More

    ಕಚೇರಿಯಲ್ಲಿ ನೇಣಿಗೆ ಯತ್ನಿಸಿದ ಮಹಿಳಾ ಅಧಿಕಾರಿ: ಪ್ರಭಾವಿ ಚುನಾಯಿತ ಪ್ರತಿನಿಧಿಯಿಂದ ಕಿರುಕುಳ

    | ಪಂಪಾರಡ್ಡಿ ಅರಳಹಳ್ಳಿ ಕಾರಟಗಿ (ಕೊಪ್ಪಳ)

    ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ಮತ್ತು ಡಿವೈಎಸ್ಪಿ ಎಂ.ಕೆ.ಗಣೇಶ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ತಡವಾಗಿ ಗೊತ್ತಾಗಿದೆ.

    ಮಹಿಳಾ ಅಧಿಕಾರಿಯೊಬ್ಬರು ಕಳೆದ ಡಿ.13ರ ಸಂಜೆ ಬಿಜೆಪಿ ಚುನಾಯಿತ ಪ್ರತಿನಿಧಿ ಮತ್ತು ಪ್ರಭಾವಿ ನಾಯಕರೊಬ್ಬರ ಜತೆ ದೂರವಾಣಿಯಲ್ಲಿ ಆವೇಶ ಭರಿತರಾಗಿ ಮಾತನಾಡುತ್ತ ಕಚೇರಿಯಲ್ಲೇ ನೇಣು ಹಾಕಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದ್ದು, ಇದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

    ಕಚೇರಿಯಲ್ಲಿದ್ದ ಮಹಿಳಾ ಅಧಿಕಾರಿ, ಪ್ರಭಾವಿ ನಾಯಕನೊಂದಿಗೆ ದೂರವಾಣಿ ಮೂಲಕ ಸುದೀರ್ಘ ವಾಗ್ವಾದ ನಡೆಸಿದ್ದು, ಬಳಿಕ ಕಚೇರಿಯ ಬಾಗಿಲು ಮುಚ್ಚಿಕೊಂಡು ಸೀರೆ ಸೆರಗಿನಿಂದ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾರೆ. ಇದನ್ನು ಕಂಡ ಸಿಬ್ಬಂದಿ ಬಾಗಿಲನ್ನು ಮುರಿದು ಅವರನ್ನು ಕೆಳಗಿಳಿಸಿ ಸಂತೈಸಿದ್ದಾರೆ.

    ನಂತರ ತುಸು ಚೇತರಿಸಿಕೊಂಡ ಮಹಿಳಾಧಿಕಾರಿ, ಇಲಾಖೆ ಕಾರ್​ನಲ್ಲಿ ಚುನಾಯಿತ ಪ್ರತಿನಿಧಿ ವಿರುದ್ಧ ದೂರು ನೀಡಲು ಎಸ್ಪಿ ಕಚೇರಿಗೆ ತೆರಳಲು ನಿರ್ಧರಿಸಿದ್ದರು. ಕೊಪ್ಪಳಕ್ಕೆ ತೆರಳುತ್ತಿದ್ದ ಇವರ ಕಾರನ್ನು ಮಾರ್ಗಮಧ್ಯೆ ನಾಯಕನ ಬೆಂಬಲಿಗರು ಅಡ್ಡಗಟ್ಟಿದರು. ಇದರಿಂದ ಆಕ್ರೋಶಗೊಂಡ ಮಹಿಳಾಧಿಕಾರಿ ಚೀರಾಡಿದ್ದು, 112 ಪೊಲೀಸ್ ವಾಹನಕ್ಕೆ ಕರೆ ಮಾಡಿದ್ದಾರೆ. ಇದರಿಂದ ಹಿಂಬಾಲಕರು ಹಿಂದೆ ಸರಿದರು. ಅಷ್ಟರಲ್ಲಿ ಸ್ವತಃ ರಾಜಕೀಯ ಪ್ರಭಾವಿ ನಾಯಕ ಧಾವಿಸಿದ್ದು, ಹೊಸೂರು ಕ್ರಾಸ್​ನಲ್ಲಿ ಮಹಿಳಾಧಿಕಾರಿ ಕಾರನ್ನು ಅಡ್ಡಗಟ್ಟಿದ್ದಾರೆ.

    ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ರಾಜಕೀಯ ನಾಯಕನ ಕೊರಳು ಪಟ್ಟಿ ಹಿಡಿದು ಮಹಿಳಾಧಿಕಾರಿ ಎಳೆದಾಡಿದ್ದಾರೆ. ಬಳಿಕ ಅಧಿಕಾರಿಯೊಂದಿಗೆ ಪ್ರಭಾವಿ ರಾಜಕೀಯ ನಾಯಕ ಸರ್ಕಾರಿ ಕಾರಿನಲ್ಲಿ ಕೂತಿದ್ದರು. ಎಸ್ಪಿ ಕಚೇರಿಗೆ ತೆರಳುವಂತೆ ಚಾಲಕನಿಗೆ ಮಹಿಳಾಧಿಕಾರಿ ಹೇಳುತ್ತಿದ್ದಂತೆ, ಕೊಪ್ಪಳದ ಬಿಇಒ ಕಚೇರಿ ಹತ್ತಿರ ಇಲಾಖೆ ಕಾರಿನಿಂದ ಕೆಳಗಿಳಿದ ರಾಜಕೀಯ ನಾಯಕ, ತನ್ನ ಕಾರಿನಲ್ಲಿ ತೆರಳಿದ್ದಾರೆ. ನಂತರ ಮಹಿಳಾಧಿಕಾರಿ ನೇರವಾಗಿ ದೂರು ನೀಡಲು ರಾತ್ರಿ 10 ಗಂಟೆ ಹೊತ್ತಿಗೆ ಎಸ್ಪಿ ಕಚೇರಿ ತೆರಳಿದ್ದರು.

    ಲಕೋಟೆಯಲ್ಲಿ ಏನಿದೆ? ಎಲ್ಲಿದೆ?: ರಾತ್ರಿ ಎಸ್ಪಿ ಕಚೇರಿಯಲ್ಲಿ ನಡೆದ ಪ್ರಹಸನದಲ್ಲಿ ಪ್ರಭಾವಿ ನಾಯಕನ ವಿರುದ್ಧ ಮಹಿಳಾಧಿಕಾರಿ ದೂರು ದಾಖಲಿಸಲು ಮುಂದಾದ ಘಟನೆಯೂ ಗುಟ್ಟಾಗಿ ಉಳಿದಿಲ್ಲ. ತಡರಾತ್ರಿ ಆದ ಕಾರಣ ಮಹಿಳಾಧಿಕಾರಿ ದೂರು ದಾಖಲಿಸುವ ಲಕೋಟೆಯನ್ನು ಎಸ್ಪಿ ಕಚೇರಿಯಲ್ಲಿ ನೀಡಿದ್ದಾರೆಂದು ಹೇಳಲಾಗಿದೆ. ಮಹಿಳಾಧಿಕಾರಿಯ ಮೇಲೆ ರಾಜಕೀಯ ಪ್ರಭಾವ ಬೀರಿ, ಪ್ರಕರಣ ಮುಚ್ಚಿಹಾಕುವ ಹುನ್ನಾರ ವ್ಯಾಪಕವಾಗಿ ಕೇಳಿ ಬರುತ್ತಿದೆ. ಆದರೆ, ಲಕೋಟೆಯಲ್ಲಿ ಏನಿದೆ ಮತ್ತು ಎಲ್ಲಿದೆ ಎನ್ನುವ ಅನುಮಾನ ಹಾಗೂ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ. ಅಲ್ಲದೇ ಮಹಿಳಾ ಅಧಿಕಾರಿಯ ಕೂಗಿಗೆ ಬೆಲೆಯಿಲ್ಲದಂತಾಗಿದೆ.

    ಪೊಲೀಸರ ಮೌನ: ರಾಜ್ಯದಲ್ಲಿ ಅನೇಕ ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳು ನಡೆದರೂ ಅವುಗಳ ತನಿಖೆ ರ್ತಾಕ ಅಂತ್ಯ ಕಂಡ ಉದಾಹರಣೆಗಳು ಬೆರಳೆಣಿಕೆ. ಈಗ ರಾಜಕೀಯ ನಾಯಕರೊಬ್ಬರಿಂದ ಮಹಿಳಾಧಿಕಾರಿ ಮೇಲೆ ನಿರಂತರವಾಗಿ ದೌರ್ಜನ್ಯ ನಡೆದಿರುವುದು ಬಯಲಾಗಿದೆ. ಪ್ರಕರಣದ ತನಿಖೆ ಮಾಡಬೇಕಾದ ಪೊಲೀಸರು ಮೌನವಹಿಸಿದ್ದಾರೆ.

    ವಿಜಯವಾಣಿಗೆ ಆಡಿಯೋ ಲಭ್ಯ

    ನೇಣಿಗೆ ಯತ್ನಿಸಿರುವ ಮಹಿಳಾಧಿಕಾರಿ ಹಾಗೂ ಪ್ರಭಾವಿ ನಾಯಕನೊಂದಿಗೆ ನಡೆದ 10.20 ನಿಮಿಷಗಳ ದೂರವಾಣಿ ಸಂಭಾಷಣೆ ‘ವಿಜಯವಾಣಿ’ಗೆ ಲಭ್ಯವಾಗಿದೆ. ದೂರವಾಣಿ ಮಾತುಕತೆಯಲ್ಲಿ ಮಹಿಳಾಧಿಕಾರಿ ತನಗೆ ರಾಜಕೀಯ ನಾಯಕನಿಂದ ಆಗುತ್ತಿರುವ ಕಿರುಕುಳದ ಬಗ್ಗೆ ಪದೇಪದೆ ಹೇಳಿಕೊಂಡಿರುವುದು ಗಮನಾರ್ಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts