

ಸುಳ್ಯ: ಕುಡಿಯುವ ನೀರು ಸರಬರಾಜಿನ ಪೈಪ್ ಅಳವಡಿಕೆ ಕಾಮಗಾರಿಗಾಗಿ ಕುರುಂಜಿಗುಡ್ಡೆ ರಸ್ತೆಯನ್ನು ಅಗೆದು ಪೈಪ್ ಅಳವಡಿಕೆ ಮಾಡಿ ಕೆಲದಿನಗಳಾದರೂ ರಸ್ತೆಯನ್ನು ಮಾತ್ರ ಇನ್ನೂ ಸರಿಪಡಿಸದಿರುವ ಪರಿಣಾಮ ಪರಿಸರವೆಲ್ಲ ಧೂಳುಮಯವಾಗಿ ಸಂಚಾರಕ್ಕೆ ಸಮಸ್ಯೆ ಉಂಟಾಗಿದೆ.
ಸುಳ್ಯದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಸರ್ಕಾರದಿಂದ ಅನುದಾನ ಮಂಜೂರುಗೊಂಡು ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಕುರುಂಜಿಗುಡ್ಡೆಯಲ್ಲಿ ರಸ್ತೆ ಅಗೆದು ಪೈಪ್ ಅಳವಡಿಕೆ ಕಾಮಗಾರಿ ವೇಳೆ ಕಾಂಕ್ರೀಟ್ ರಸ್ತೆಯನ್ನು ಮಧ್ಯಭಾಗದಿಂದ ತುಂಡರಿಸಿ ಪೈಪ್ ಅಳವಡಿಕೆ ಮಾಡಲಾಗಿತ್ತು. ಕೋರ್ಟ್ ಬಳಿಯಿಂದ ಕುರುಂಜಿಗುಡ್ಡೆ ಗೆ ಹೋಗುವ ರಸ್ತೆಯ ಕಾಮಗಾರಿ ಮುಗಿದಿದ್ದರೂ ರಸ್ತೆ ಸರಿಯಾಗಿ ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ರಸ್ತೆಯೆಲ್ಲ ಧೂಳುಮಯವಾಗಿ ಪರಿಸರದ ಮನೆಗಳಿಗೂ ತೊಂದರೆಯಾಗಿದ್ದು ಶೀಘ್ರ ರಸ್ತೆಯನ್ನು ಪ್ರಯಾಣ ಯೋಗ್ಯಗೊಳಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.