

ಬೆಳ್ತಂಗಡಿ: ತಾಲೂಕಿನ ವಿದ್ಯುತ್ ಬಳಕೆದಾರರ ಜನಸಂಪರ್ಕ ಸಭೆ ಉಜಿರೆಯ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಗುರುವಾರ ನಡೆಯಿತು. ನೂತನ ಸಬ್‌ಸ್ಟೇಷನ್ ಫೀಡರ್‌ಗಳನ್ನು ನಿರ್ಮಿಸಲು ಸರ್ಕಾರಿ ಜಾಗ ಇಲ್ಲದಿರುವ ಕಡೆ ಖಾಸಗಿ ಜಾಗಗಳನ್ನು ಖರೀದಿಸಬೇಕು ಎಂದು ಕಡಿರುದ್ಯಾವರ ಗ್ರಾಮದ ಸುದರ್ಶನ್ ರಾವ್ ಪ್ರಸ್ತಾಪಿಸಿದರು. ಇದಕ್ಕೆ ಬಂಟ್ವಾಳ ವಿಭಾಗದ ಇಇ ವೆಂಕಟೇಶ್ ಉತ್ತರಿಸಿ, ಜಿಲ್ಲಾಧಿಕಾರಿ ನಿಗದಿಪಡಿಸಿದ ದರದಲ್ಲಿ ಸ್ಥಳ ಕೊಡುವವರು ಇದ್ದಲ್ಲಿ ಇಲಾಖೆ ಸಿದ್ಧವಿದೆ ಎಂದರು.
ದಾಮೋದರ ಸುರುಳಿ ಮಾತನಾಡಿ ರೋಸ್ಟರ್, ಪವರ್‌ಕಟ್‌ನ ವೇಳಾಪಟ್ಟಿಯನ್ನು ಗ್ರಾಹಕರಿಗೆ ನೀಡುವಂತೆ ಆಗ್ರಹಿಸಿದರು. ಮುಂಡಾಜೆಯ ಅರಳಿಕಟ್ಟೆ ಪರಿವರ್ತಕದ ಲೈನ್‌ನ ಸುಮಾರು 100 ಮೀ.ನಷ್ಟು ದೂರಕ್ಕೆ ವಿದ್ಯುತ್ ಕಂಬಗಳಿಲ್ಲದೆ ಅಪಾಯಕಾರಿ ಸ್ಥಿತಿ ಇದೆ ಎಂಬ ವಿಚಾರವನ್ನು ಪುಷ್ಪರಾಜ ಶೆಟ್ಟಿ ಗಮನಕ್ಕೆ ತಂದರು. ಪವರ್‌ಮನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಉಜಿರೆ ಗ್ರಾಪಂ ಸದಸ್ಯ ನಾಗೇಶ್ ರಾವ್ ಸಭೆಗೆ ತಿಳಿಸಿದರು. ಜನಸಂಪರ್ಕ ಸಭೆಯಲ್ಲಿ ಬಂದಿರುವ ದೂರುಗಳನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳು ಭರವಸೆ ನೀಡಿದರು.
*ಇಕ್ಕಟ್ಟಿನ ಜಾಗ: ಮೆಸ್ಕಾಂ ಕಚೇರಿ ತೀವ್ರ ಇಕ್ಕಟ್ಟಿನ ಜಾಗದಲ್ಲಿ ಸಭೆ ನಡೆಸಿರುವುದು ವಿದ್ಯುತ್ ಬಳಕೆದಾರರ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಯಿತು. ಮುಂದಿನ ಸಭೆಯನ್ನು ವಿಶಾಲ ಜಾಗದಲ್ಲಿ ಆಯೋಜಿಸುವಂತೆ ವಿದ್ಯುತ್ ಬಳಕೆದಾರರು ಆಗ್ರಹಿಸಿದರು.
ಅರಣ್ಯ ಇಲಾಖೆಯ ಹಸ್ತಕ್ಷೇಪ
ಬೆಳಾಲಿನಲ್ಲಿ 110 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಹಸ್ತಕ್ಷೇಪ ಇರುವ ಕುರಿತು ಸಭೆಗೆ ತಿಳಿಸಲಾಯಿತು. ಬೆಳಾಲು ಫೀಡರ್‌ನಲ್ಲಿ ಹೆಚ್ಚಿನ ವಿದ್ಯುತ್ ಸಮಸ್ಯೆ ಇರುವ ಕುರಿತು ಪದ್ಮಗೌಡ ಗಮನ ಸೆಳೆದರು. ಬೆಳಾಲು ಫೀಡರ್‌ಗೆ ಕಕ್ಕಿಂಜೆ ಸಬ್ ಸ್ಟೇಷನ್‌ನಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ಅಧಿಕಾರಿ ಉತ್ತರಿಸಿದರು. ಮಂಗಳೂರು ಮೆಸ್ಕಾಂ ವೃತ್ತದ ಎಸ್.ಇ.ಕೃಷ್ಣರಾಜ ಉಪಸ್ಥಿತರಿದ್ದರು. ಬೆಳ್ತಂಗಡಿ ಮೆಸ್ಕಾಂ ಉಪವಿಭಾಗದ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರಾೃಗ್ಸ್ ಸ್ವಾಗತಿಸಿದರು. ಉಜಿರೆ ಉಪ ವಿಭಾಗದ ಎಇಇ ಈ ಪ್ರವೀಣ್ ವಂದಿಸಿದರು.