ವದಂತಿಗೆ ಅಧಿಕೃತ ಮುದ್ರೆ ಒತ್ತಿದ ನಿಕ್ಕಿ: ನಮ್ಮ ಹೊಸ ಪಯಣಕ್ಕೆ ನಿಮ್ಮ ಆಶೀರ್ವಾದ ಇರಲಿ ಎಂದ ಕನ್ನಡತಿ

Nikki
Published on

ಚೆನ್ನೈ: ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಕರ್ನಾಟಕ ಮೂಲದ ನಟಿ ನಿಕ್ಕಿ ಗಲ್ರಾನಿ ಕಾಲಿವುಡ್​ನ ಖ್ಯಾತ ನಟನ ಜತೆ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಈ ಹಿಂದೆ ಕೇಳಿಬಂದಿತ್ತು. ಇದೀಗ ಆ ಸುದ್ದಿ ನಿಜವಾಗಿದ್ದು, ನಿಶ್ಚಿತಾರ್ಥ ಮಾಡಿಕೊಂಡಿರುವ ನಿಕ್ಕಿ ಇನ್ನೇನು ಕೆಲವೇ ದಿನಗಳಲ್ಲಿ ಸಪ್ತಪದಿಯನ್ನು ತುಳಿಯಲಿದ್ದಾರೆ.

ಸದ್ಯ ನಿಕ್ಕಿ ಕಾಲಿವುಡ್​ನಲ್ಲೇ ಒಳ್ಳೆಯ ಹೆಸರು ಮಾಡಿದ್ದಾರೆ. ಇದೀಗ ನಿಕ್ಕಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾರೆ. 'ಯಗವರಯಿನುಮ್​ ನಾ ಕಾಕ್ಕಾ' ಚಿತ್ರದ ಸಹನಟ ಆದಿ ಪಿನಿಸೆಟ್ಟಿ ಅವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ.

ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಹರಿಬಿಟ್ಟು ಮದುವೆ ಕುರಿತು ಹರಿದಾಡುತ್ತಿದ್ದ ವದಂತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಪರಸ್ಪರ ಎಂಬುದು ಜೀವನದಲ್ಲಿ ನಾವು ಹಿಡಿದಿಟ್ಟುಕೊಳ್ಳುವ ಅತ್ಯುತ್ತಮ ವಿಷಯ. ನಾವು ಒಂದೆರಡು ವರ್ಷಗಳ ಹಿಂದೆ ಒಬ್ಬರನ್ನೊಬ್ಬರು ಕಂಡುಕೊಂಡಿದ್ದೇವೆ ಮತ್ತು ಅದು ಈಗ ಅಧಿಕೃತವಾಗಿದೆ. 24/3/2022 ನಮ್ಮಿಬ್ಬರಿಗೆ ವಿಶೇಷವಾದ ದಿನ. ಎರಡು ಕುಟುಂಬಗಳ ನಡುವೆ ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ನಾವು ಒಟ್ಟಿಗೆ ಈ ಹೊಸ ಪ್ರಯಾಣವನ್ನು ಕೈಗೊಳ್ಳುತ್ತಿರುವಾಗ ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದಗಳನ್ನು ನಾವು ಬಯಸುತ್ತೇವೆ ಎಂದು ನಿಕ್ಕಿ ಬರೆದುಕೊಂಡಿದ್ದಾರೆ. ಆದಿ ಪಿನಿಸೆಟ್ಟಿ ಕೂಡ ಇದೇ ರೀತಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಆದಿ ಮತ್ತು ನಿಕ್ಕಿ ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದು ಕೂಡ ಮದುವೆ ವದಂತಿಗೆ ಪುಷ್ಠಿ ನೀಡಿತ್ತು. ಈ ಜೋಡಿ ಇಲ್ಲಿಯವರೆಗೆ ಎರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇವರಿಬ್ಬರು ಕೊನೆಯ ಬಾರಿಗೆ 2017 ರ ಸಾಹಸ ಹಾಸ್ಯ ಚಿತ್ರ ಮರಗತ ನಾನಯಂನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಇನ್ನು ನಿಕ್ಕಿ ಅವರ ಸಿನಿ ಪಯಣದ ವಿಚಾರಕ್ಕೆ ಬಂದರೆ, ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ತಮಿಳಿನ "ಪಯ್ಯ" ರಿಮೇಕ್​ "ಅಜಿತ್" ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಕ್ಕಿ, ಕನ್ನಡದಲ್ಲಿ ಕೇವಲ ಬೆರಳಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಿ ನಿರೀಕ್ಷಿತ ಯಶಸ್ಸು ಸಿಗದ ಕಾರಣ ನಿಕ್ಕಿ ಕಾಲಿವುಡ್​ಗೆ ಹಾರಿದರು. ಅಲ್ಲಿಂದಾಚೆಗೆ ಅವರ ಅದೃಷ್ಟವೇ ಬದಲಾಯಿತು. ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿನಿಮಾಗಳನ್ನು ನೀಡಿದರು. ನಿಕ್ಕಿ ಮುಂಬರುವ ಮಿರ್ಚಿ ಶಿವನೊಂದಿಗೆ 'ಈಡಿಯಟ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆದಿ ಅವರು ಪ್ರಸ್ತುತ ಎರಡು ದ್ವಿಭಾಷಾ ಚಿತ್ರಗಳಾದ 'ಕ್ಲ್ಯಾಪ್' ಮತ್ತು 'ದಿ ವಾರಿಯರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವು ತಮಿಳು ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net