More

    ಶಾಲಾ ಶುಲ್ಕ ದಂಧೆಗೆ ಕಡಿವಾಣ ಹಾಕಿ: ಆಮ್ ಆದ್ಮಿ ಪಕ್ಷ ಆಗ್ರಹ

    ಮೈಸೂರು: ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ದಂಧೆ ಮಿತಿ ಮೀರಿದ್ದು, ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಾಲವಿಕಾ ಗುಬ್ಬಿವಾಣಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
    ರಾಜ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿವರ್ಷ ಶೇ.15 ರಷ್ಟು ಶುಲ್ಕ ಹೆಚ್ಚಳ ಮಾಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ ರಾಜ್ಯದಲ್ಲಿ ಶುಲ್ಕ ನಿಯಂತ್ರಣ ಪ್ರಾಧಿಕಾರ ಇದೆಯೇ ಎನ್ನುವ ಪ್ರಶ್ನೆ ಮೂಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
    ದೆಹಲಿಯಲ್ಲಿ ಖಾಸಗಿ ಶಾಲೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ. ಆದರೆ ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಹದಗೆಟ್ಟಿದೆ. ಹೀಗಾಗಿ ಜನರು ಅನಿವಾರ್ಯವಾಗಿ ಖಾಸಗಿ ಶಾಲೆಗಳ ಮೊರೆ ಹೋಗುವಂತಾಗಿದೆ ಎಂದರು.
    ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಹೈಕೋರ್ಟ್ ಮುಂದೆ ಸಮರ್ಪಕ ವಾದ ಮಂಡಿಸದಿರುವುದೇ ಇದಕ್ಕೆ ಕಾರಣ. ಇದನ್ನೆಲ್ಲಾ ಗಮನಿಸಿದರೆ ರಾಜ್ಯ ಸರ್ಕಾರವೂ ಖಾಸಗಿ ಶಾಲೆಗಳೊಂದಿಗೆ ಕೈಜೋಡಿಸಿದೆ ಎನ್ನುವ ಅನುಮಾನವಿದೆ ಎಂದು ಬೇಸರ ವ್ಯಕ್ತಪಡಿಸಿದರು.
    ಈ ಶೈಕ್ಷಣಿಕ ವರ್ಷದಲ್ಲಾದರೂ ಖಾಸಗಿ ಶಾಲೆಗಳ ಶುಲ್ಕ ದಂಧೆಯಿಂದ ಪಾಲಕರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು. ಖಾಸಗಿ ಶಾಲೆಗಳ ವಸೂಲಿಗೆ ಶುಲ್ಕ ನಿಯಂತ್ರಣ ಪ್ರಾಧಿಕಾರ ತಡೆ ನೀಡಬೇಕು. ಇದೀಗ ಚುನಾವಣೆಯು ಮುಗಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತ ಗಮನಹರಿಸಬೇಕಿದೆ. ಕೂಡಲೇ ಸಭೆ ಕರೆದು, ನ್ಯಾಯಾಲಯದ ಆದೇಶದ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಶಿಕ್ಷಣಾಧಿಕಾರಿಗಳು ಪ್ರತಿ ಶಾಲೆಗೆ ಭೇಟಿ ನೀಡಿ ಎಷ್ಟು ಶುಲ್ಕ ಹೆಚ್ಚಿಸಲಾಗಿದೆ ಎಂಬುದರ ಮೇಲೆ ನಿಗಾ ಇಡಬೇಕು. ಮಿತಿ ಮೀರಿದ ಶುಲ್ಕ ಏರಿಕೆ ಕಂಡು ಬಂದಲ್ಲಿ ಅಂತಹ ಶಾಲೆಗಳೊಂದಿಗೆ ಚರ್ಚಿಸಿ ಕ್ರಮ ವಹಿಸಬೇಕು ಎಂದು ಹೇಳಿದರು.
    ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಂಗಯ್ಯ, ಮುಖಂಡರಾದ ವಿಶ್ವನಾಥ ಕುಲಕರ್ಣಿ, ಉಷಾ ಸಂಪತ್ ಕುಮಾರ್, ಐಶ್ವರ್ಯಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts