಕೆಲವು ತಿಳಿಗುಲಾಬಿ ಬಣ್ಣದಿಂದ ಹಾಗೂ ರುಚಿಯಿಂದಲೂ ವೈವಿಧ್ಯತೆ ಹೊಂದಿವೆ. ಇವುಗಳ ಹೊರಮೈ ಒಂದೇ ತರಹ ಇದ್ದರೂ, ಒಳಗಿನ ತಿರುಳಿನ ಬಣ್ಣ ಮಾತ್ರ ಬೇರೆ ಬೇರೆಯಾಗಿರುತ್ತದೆ.
ಕಿವಿಹಣ್ಣು ಅತಿಹೆಚ್ಚು ವಿಟಮಿನ್ ಸಿ ಅಂಶವನ್ನು ಹೊಂದಿದೆ ಎಂದು ನಾವು ಕೇಳಿದ್ದೇವೆ. ಆದರೆ ಅದರೊಂದಿಗೆ ನೀವು ನಂಬಲಾಗದ ಅದೆಷ್ಟೋ ಪೌಷ್ಟಿಕಾಂಶಗಳು ಇದರಲ್ಲಿ ಸೇರಿವೆ.
100 ಗ್ರಾಂ ಕಚ್ಚಾ ಕಿವಿ ಹಣ್ಣಿನ ಪೌಷ್ಟಿಕಾಂಶದ ವಿವರ: ಶೇ.61 ಕ್ಯಾಲರಿಗಳು, ಶೇ.0.5 ಗ್ರಾಂ ಕೊಬ್ಬು, 3 ಮಿಗ್ರಾಂ ಸೋಡಿಯಂ, 15 ಗ್ರಾಂ ಕಾರ್ಬೋಹೈಡ್ರೇಟ್‍ಗಳು, 9 ಗ್ರಾಂ ಸಕ್ಕರೆ, 3 ಗ್ರಾಂ ಆಹಾರದ ಫೈಬರ್, 1.1 ಗ್ರಾಂ ಪ್ರೋಟೀನ್.
ಆಸ್ಕೋರ್ಬಿಕ್ ಆಮ್ಲ ಎಂದೂ ಕರೆಯಲ್ಪಡುವ ವಿಟಮಿನ್ ಸಿ ದೇಹದ ಅಂಗಾಂಶಗಳ ಬೆಳವಣಿಗೆ, ದುರಸ್ತಿ ಮತ್ತು ನಮ್ಮ ರೋಗನಿರೋಧಕಶಕ್ತಿ ವೃದ್ಧಿಗೆ ಕಾರಣವಾಗಿದೆ. ವಿಟಮಿನ್ ಸಿ ಜತೆಗೆ, ಕಿವಿ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಕೆ ಹೊಂದಿದೆ.
ವಿಟಮಿನ್ ಕೆ, ಕೊಬ್ಬಿನಲ್ಲಿ ಕರಗುವ ಪೌಷ್ಟಿಕಾಂಶವಾಗಿದ್ದು, ಇದು ರಕ್ತ ಹೆಪ್ಪುಗಟ್ಟುವಿಕೆ, ಚಯಾಪಚಯ ಮತ್ತು ರಕ್ತದ ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸುತ್ತದೆ. ತಾಮ್ರವು ಕೆಂಪು ರಕ್ತಕಣಗಳನ್ನು ರೂಪಿಸಲು ಕಬ್ಬಿಣದೊಂದಿಗೆ ಕೆಲಸ ಮಾಡುವ ಪೋಷಕಾಂಶವಾಗಿದೆ. ಆರೋಗ್ಯಕರ ಮೂಳೆಗಳು, ನರಗಳು ಮತ್ತು ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುವುದಲ್ಲದೆ, ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕಿವಿ ಸರಿಯಾದ ಪ್ರಮಾಣದಲ್ಲಿ ಫೋಲೇಟ್, ಪೊಟ್ಯಾಶಿಯಂ ಮತ್ತು ಫೈಬರ್ ಅಂಶವನ್ನು ಹೊಂದಿದೆ.