

ನವದೆಹಲಿ: ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದ ತಬ್ಲಿಘ್ ಜಮಾತ್ನಲ್ಲಿ ಪಾಲ್ಗೊಂಡಿದ್ದ 1,400ಕ್ಕೂ ಅಧಿಕ ಜನರಲ್ಲಿ ಕರೊನಾ ಸೋಂಕು ಕಂಡು ಬಂದಿದೆ. ಇವರ ಸಂಪರ್ಕಕ್ಕೆ ಬಂದವರಲ್ಲಿ ಕರೊನಾ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಒಂದಲ್ಲಾ ಒಂದು ರಾಜ್ಯದಿಂದ ದಿನವೂ ವರದಿಯಾಗುತ್ತಿವೆ. ಸೋಂಕು ಹರಡುವುದನ್ನು ತಡೆಯಲು ದೇಶದೆಲ್ಲೆಡೆ ಜಮಾತ್ನಲ್ಲಿ ಪಾಲ್ಗೊಂಡಿದ್ದ ಹಾಗೂ ಅವರ ಸಂಪರ್ಕದಲ್ಲಿದ್ದ 25,000ಕ್ಕೂ ಅಧಿಕ ಜನರನ್ನು ದೇಶದ ವಿವಿಧೆಡೆ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಆದರೆ, ಕ್ವಾರಂಟೈನ್ನಲ್ಲಿರುವವರ ಹುಚ್ಚಾಟಕ್ಕೆ ಮಿತಿಯೇ ಇಲ್ಲದಂತಾಗಿದೆ.
ದೆಹಲಿಯ ನರೇಲಾ ಕ್ವಾರಂಟೈನ್ ಕೇಂದ್ರದ ಕೊಠಡಿ ಎದುರು ಮಲ ವಿಸರ್ಜಿಸಿದ್ದ ಆರೋಪದಲ್ಲಿ ಉತ್ತರಪ್ರದೇಶದ ಇಬ್ಬರ ವಿರುದ್ಧ ದೆಹಲಿ ಪೊಲೀಸರು ಈಗಾಗಲೇ ಎಫ್ಐಆರ್ ದಾಖಲಿಸಿದ್ದಾರೆ. ಲೋಕನಾಯಕ ಜಯಪ್ರಕಾಶ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೊಠಡಿ ಬಳಿ ಉಗಿಯುತ್ತಿದ್ದ ಶಂಕಿತರ ವಿರುದ್ಧವೂ ಮೊಕದ್ದಮೆ ಹೂಡಲಾಗಿದೆ.
ದ್ವಾರಕಾ ಸೆಕ್ಟರ್ 16ಬಿ ಪ್ರದೇಶದ ನಾಲ್ಕು ಫ್ಲ್ಯಾಟ್ಗಳಲ್ಲಿ ಜಮಾತ್ನಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ. ಇಲ್ಲಿಯೂ ಇಂಥದ್ದೇ ವಿಕೃತಿ ಮೆರೆದಿರುವುದು ವರದಿಯಾಗಿದೆ. ಫ್ಲ್ಯಾಟ್ಗಳಲ್ಲಿ ಇದ್ದವರು ಮೂತ್ರವನ್ನು ಬಾಟಲಿಯಲ್ಲಿ ತುಂಬಿಸಿ ಹೊರಗೆ ಎಸೆದಿದ್ದಾರೆ. ಇದನ್ನು ನಾಗರಿಕ ರಕ್ಷಣಾ ದಳದ ಸಿಬ್ಬಂದಿಯೊಬ್ಬರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾತ್ರವಲ್ಲ, ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ಕಟ್ಟಡದ ಹಿಂಭಾಗದಲ್ಲಿದ್ದ ನೀರಿನ ಪಂಪ್ ಬಳಿ ಅಂತಹ ಎರಡು ಬಾಟಲಿಗಳು ಪತ್ತೆಯಾಗಿವೆ.
ಕ್ವಾರಂಟೈನ್ ಕೇಂದ್ರದ ಸಹಾಯಕ ನಿರ್ದೇಶಕರು ನೀಡಿದ ದೂರಿನ ಆಧಾರದಲ್ಲಿ ದ್ವಾರಕಾ ಉತ್ತರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜನರಿಗೆ ಕರೊನಾ ಸೋಂಕು ಹಬ್ಬುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. (ಏಜೆನ್ಸೀಸ್)