More

    ಮದ್ಯ ಕೇಳಿದ ವೈದ್ಯನಿಗೆ ಹೈಕೋರ್ಟ್ ಕೊಟ್ಟ ಇನಾಮು ಏನು ಗೊತ್ತ?

    ಬೆಂಗಳೂರು: ಲಾಕ್​ಡೌನ್ ಅವಧಿಯಲ್ಲೂ ರಾಜ್ಯದಲ್ಲಿ ದಿನದ ಸೀಮಿತ ಅವಧಿಗೆ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸುವಂತೆ ಕೋರಿದ್ದ ಮನೋವೈದ್ಯರೊಬ್ಬರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ 10 ಸಾವಿರ ರೂ. ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿದೆ.

    ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ದಿ. ಬಿ.ಜಿ. ಕುಲಕರ್ಣಿ ಮೆಮೋರಿಯಲ್ ಲೀಗಲ್ ಟ್ರಸ್ಟ್​ನ ಅಧ್ಯಕ್ಷ ಡಾ. ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ವಿಚಾರಣೆ ನಡೆಸಿತು.

    ವಿಚಾರಣೆ ವೇಳೆ, ಅರ್ಜಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಕರೊನಾ ಸೊಂಕು ಹರಡುತ್ತಿರುವ ಇಂಥ ತುರ್ತು ಸಂದರ್ಭಗಳಲ್ಲಿ ಆಹಾರ, ಚಿಕಿತ್ಸೆಯಂಥ ವಿಚಾರಗಳಿಗೆ ಆದ್ಯತೆ ನೀಡಬೇಕಿದೆ. ಒಬ್ಬ ವೈದ್ಯರಾಗಿರುವ ನೀವು ಅಂಥ ವಿಷಯಗಳ ಬಗ್ಗೆ ಕಾಳಜಿ ವಹಿಸುತ್ತೀರೆಂದು ಕೋರ್ಟ್ ಭಾವಿಸಿತ್ತು. ಆದರೆ, ಮದ್ಯದಂಗಡಿ ತೆರೆಯಲು ಅವಕಾಶ ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.

    ಅರ್ಜಿದಾರರು ವಾದ ಮಂಡಿಸಿ, ಲಾಕ್​ಡೌನ್​ನಿಂದಾಗಿ ಮದ್ಯದಂಗಡಿಗಳು ಮುಚ್ಚಿರುವ ಕಾರಣ ಮದ್ಯ ಸಿಗದೆ ರಾಜ್ಯದಲ್ಲಿ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

    ಆ 7 ಮಂದಿ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ನಿಮ್ಮ ಬಳಿ ಏನು ದಾಖಲೆ ಇದೆ ಎಂದು ಕೇಳಿದ ಪೀಠ, ಗಂಭೀರ ಪರಿಸ್ಥಿತಿಯ ನಡುವೆ ಮದ್ಯದಂಗಡಿ ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿ ಕೋರ್ಟ್ ಸಮಯವನ್ನೂ ವ್ಯರ್ಥ ಮಾಡಿದ್ದೀರಿ. ಆದ್ದರಿಂದ, ಭಾರಿ ದಂಡ ವಿಧಿಸಬೇಕಾಗುತ್ತದೆ. ಅದು 10 ಸಾವಿರದಿಂದ 10 ಲಕ್ಷ ರೂ. ಆಗಬಹುದು. ಎಷ್ಟು ದಂಡ ಪಾವತಿಸುತ್ತೀರಿ ಎಂದು ಅರ್ಜಿದಾರರನ್ನು ಪ್ರಶ್ನಿಸಿತು. ಅರ್ಜಿ ಹಿಂಪಡೆಯುವುದಾಗಿ ತಿಳಿಸಿದರೂ ಅದಕ್ಕೆ ನ್ಯಾಯಾಲಯ ಒಪ್ಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಸಾವಿರ ರೂ. ದಂಡ ಪಾವತಿಸುವುದಾಗಿ ಅರ್ಜಿದಾರರು ತಿಳಿಸಿದರು. ಬಳಿಕ ನ್ಯಾಯಾಲಯ ಪಿಐಎಲ್ ವಜಾಗೊಳಿಸಿತು.

    ಅರ್ಜಿದಾರರ ಮನವಿ ಏನು?: ಮದ್ಯಪಾನದ ಚಟ ಇರುವವರಿಗೆ ಮದ್ಯ ಸಿಗದಿದ್ದರೆ ನಡುಕ, ಭ್ರಮೆ, ನಿದ್ರಾಹೀನತೆ, ಮೂರ್ಛೆ ರೋಗದಂಥ ಕಾಯಿಲೆಗಳು ಬರುವ ಸಾಧ್ಯತೆಯಿರುತ್ತದೆ. ಮಾನಸಿಕ ಖಿನ್ನತೆಯಿಂದ ಮತ್ತೊಬ್ಬರ ಜೀವಕ್ಕೆ ಅಪಾಯವೆಸಗಬಹುದು ಅಥವಾ ಆತ್ಮಹತ್ಯೆಗೂ ಯತ್ನಿಸಬಹುದು. ಆದ್ದರಿಂದ ದಿನದ ಕೆಲ ಗಂಟೆಗಳ ಸೀಮಿತ ಅವಧಿಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

    ಚೀನಾ ಮೂಲದ ಕರೊನಾಕ್ಕೆ ‘ಸಂಜೀವಿನಿ’ ಆಯ್ತೇ ಭಾರತದ ಹೈಡ್ರೋಕ್ಸಿಕ್ಲೋರೋಕ್ವಿನ್​ ?!

    19 ವಿದೇಶಿಯರ ವಿರುದ್ಧ ಎಫ್​ಐಆರ್: ತಬ್ಲಿಘಿ ಧಾರ್ವಿುಕ ಕಾರ್ಯಕ್ರಮದಲ್ಲಿ ಭಾಗಿ ಹಿನ್ನೆಲೆ ಬೆಂಗಳೂರಿನಲ್ಲಿಯೂ ಪ್ರಚಾರ ಸಭೆ ನಡೆಸಿದ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts