

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಾಲಯದಲ್ಲಿ ಜ. 1ರಿಂದ ವಸ್ತ್ರಸಂಹಿತೆ ಜಾರಿಗೆ ಬರಲಿದೆ. ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲು ದೇವಸ್ಥಾನದ ಆಡಳಿತ ಮಂಡಳಿ ಸಿದ್ಧತೆ ನಡೆಸಿದೆ.
ವಸ್ತ್ರಸಂಹಿತೆ ಯಾವ ಸ್ವರೂಪದಲ್ಲಿರಬೇಕು ಎಂಬುದನ್ನು ಶ್ರೀಘ್ರದಲ್ಲೆ ನಿರ್ಧರಿಸಲಾಗುವುದು. ದೇವಾಲಯದ ವಾತಾವರಣಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಲಯದ ಆಡಳಿತ ಮುಖ್ಯಸ್ಥ ರಂಜನ್ ಕುಮಾರ್ ದಾಸ್ ತಿಳಿಸಿದ್ದಾರೆ.
ಅನೇಕರು ದೇವಸ್ಥಾನಕ್ಕೆ ಹೊಂದುವ ಬಟ್ಟೆ ಧರಿಸದ ಕಾರಣ ನೀತಿ ಉಪಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಸಭ್ಯ ರೀತಿಯ ಬಟ್ಟೆ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ. ದೇವಸ್ಥಾನದ ನತೆ, ಪಾವಿತ್ರ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೆಲವರು ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ವಸ್ತ್ರ ಧರಿಸಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಗಮನಕ್ಕೆ ಬಂದಿದ್ದು ಅದನ್ನು ಪೋತ್ಸಾಹಿಸಲಾಗದು. ಕೆಲವರು ಹರಿದ ಜೀನ್ಸ್, ಸ್ಲೀವ್ಲೆಸ್ ಡ್ರೆಸ್, ಹಾಫ್ ಪ್ಯಾಂಟ್, ಶಾರ್ಟ್ಸ್ ಹಾಕಿಕೊಂಡು ಸಮುದ್ರಕ್ಕೆ, ಕಡಲತೀರಕ್ಕೆ ವಿಹಾರಕ್ಕೆ ತೆರಳುವವರಂತೆ ದೇವಸ್ಥಾನದ ಸನ್ನಿಧಿಗೆ ಬರುತ್ತಿದ್ದಾರೆ. ದೇವಸ್ಥಾನವು ದೇವರ ವಾಸಸ್ಥಾನವಾಗಿದೆ. ಮನರಂಜನೆಯ ಸ್ಥಳವಲ್ಲ ಎಂದು ಅವರು ತಿಳಿಸಿದ್ದಾರೆ.
ಮುಖ್ಯದ್ವಾರದಲ್ಲಿ ಡ್ರೆಸ್ ಕೋಡ್ ಖಚಿತಪಡಿಸಿಕೊಳ್ಳಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಭಕ್ತರಲ್ಲಿ ವಸ ಸಂಹಿತೆ ಕುರಿತು ಜಾಗೃತಿ ಮೂಡಿಸಲು ದೇವಸ್ಥಾನದ ಆಡಳಿತ ಮಂಡಳಿ ಮುಂದಾಗಿದೆ ಎಂದು ದಾಸ್ ಹೇಳಿದ್ದಾರೆ.