

ಲಖನೌ: ಅಂಕಲ್ ಇಲ್ಲಿ ಐದು ಕೊಲೆಯಾಗಿವೆ. ನಾನೊಬ್ಬಳೇ ಇದ್ದೇನೆ, ತುಂಬಾ ಭಯವಾಗುತ್ತಿದೆ ಬೇಗ ಬನ್ನಿ ಎಂದು 8 ವರ್ಷದ ಬಾಲಕಿಯೊಬ್ಬಳು ಕರೆ ಮಾಡಿದ ಬೆನ್ನಲ್ಲೇ ಎದ್ನೋ ಬಿದ್ನೋ ಅಂತಾ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಆಘಾತವೊಂದು ಎದುರಾಗಿತ್ತು.
ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂದು ಹೇಳಿದರೆ ನಿಮಗೂ ಅಚ್ಚರಿಯ ಜತೆ ನಗುವು ಬರಬಹುದೇನೋ? ಏಕೆಂದರೆ, ಬಾಲಕಿ ಮಾಡಿದ್ದು ಒಂದು ಪ್ರ್ಯಾಂಕ್ ಕಾಲ್ ಅಂದರೆ ಕುಚೇಷ್ಟೆಯ ಕರೆಯಾಗಿತ್ತು. ಬಾಲಕಿಯಲ್ಲದೇ ಬೇರೆ ಯಾರಾದರೂ ವಯಸ್ಕರು ಕರೆ ಮಾಡಿದ್ದರೆ ಅಲ್ಲಿನ ಕತೆಯೇ ಬೇರೆಯಾಗುತ್ತಿತ್ತು. ಏಕೆಂದರೆ, ಬಾಲಕಿ ಹೇಳಿದ ವಿಚಾರ ಸಣ್ಣದಾಗಿರಲಿಲ್ಲ. ತೀವ್ರ ಗಂಭೀರ ವಿಷಯವದು.
ಇನ್ನು ವಿವರಣೆಗೆ ಬರುವುದಾದರೆ, ಉತ್ತರ ಪ್ರದೇಶದ ಘಾಜಿಯಬಾದ್ ಮೂಲದ 3ನೇ ತರಗತಿ ವಿದ್ಯಾರ್ಥಿನಿ ತನ್ನ ತಂದೆಯ ಮೊಬೈಲ್ ನಂಬರ್ನಿಮದ ಜುಲೈ 20ರಂದು ಮಧ್ಯಾಹ್ನ 2.30ರ ಸುಮಾರಿಗೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡುತ್ತಾಳೆ. ಕರೆ ಸ್ವೀಕರಿಸಿದ ಪೊಲೀಸರಿಗೆ ಆ ಕಡೆಯಿಂದ ಭಯಭೀತಗೊಂಡ ಸ್ಥಿತಿಯಲ್ಲಿ ಬಾಲಕಿ ಮಾತನಾಡುವ ಧ್ವನಿ ಕೇಳುತ್ತದೆ. ಪೊಲೀಸ್ ಅಂಕಲ್ ಸರ್ಕಾರಿ ಶಾಲೆಯ ಲೇನ್ ನಂಬರ್ 5ರಲ್ಲಿ ಐದು ಕೊಲೆಯಾಗಿದೆ. ಬೇಗ ಬನ್ನಿ, ನನಗೆ ತುಂಬಾ ಭಯವಾಗುತ್ತಿದೆ ಎಂದು ಹೇಳುತ್ತಾಳೆ. ಬಾಲಕಿಯ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸುತ್ತಾರೆ. ಆದರೆ, ಅಲ್ಲಿ ಯಾವುದೇ ಅಪರಾಧ ನಡೆದಿರುವುದಿಲ್ಲ.
ಇದಾದ ಬಳಿಕ ಪೊಲೀಸರು ಬಾಲಕಿಯ ನಂಬರ್ಗೆ ಕರೆ ಮಾಡುತ್ತಾರೆ. ಆದರೆ, ಅಷ್ಟರಲ್ಲಾಗಲೇ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಸ್ವಲ್ಪ ಸಮಯದ ಬಳಿಕ ಮತ್ತೆ ಕರೆ ಮಾಡಿದಾಗ ಬಾಲಕಿಯ ತಂದೆ ಕರೆ ಸ್ವೀಕರಿಸುತ್ತಾರೆ. ಏನಾಯಿತು ಎಂದು ಪೊಲೀಸರು ಹೇಳಿದಾಗ, ಅದು ನನ್ನ ಮಗಳು ಮಾಡಿರುವ ಪ್ರ್ಯಾಂಕ್ ಕಾಲ್ ಎಂದು ಹೇಳುತ್ತಾರೆ. ಈ ಹಿಂದೆಯು ಅದೇ ರೀತಿಯ ಕರೆ ಮಾಡಿದ್ದಳು ಎಂದು ತಿಳಿಸುತ್ತಾರೆ.
ಹಿಂದೊಮ್ಮೆ ಸಂಬಂಧಿಕರಿಗೆ ಕರೆ ಮಾಡಿ ನಮ್ಮ ತಂದೆಗೆ ಅಪಘಾತವಾಗಿದೆ ಎಂದು ಹೇಳಿ ಎಲ್ಲರೂ ಮನೆಗೆ ಓಡೋಡಿ ಬರುವಂತೆ ಬಾಲಕಿ ಮಾಡಿದ್ದಳಂತೆ. ಇನ್ನು ಬಾಲಕಿ ಹೆಚ್ಚಾಗಿ ಕ್ರೈಂ ಶೋಗಳನ್ನು ನೋಡುವುದರ ಪರಿಣಾಮ ಇದು ಎನ್ನಲಾಗುತ್ತದೆ. ಇದೀಗ ಮತ್ತೆ ಈ ರೀತಿ ಆಗದಂತೆ ಮಗಳನ್ನು ನೋಡಿಕೊಳ್ಳಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)