

Pushpa 2 Collections : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಿತ್ರ ನಿನ್ನೆ (ಡಿ.05) ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಹಿಂದಿನ ದಿನವೇ ಪ್ರೀಮಿಯರ್ ಶೋ ಕೂಡ ನಡೆದಿತ್ತು. ಈ ಚಿತ್ರ ಕಲೆಕ್ಷನ್ನಲ್ಲಿ ಎಲ್ಲ ದಾಖಲೆಗಳನ್ನು ಮುರಿಯಲಿದೆ ಎಂಬ ಮಾತುಗಳು ಮೊದಲೇ ಕೇಳಿಬಂದಿತ್ತು. ಅದರಲ್ಲೂ ಮೊದಲ ದಿನದ ಕಲೆಕ್ಷನ್ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು.
ರಾಜಮೌಳಿ ನಿರ್ದೇಶನದ RRR ಮೊದಲ ದಿನವೇ 223 ಕೋಟಿ ರೂ. ಕಲೆಕ್ಷನ್ಗಳೊಂದಿಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರವೆಂಬ ಹೆಗ್ಗಳಿಕೆ ಹೊಂದಿದೆ. ಅದರ ನಂತರ ಬಾಹುಬಲಿ 2 ಮತ್ತು ಕಲ್ಕಿ ಸಿನಿಮಾಗಳಿವೆ. ಅಲ್ಲದೆ, ಕನ್ನಡದ ಕೆಜಿಎಫ್ ಕೂಡ ಸೇರಿದೆ. ಇದೀಗ ಆ ದಾಖಲೆಯನ್ನು ಪುಷ್ಪ 2 ಚಿತ್ರ ಮುರಿದಿದೆ ಎಂದು ವರದಿಯಾಗಿದೆ.
ಚಿತ್ರತಂಡ ಇನ್ನೂ ಅಧಿಕೃತವಾಗಿ ಕಲೆಕ್ಷನ್ ಅನ್ನು ಪ್ರಕಟಿಸಿಲ್ಲ. ಆದರೆ, ಸಿನಿಮಾ ವಿತರಕರು ಹಾಗೂ ಬಾಕ್ಸ್ಆಫೀಸ್ ಪಂಡಿತರ ಪ್ರಕಾರ ಪುಷ್ಪ 2 ಸುಮಾರು 300 ಕೋಟಿಯಿಂದ 320 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ. ಅಂದರೆ, ನಿವ್ವಳ ಕಲೆಕ್ಷನ್ ಸುಮಾರು 170 ಕೋಟಿ ತಲುಪಿದೆ ಎಂದು ವರದಿಯಾಗಿದೆ. ಪುಷ್ಪ ಖಂಡಿತವಾಗಿಯೂ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಲಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಹೇಳುತ್ತಾರೆ. ಅಲ್ಲದೆ, ಹಿಂದಿಯ ಜವಾನ್ ಮತ್ತು ಅನಿಮಲ್ ಸಿನಿಮಾಗಳ ಆರಂಭಿಕ ದಿನದ ಕಲೆಕ್ಷನ್ ಕೂಡ ಮುರಿಯಲಿದೆ. ಹಿಂದಿಯೊಂದರಲ್ಲೇ 100 ಕೋಟಿ ರೂ. ಕಲೆಕ್ಷನ್ ಬರಬಹುದು ಎಂದು ವರದಿಯಾಗಿದೆ.
ಪ್ರೀಮೀಯರ್ ಶೋಗಳಿಂದ ಚಿತ್ರಕ್ಕೆ 10 ಕೋಟಿ ರೂಪಾಯಿ ಹರಿದು ಬಂದಿದೆ. ತೆಲುಗು ರಾಜ್ಯಗಳಲ್ಲಿ 120 ಕೋಟಿಗೂ ಹೆಚ್ಚು, ತಮಿಳಿನಲ್ಲಿ 10 ಕೋಟಿಗೂ ಹೆಚ್ಚು, ಕನ್ನಡದಲ್ಲಿ 2 ಕೋಟಿಗೂ ಹೆಚ್ಚು, ಮಲಯಾಳಂನಲ್ಲಿ 10 ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ವಿದೇಶದಿಂದ 60 ಕೋಟಿ ಕಲೆಕ್ಷನ್ ಬರಬಹುದು. ಇದರೊಂದಿಗೆ ಬಾಹುಬಲಿ ಮತ್ತು ಆರ್ಆರ್ಆರ್ ಸಿನಿಮಾಗಳು ಸೃಷ್ಟಿಸಿದ್ದ ದಾಖಲೆಗಳನ್ನು ಪುಷ್ಪ ಮುರಿದಿದೆ. ಬಾಲಿವುಡ್ನಲ್ಲಿ ಹಿಂದಿ ಚಿತ್ರಗಳ ದಾಖಲೆಗಳನ್ನೂ ಪುಷ್ಪ 2 ಅಳಿಸಿ ಹಾಕಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಏನು ಹೇಳಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಅಂದಹಾಗೆ ಪುಷ್ಪ 2: ದಿ ರೂಲ್, 2021ರ ಬ್ಲಾಕ್ಬಸ್ಟರ್ ಪುಷ್ಪ: ದಿ ರೈಸ್ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ನಿನ್ನೆಯಿಂದ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. (ಏಜೆನ್ಸೀಸ್)