ಗರ್ಭಿಣಿ ಪತ್ನಿ ಮನೆಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಇನ್ಸ್​ಪೆಕ್ಟರ್​ ಆತ್ಮಹತ್ಯೆಗೆ ಶರಣು

Police
Published on

ವಿಜಯನಗರ: ಆಂಧ್ರ ಪ್ರದೇಶದ ವಿಜಯನಗರ ಜಿಲ್ಲೆಯ ಹೋಮ್​ ಗಾರ್ಡ್ಸ್​ ಉಸ್ತುವಾರಿಯಾಗಿದ್ದ ಸಶಸ್ತ್ರ ಮೀಸಲು ಪೊಲೀಸ್ ಇನ್ಸ್​ಪೆಕ್ಟರ್ ಪಿ. ಈಶ್ವರ ರಾವ್​ (34) ಅವರು ಸೇವಾ ರಿವಾಲ್ವರ್​ನಲ್ಲಿ ಫೈರಿಂಗ್​ ಮಾಡಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವಿಜಯನಗರ ಜಿಲ್ಲೆಯಲ್ಲಿರುವ ಪೊಲೀಸ್​ ಕ್ವಾಟ್ರಸ್​ನ ತಮ್ಮ ವಸತಿ ಗೃಹದಲ್ಲಿ ಘಟನೆ ನಡೆದಿದೆ. ಭಾನುವಾರ ಮಧ್ಯಾಹ್ನ 12 ಗಂಟೆಗೆ ಮನೆಯಲ್ಲಿದ್ದ ಈಶ್ವರ ರಾವ್​, ಕೋಣೆಗೆ ತೆರಳಿ ಬಾಗಿಲು ಹಾಕಿಕೊಂಡು ಫೈರಿಂಗ್​ ಮಾಡಿಕೊಂಡಿದ್ದಾರೆ. ಈ ವೇಳೆ ಅವರ ಪತ್ನಿ ಹರಿಪ್ರಿಯಾ ಮನೆಯಲ್ಲಿದ್ದರು. ಫೈರಿಂಗ್​ ಶಬ್ದ ಕೇಳಿ ಆಘಾತಕ್ಕೆ ಒಳಗಾದ ಹರಿಪ್ರಿಯಾ, ಗಂಡನ ಸ್ಥಿತಿ ನೋಡಿ ತಕ್ಷಣ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದರು.

ಈಶ್ವರ್​ ಅವರನ್ನು ತಕ್ಷಣ ಆಸ್ಪತ್ರೆಗೆ ಸ್ಥಳಾಂತರಿಸಿದಾದರೂ ಅಷ್ಟರಲ್ಲಾಗಲೇ ಈಶ್ವರ್​ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ. ದೀಪಿಕಾ ಅವರು ಮಾಹಿತಿ ಪಡೆದುಕೊಂಡಿದ್ದಾರೆ. ಈಶ್ವರ ರಾವ್​ ಅವರು ಪೂರ್ವ ಗೋದಾವರಿ ಜಿಲ್ಲೆಯ ವೇದುರುಪಕ ಸವರಮ್​ ಮೂಲದವರು. 2011ರಲ್ಲಿ ಆರ್​ಎಸ್​ಐ ಆಗಿ ಪೊಲೀಸ್​ ಇಲಾಖೆ ಸೇರಿದರು.

2020ರಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆದ ಇನ್ಸ್​ಪೆಕ್ಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಾಲ್ಕು ವರ್ಷದ ಹಿಂದಷ್ಟೇ ಹರಿಪ್ರಿಯಾ ಎಂಬುವರನ್ನು ಮದುವೆಯಾಗಿದ್ದಾರೆ. ಮೂರು ವರ್ಷದ ಹೆಣ್ಣು ಮಗಳಿದ್ದಾಳೆ. ಹರಿಪ್ರಿಯಾ ಪ್ರಸ್ತುತ 7 ತಿಂಗಳ ಗರ್ಭಿಣಿ. ವೈಯಕ್ತಿಕ ಕಾರಣಗಳಿಂದ ಈಶ್ವರ್​ ರಾವ್​ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ನಂಬಲಾಗಿದೆ. ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net