

ಮೂಲ್ಕಿ: ಕಂದಾಯ ಇಲಾಖೆ ಮೂಲಕ ನಿರ್ಮಾಣವಾಗುತ್ತಿರುವ ಸುಮಾರು 12.50 ಕೋಟಿ ರೂ. ವೆಚ್ಚದಲ್ಲಿ ಬಹು ನಿರೀಕ್ಷಿತ ಮೂಲ್ಕಿ ತಾಲೂಕು ಪ್ರಜಾ ಸೌಧ ಕಟ್ಟಡ ಕಾಮಗಾರಿಯನ್ನು ಶಾಸಕ ಉಮಾನಾಥ ಎ.ಕೋಟ್ಯಾನ್ ಮಂಗಳವಾರ ವೀಕ್ಷಿಸಿ ಮಾರ್ಚ್ 20ರ ಒಳಗೆ ಉದ್ಘಾಟನೆಗೆ ಸಜ್ಜುಗೊಳಿಸುವಂತೆ ಸೂಚಿಸಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮವಾಗಿ ಮೂಲ್ಕಿ-ಮೂಡುಬಿದಿರೆ ಕ್ಷೇತ್ರಕ್ಕೆ 2 ಪ್ರಜಾ ಸೌಧ ಕಟ್ಟಡ 2022ರಲ್ಲಿ ಅನುಷ್ಠಾನಗೊಂಡಿತ್ತು. ಕರ್ನಾಟಕ ಗೃಹ ಮಂಡಳಿ ಮೂಲಕ ಯೋಜನೆ ಜಾರಿಗೊಂಡು ಬಿಮಲ್ ಕನ್‌ಸ್ಟ್ರಕ್ಷನ್ ಮೂಲಕ ಕಾಮಗಾರಿ ನಡೆಯುತ್ತಿದೆ. ಆರಂಭದಲ್ಲಿ 10 ಕೋಟಿ ರೂ. ಇದ್ದ ಯೋಜನಾ ವೆಚ್ಚ 12.50 ಕೋಟಿ ರೂ. ದಾಟಿದೆ. ಈಗಾಗಲೇ 8 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಉಳಿದ ಅನುದಾನಕ್ಕಾಗಿ ಕಂದಾಯ ಮತ್ತು ವಸತಿ ಸಚಿವರಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.
ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಗುತ್ತಿಗೆದಾರರು ಮಾರ್ಚ್ 20ರ ಒಳಗೆ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದು, ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ, ವಸತಿ ಮತ್ತು ಕಂದಾಯ ಸಚಿವರು ಉದ್ಘಾಟನೆಗೆ ಆಗಮಿಸುವ ನಿರೀಕ್ಷೆ ಇದೆ. ಈ ಮೂಲಕ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳನ್ನು ತರುವ ಯೋಜನೆ ಜಾರಿಗೊಳ್ಳಲಿದೆ ಎಂದು ತಿಳಿಸಿದರು.
ಗೃಹ ಮಂಡಳಿಯ ಎಇಇ ಸಹನಾ, ಎಇ ಪ್ರದೀಪ್, ಎ.ಜಿ.ಅಸೋಸಿಯೇಟ್ಸ್ ಆರ್ಟಿಟೆಕ್ಟ್‌ಗಳಾದ ಯೋಗೀಶ್ಚಂದ್ರ ಮತ್ತು ದೀಪಕ್, ಸೈಟ್ ಇನ್‌ಚಾರ್ಜ್ ರಷ್ಮಿತ್ ಅವರು ಶಾಸಕರಿಗೆ ಕಾಮಗಾರಿಗಳ ಸಮಗ್ರ ಮಾಹಿತಿ ನೀಡಿದರು.
ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಸುಭಾಷ್ ಶೆಟ್ಟಿ ಮತ್ತು ಶೈಲೇಶ್ ಕುಮಾರ್, ಮಾಜಿ ಸದಸ್ಯ ಈರಣ್ಣ ಅರಳಗುಂಡಿ, ವಿಜಯ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ರಂಗನಾಥ್ ಶೆಟ್ಟಿ, ಪಡುಪಣಂಬೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ವಕೀಲ ರವೀಶ್ ಕಾಮತ್, ಮೂಲ್ಕಿ ತಾಲೂಕು ಉಪ ತಹಸೀಲ್ದಾರ್ ದಿಲೀಪ್ ರೋಡ್ಕರ್, ಆಹಾರ ನಿರೀಕ್ಷಕ ಮೋಹನ್ ಉಪಸ್ಥಿತರಿದ್ದರು.