

ಕಡಬ: ತಾಲೂಕಿನ ರೆಂಜಿಲಾಡಿ ಗ್ರಾಮದ ಎಂಡೋ ಪೀಡಿತ ಯುವಕ ಮೂಗಿನ ಶಸ್ತ್ರಚಿಕಿತ್ಸೆ ವೇಳೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ರೆಂಜಿಲಾಡಿ ಗ್ರಾಮದ ಪಲ್ಲತ್ತಡ್ಕ ನಿವಾಸಿ ಭಾಸ್ಕರ ಗೌಡ-ರೇವತಿ ದಂಪತಿಯ ಪುತ್ರ ಮನೋಜ್(24) ಮೃತಪಟ್ಟವರು. ಮನೋಜ್ಗೆ ಮೂಗಿನಲ್ಲಿ ದುರ್ಮಾಂಸ ಬೆಳೆದು ತೊಂದರೆ ಉಂಟಾಗುತ್ತಿತ್ತು. ಇದೇ ಕಾರಣಕ್ಕೆ ಏಳು ಬಾರಿ ಶಸ್ತ್ರಚಿಕಿತ್ಸೆ ನಡೆಸಿ ಫಲಕಾರಿಯಾಗಿತ್ತು. ಲವಲವಿಕೆಯಿಂದ ಇದ್ದ ಈತನಿಗೆ ಇತ್ತೀಚೆಗೆ ಮತ್ತೆ ಮೂಗಿನಲ್ಲಿ ದುರ್ಮಾಂಸ ಬೆಳೆದಾಗ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಗುರುವಾರ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ವೇಳೆ ಯುವಕ ಮೃತಪಟ್ಟಿದ್ದಾರೆ.
ಮನೋಜ್ ಕುಟುಂಬ ತೀರ ಬಡತನದಲ್ಲಿದ್ದು, ತಂದೆ ಕೂಲಿ ಕೆಲಸ ಮಾಡುತ್ತಾರೆ. ತಾಯಿ ಗೃಹಿಣಿ. ಓರ್ವ ಸಹೋದರಿಯನ್ನು ಮದುವೆ ಮಾಡಿಕೊಡಲಾಗಿದೆ. ಮನೋಜ್ ದ್ವಿತೀಯ ಪಿಯುಸಿ ತನಕ ಶಿಕ್ಷಣ ಪಡೆದಿದ್ದು, ಸ್ವಾವಲಂಬಿಯಾಗಿ ಬದುಕಬೇಕೆಂಬ ಛಲವಿತ್ತು. ತಾನು ಮನೆಯವರಿಗೆ ಹೊರೆಯಾಗಬಾರದು ಎಂದು ಆಡು ಸಾಕಣೆ ಮಾಡುತ್ತಿದ್ದರು. ಬಳಿಕ ನಾಟಿ ಕೋಳಿ ಸಾಕಣೆ ಪ್ರಾರಂಭಿಸಿದ್ದರು. ಇತ್ತೀಚೆಗೆ ದೀಪದ ಬತ್ತಿ ತಯಾರಿಸುವ ಸ್ವ-ಉದ್ಯೋಗ ಪ್ರಾರಂಭಿಸಿದ್ದರು. ಸಾಲ ಮಾಡಿ ಯಂತ್ರ ಖರೀದಿಸಿದ್ದರು.