

ಥೋಟಂಬೆಡು: ಮನೆಯನ್ನು ಬಿಟ್ಟು ಹಾಸ್ಟೆಲ್ನಲ್ಲಿ ಇರಲಾಗದೇ ಮತ್ತು ಓದಿನ ಒತ್ತಡವನ್ನು ಸಹಿಸದೇ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ತೆಲಗುಗಂಗಾ ಕಾಲವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಥೋಟಂಬೆಡು ಮಂಡಲದಲ್ಲಿ ನಡೆದಿದೆ.
ಚೈತನ್ಯ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಥೋಟಂಬೆಡು ಮಂಡಲದ ಕರಕೊಲ್ಲು ಮೂಲದವಳು. ಶನಿವಾರ ಶಿವನಾಥಪಾಳ್ಯಂನ ತೆಲುಗುಗಂಗಾ ಕಾಲುವೆಗೆ ಹಾರಿ ಮೃತಪಟ್ಟಿದ್ದಾಳೆ. ಆಕೆಯ ಮೃತದೇಹ ಭಾನುವಾರ ಪತ್ತೆಯಾಗಿದೆ. ಸಬ್ ಇನ್ಸ್ಪೆಕ್ಟರ್ ರಾಘವೇಂದ್ರರ ಪ್ರಕಾರ, ಚೈತನ್ಯ ನೆಲ್ಲೂರು ಜಿಲ್ಲೆಯ ಕಾಲೇಜೊಂದರಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಳು. ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದಳು. ತಂದೆಗೆ ಫೋನ್ ಮಾಡಿದ್ದ ಚೈತನ್ಯ, ನನಗೆ ಹಾಸ್ಟೆಲ್ನಲ್ಲಿ ಇರಲು ಆಗುತ್ತಿಲ್ಲ. ಇಲ್ಲಿ ಸಾಕಷ್ಟು ಕೊರತೆ ಇದೆ. ನನಗೆ ಮನೆಯನ್ನು ಬಿಟ್ಟು ದೂರ ಇರಲು ಆಗುತ್ತಿಲ್ಲ ಮತ್ತು ಓದಿನ ಒತ್ತಡವನ್ನು ನನ್ನಿಂದ ಸಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಳು.
ಈಗಾಗಲೇ 50 ಸಾವಿರ ಪಾವತಿಸಿದ್ದೇನೆ. ಈ ವರ್ಷ ಅಲ್ಲಿಯೇ ಉಳಿದುಕೊಂಡು ಓದಿನ ಕಡೆ ಗಮನಹರಿಸು ಎಂದು ತಂದೆ ಸಮಾಧಾನಕರ ಮಾತುಗಳನ್ನಾಡಿದ್ದಾರೆ. ಇದರ ನಡುವೆ ಶುಕ್ರವಾರ ಚೈತನ್ಯ ಮನೆಗೆ ಮರಳಿದ್ದಾರೆ. ಬಳಿಕ ಶನಿವಾರ ಹೊಸ ವರ್ಷ ಹಿನ್ನೆಲೆಯಲ್ಲಿ ಕುಟುಂಬಸ್ಥರೆಲ್ಲ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮನೆಗೆ ಮರಳಿದ್ದಾರೆ. ಈ ವೇಳೆ ನಾನು ಕಾಲೇಜಿಗೆ ಹೋಗುವುದಿಲ್ಲ ಎಂದು ಚೈತನ್ಯ ಹೇಳಿದ್ದಾಳೆ. ಆದರೆ, ಪಾಲಕರು ಆಕೆಯನ್ನು ಗದರಿ, ಈ ವರ್ಷ ಶಿಕ್ಷಣ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ.
ಇದರಿಂದ ಮನನೊಂದ ಚೈತನ್ಯ ಮನೆಬಿಟ್ಟು ಹೋಗಿ ತನ್ನ ಮೊಬೈಲ್ ಅನ್ನು ಶಿವನಾಥಪಾಳ್ಯಂನಲ್ಲಿರುವ ತೆಲುಗುಗಂಗಾ ಕಾಲುವೆಯ ದಡದಲ್ಲಿ ಇಟ್ಟು ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲುವೆ ದಡದಲ್ಲಿ ಮೊಬೈಲ್ ಇರುವುದನ್ನು ನೋಡಿದ ವ್ಯಕ್ತಿಯೊಬ್ಬ ಆಕೆಯ ಪಾಲಕರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ಗ್ರಾಮಸ್ಥರೆಲ್ಲ ಸೇರಿ ಶನಿವಾರ ರಾತ್ರಿ ಚೈತನ್ಯ ಮೃತದೇಹವನ್ನು ಹುಡುಕಿದ್ದಾರೆ. ಆದರೆ, ಭಾನುವಾರ ಬೆಳಗ್ಗೆ ಶಿವನಾಥಪಾಳ್ಯಂ ಬಳಿ ಆಕೆಯ ಮೃತದೇಹ ಪತ್ತೆಯಾಗಿದೆ. ಆಕೆಯ ಮೃತದೇಹವನ್ನು ಪೊಲೀಸರು ಶ್ರೀಕಾಳಹಸ್ತಿ ಏರಿಯಾದ ಆಸ್ಪತ್ರೆಗೆ ಸ್ಥಳಾಂತರಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಗಳನ್ನು ಕಳೆದುಕೊಂಡು ಕುಟುಂಬ ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. (ಏಜೆನ್ಸೀಸ್)