ಚೀನಾ ಲಿಂಕ್​ ಇದ್ದರೂ, ಡ್ರೀಮ್​11 ಜತೆ ಪ್ರಾಯೋಜಕತ್ವ ಒಪ್ಪಂದ ಸಮರ್ಥಿಸಿಕೊಂಡ ಬಿಸಿಸಿಐ

ipl dream 11 china
Published on

ನವದೆಹಲಿ: ಲಡಾಖ್​ ಗಡಿ ಗಲಾಟೆಯ ಬಳಿಕ ಚೀನಾ ವಿರುದ್ಧ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಸಿಸಿಐ, ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವದಿಂದ ಚೀನಾ ಮೂಲದ ಮೊಬೈಲ್​ ಕಂಪನಿ ವಿವೋ ಅನ್ನು ಹೊರಗಿಟ್ಟಿತ್ತು. ಆದರೆ ಇದೀಗ ಹೊಸ ಒಪ್ಪಂದ ಮಾಡಿಕೊಂಡಿರುವ ಡ್ರೀಮ್​11 ಕೂಡ ಚೀನಾ ಲಿಂಕ್​ ಹೊಂದಿದೆ. ಆದರೂ ಈ ಹೊಸ ಒಪ್ಪಂದವನ್ನು ಬಿಸಿಸಿಐ ಸಮರ್ಥಿಸಿಕೊಂಡಿದೆ.

ಮುಂಬೈ ಮೂಲದ ಡ್ರೀಮ್​11 ಭಾರತೀಯರೇ (ಹರ್ಷ ಜೈನ್​, ಭವಿತ್​ ಸೇತ್​) ಸ್ಥಾಪಿಸಿರುವ ಕಂಪನಿ. ಆದರೆ ಚೀನಾ ಮೂಲದ ಟೆನ್​ಸೆಂಟ್​ ಕಂಪನಿ ಡ್ರೀಮ್​11ನಲ್ಲಿ ಹೂಡಿಕೆ ಹೊಂದಿದೆ. ಹೀಗಾಗಿ ಈ ಬಾರಿ ಚೀನಾ ಜತೆಗಿನ ನಂಟು ತೊರೆಯುವ ಬಿಸಿಸಿಐ ಪ್ರಯತ್ನ ಅರ್ಧದಷ್ಟು ಮಾತ್ರ ಈಡೇರಿದಂತಾಗಿದೆ. ಆದರೂ ಬಿಸಿಸಿಐ ಈ ಹೊಸ ಒಪ್ಪಂದಕ್ಕೆ ತನ್ನದೇ ಆದ ರೀತಿಯಲ್ಲಿ ಸಮರ್ಥನೆಗಳನ್ನು ನೀಡಿದೆ.

ಡ್ರೀಮ್​11ನಲ್ಲಿ ಚೀನಾ ಕಂಪನಿಯ ಹೂಡಿಕೆ ಕೇವಲ ಶೇ. 10ರಷ್ಟು ಮಾತ್ರ ಇದೆ ಎಂದು ಬಿಸಿಸಿಐ ಈ ಒಪ್ಪಂದವನ್ನು ಅನುಮೋದಿಸಿದೆ. ಅಲ್ಲದೆ ಕಂಪನಿಯ 400ಕ್ಕೂ ಅಧಿಕ ಉದ್ಯೋಗಿಗಳು ಭಾರತೀಯರೇ ಆಗಿದ್ದಾರೆ ಎಂಬುದು ಬಿಸಿಸಿಐ ವಾದವಾಗಿದೆ. ಡ್ರೀಮ್​ 11 ಭಾರತೀಯರ ಬಳಕೆಗೆ ಸೀಮಿತವಾಗಿರುವ ಆ್ಯಪ್​ ಆಗಿದೆ. ಕಂಪನಿಯ ಹೆಚ್ಚಿನ ಷೇರು ಭಾರತೀಯರದ್ದೇ ಆಗಿದೆ ಎಂದು ಬಿಸಿಸಿಐ ತಿಳಿಸಿದೆ.

2008ರಿಂದಲೂ ಡ್ರೀಮ್​11 ಕ್ರಿಕೆಟ್​ ಜತೆ ನಂಟು ಹೊಂದಿದೆ. ಡ್ರೀಮ್​11 ಐಸಿಸಿ ಜತೆಗೂ ಫ್ಯಾಂಟಸಿ ಕ್ರಿಕೆಟ್​ ಒಪ್ಪಂದ ಹೊಂದಿದೆ. ಬಿಸಿಸಿಐ ಜತೆಗೂ ಇಂಥದ್ದೇ ಒಪ್ಪಂದ ಹೊಂದಿತ್ತು. ಇತರ ದೇಶಗಳ ಟಿ20 ಲೀಗ್​ಗಳ ಜತೆಗೂ ಒಪ್ಪಂದ ಹೊಂದಿದೆ. ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಸಿಸಿಐ ಈಗ ಡ್ರೀಮ್​11 ಜತೆ 222 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದೆ.

ಇತ್ತೀಚೆಗೆ ಪಂಜಾಬ್​ನಲ್ಲಿ ನಡೆದ ನಕಲಿ ಟಿ20 ಲೀಗ್​ ಪಂದ್ಯದ ಪ್ರಕರಣದಲ್ಲಿ ಡ್ರೀಮ್​11 ನಂಟು ಹೊಂದಿತ್ತು. ಪಂಜಾಬ್​ನಲ್ಲಿ ನಡೆದ ಪಂದ್ಯವನ್ನು ಶ್ರೀಲಂಕಾದಲ್ಲಿ ನಡೆದ ಪಂದ್ಯದಂತೆ ಪ್ರಸಾರ ಮಾಡಲಾಗಿತ್ತು. ಪಂದ್ಯದಲ್ಲಿ ಡ್ರೀಮ್​11 ಲಾಂಛನ ಇರುವ ಕಿಟ್​ ಬಳಕೆ ಮಾಡಲಾಗಿತ್ತು. ಈ ಸಂಬಂಧ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ (ಎಸಿಯು) ತನಿಖೆ ನಡೆಯುತ್ತಿರುವ ನಡುವೆಯೇ ಬಿಸಿಸಿಐ, ಅದೇ ಕಂಪನಿಯ ಜತೆಗೆ ಒಪ್ಪಂದ ಮಾಡಿಕೊಂಡಿರುವುದು ವಿಪರ್ಯಾಸವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net