More

    ಮೇವು ಕೊರತೆ, ಹಾಲು ಉತ್ಪಾದನೆ ಇಳಿಕೆ

    ಪುರುಷೋತ್ತಮ ಪೆರ್ಲ ಕಾಸರಗೋಡು

    ದಿನಗಳೆದಂತೆ ಬಿಸಿಲಿನ ಉರಿ ಏರುತ್ತಲೇ ಇದ್ದು, ಮನುಷ್ಯರ ಜತೆಗೆ ಪ್ರಾಣಿಗಳಿಗೂ ಇದರ ಪರಿಣಾಮ ತಟ್ಟಲಾರಂಭಿಸಿದೆ. ಬಿಸಿಲಿನ ತಾಪಕ್ಕೆ ಪಶುಸಂಗೋಪನೆ ಸವಾಲಾಗಿ ಪರಿಣಮಿಸಿದ್ದು, ನೀರಿನ ಅಭಾವದಿಂದ ಮೇವು, ಹುಲ್ಲಿನ ಕೊರತೆ ಕಾಣಲಾರಂಭಿಸಿದೆ.

    ಸರ್ಕಾರಿ ಹಾಗೂ ಖಾಸಗಿ ಗೋಶಾಲೆಗಳಿಗೆ ಮೇವಿನ ಬರ ಎದುರಾಗಿದ್ದು, ಹಾಲು ಉತ್ಪಾದನೆಯಲ್ಲಿ ಇಳಿಕೆಯಾಗಿದೆ. ಬೇಳದಲ್ಲಿ ಸರ್ಕಾರಿ ಫಾರ್ಮ್ ಹಾಗೂ ಬಜಕೂಡ್ಲಿನಲ್ಲಿ ಹೊಸನಗರ ಮಠದ ಆಡಳಿತದ ಖಾಸಗಿ ಗೋಶಾಲೆ ಕಾರ್ಯನಿರ್ವಹಿಸುತ್ತಿದ್ದು, ಮೇವಿನ ಕೊರತೆಯ ಬಿಸಿ ಇಲ್ಲಿಗೂ ತಟ್ಟಿದೆ. ದಿನಕ್ಕೆ 25ಲೀಟರ್ ಹಾಲು ನೀಡುತ್ತಿದ್ದ ಹಸು ತಾಪಮಾನ ಏರಿಕೆ ಕಾರಣದಿಂದ 20 ಲೀ.ಗೂ ಕಡಿಮೆ ಹಾಲು ನೀಡುತ್ತದೆ ಎಂದು ಕೃಷಿಕರು ತಿಳಿಸಿದ್ದಾರೆ. ಕೆಲವರಂತೂ ತಮ್ಮ ಜಾನುವಾರುಗಳನ್ನು ಮಾರಾಟ ಮಾಡಿದ್ದಾರೆ.

    ಹೆಚ್ಚುತ್ತಿರುವ ಬಿಸಿಲಿನ ಉರಿಯಿಂದಾಗಿ ಪಶುಗಳ ಆರೋಗ್ಯದಲ್ಲಿಯೂ ಏರುಪೇರಾಗುತ್ತಿದೆ. ಜೋರಾದ ಉಸಿರಾಟ, ತೆರೆದ ಬಾಯಿಯಿಂದ ಉಸಿರಾಟ, ವಿಪರೀತ ಜೊಲ್ಲು ಸುರಿಸುವುದು ಇತ್ಯಾದಿ ಕಂಡುಬರುತ್ತಿದೆ. ಇದು ಹಸುವಿನ ಜೀವಕ್ಕೂ ಅಪಾಯ ತರಬಲ್ಲದು. ಕಾಸರಗೋಡು ಜಿಲ್ಲೆಯಲ್ಲಿ ಮಿಶ್ರತಳಿ ಜರ್ಸಿ ಮತ್ತು ಹೋಲ್‌ಸ್ಟೈನ್ ಫ್ರೈಸಿಯನ್ ಹಸುಗಳನ್ನು ಹೆಚ್ಚಾಗಿ ಸಾಕಲಾಗುತ್ತದೆ. ಸ್ಥಳೀಯ ಹಸುಗಳಿಗೆ ಹೋಲಿಸಿದರೆ ಕೃತಕ ಗರ್ಭಧಾರಣೆಯ ಮೂಲಕ ಪಡೆದ ಇಂತಹ ಹಸುಗಳಿಗೆ ಉಷ್ಣಾಂಶ ಮತ್ತು ವಾತಾವರಣದ ತೇವಾಂಶ ತಡೆದುಕೊಳ್ಳುವ ಸಾಮರ್ಥ್ಯ ತೀರಾ ಕಡಿಮೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.

    ಹಾಲು ಉತ್ಪಾದನೆ ಕುಸಿತ

    ಕಾಸರಗೋಡು ಜಿಲ್ಲೆಯಲ್ಲಿ 145 ಹಾಲು ಅಭಿವೃದ್ಧಿ ಸಂಘಗಳಿದ್ದು, ಫೆಬ್ರವರಿ ತನಕ ನಿತ್ಯವೂ 67 ಸಾವಿರ ಲೀ. ಹಾಲು ಸಂಗ್ರಹಿಸಲಾಗುತ್ತಿತ್ತು. ಮಾರ್ಚ್‌ನಲ್ಲಿ ಇದು 56 ಸಾವಿರ ಲೀ.ಗೆ ಕುಸಿದಿದೆ. ಏಪ್ರಿಲ್‌ನಲ್ಲಿ ಮತ್ತೂ 2 ಸಾವಿರ ಲೀ.ಕಡಿಮೆಯಾಗಿದ್ದು, ಕೇವಲ ಮೂರು ತಿಂಗಳಲ್ಲೇ 13 ಸಾವಿರ ಲೀ. ಹಾಲು ಉತ್ಪಾದನೆ ಕುಸಿತವಾಗಿರುವ ವಿಚಾರ ಹೈನುಗಾರರಲ್ಲಿ ಆತಂಕ ತಂದೊಡ್ಡಿದೆ.

    ನಿಯಂತ್ರಣ ಕೊಠಡಿ ಸ್ಥಾಪನೆ

    ಪಶುಗಳಿಗೆ ಬರುವ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾ ಪಶುಸಂಗೋಪನಾ ಇಲಾಖೆ ಸನ್ನದ್ಧವಾಗಿದ್ದು, ಹೈನುಗಾರರಿಗೆ ಮಾಹಿತಿ ನೀಡಲು ನಿಯಂತ್ರಣ ಕೊಠಡಿ ತೆರೆದಿದೆ. ಹೈನುಗಾರರು ಪಶುಸಂಗೋಪನೆಗೆ ಸಂಬಂಧಿಸಿದ ಮಾಹಿತಿಯನ್ನು 04994224624 ಸಂಖ್ಯೆಗೆ ಕರೆ ಮಾಡಿ ಪಡೆಯಬಹುದು.

    ನೀರು, ಹಸಿಹುಲ್ಲು ಲಭ್ಯವಿಲ್ಲದಿರುವುದರಿಂದ ಜಾನುವಾರುಗಳ ಆರೋಗ್ಯ ರಕ್ಷಣೆ ಹೈನುಗಾರರಿಗೆ ಸವಾಲಾಗಿದೆ. ಹಾಲು ಉತ್ಪಾದನೆಯಲ್ಲೂ ಕುಸಿತ ಉಂಟಾಗಿದ್ದನ್ನು ಮನಗಂಡು ಎಲ್ಲ ಪಶು ವೈದ್ಯರನ್ನು ಸಂಪರ್ಕಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
    ಉಷಾದೇವಿ, ಸಹಾಯ ನಿರ್ದೇಶಕಿ, ಡೇರಿ ಅಭಿವೃದ್ಧಿ ಇಲಾಖೆ ಕಾಸರಗೋಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts