ಅಭಿವೃದ್ಧಿಯಾಗಲಿದೆ ಚಾರ್ಮಾಡಿ ಘಾಟಿ

Bel_Charmadi
Published on

ಮನೋಹರ್ ಬಳಂಜ ಬೆಳ್ತಂಗಡಿ ಕರಾವಳಿಯ ಹೆಬ್ಬಾಗಿಲು ನಿಸರ್ಗ ಸೌಂದರ್ಯದ ತಿರುವು-ಮುರುವಿನ ರಸ್ತೆಯೊಂದಿಗೆ ಚಾಲಕ ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ಚಾರ್ಮಾಡಿ ಘಾಟಿ ವಿಭಾಗದ ಅಭಿವೃದ್ಧಿ ಕಾಮಗಾರಿ ಅಂತಿಮ ಹಂತದ ಸಮೀಕ್ಷೆಗಳು ನಡೆಯುತ್ತಿವೆ. ಚಾರ್ಮಾಡಿ ಘಾಟಿ ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು 343 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ. ರಸ್ತೆ ಕಾಮಗಾರಿಯನ್ನು ಎಸ್‌ಎಲ್‌ವಿ ಕಂಪನಿ 175 ಕೋಟಿ ರೂ.ಗಳಿಗೆ ಟೆಂಡರ್ ವಹಿಸಿಕೊಂಡಿದೆ. ಉಳಿದ ಹಣವನ್ನು ಇನ್ನಿತರ ಖರ್ಚುಗಳಿಗಾಗಿ ವಿನಿಯೋಗಿಸಲಾಗುತ್ತದೆ. 900 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಭೂಮಿ ಇದ್ದು ಕೆಲವು ಮನೆಗಳು ಇವೆ. ಇವುಗಳಿಗೆ ಪರಿಹಾರ ವಿದ್ಯುತ್ ಕಂಬ, ಪರಿವರ್ತಕ, ಪಂಚಾಯಿತಿ ಪೈಪ್‌ಲೈನ್ ಸ್ಥಳಾಂತರಕ್ಕೆ ಮೊತ್ತ ಮೀಸಲಿರಿಸಲಾಗಿದೆ. 25 ಕಿ.ಮೀ. ವ್ಯಾಪ್ತಿಯ ಘಾಟಿ ರಸ್ತೆಯ ಪೈಕಿ 12 ಕಿ.ಮೀ. .ಕ ಜಿಲ್ಲೆಯ ವ್ಯಾಪ್ತಿಯಲ್ಲಿದೆ. ಸದ್ಯ ದ.ಕ ವಿಭಾಗದ ಕಾಮಗಾರಿಗೆ ಟೆಂಡರ್ ಆಗಿರುತ್ತದೆ. 12 ತಿರುವುಗಳು ಸೇರಿ ಅಗಲೀಕರಣ ಕಾಮಗಾರಿ ನಡೆಯಲಿದೆ. ಈಗಾಗಲೇ 35 ಕಿ.ಮೀ. ವ್ಯಾಪ್ತಿಯಲ್ಲಿ ಘಾಟಿ ಸಂಪರ್ಕದ ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ಹೆದ್ದಾರಿ ಕಾಮಗಾರಿ ಅಭಿವೃದ್ಧಿ ನಡೆಯುತ್ತಿದೆ. ಹೆಚ್ಚಿನ ಕಡೆ 10ಮೀ. ಅಗಲ, ಅಗತ್ಯ ಸ್ಥಳಗಳಲ್ಲಿ ಸರ್ವಿಸ್ ರಸ್ತೆ ಸಹಿತ ಕೆಲಸ ನಡೆಯುತ್ತಿದೆ. ಈ ವರ್ಷ ರಕ್ಷಣಾ ಕೆಲಸ ಈಗಾಗಲೇ ಘಾಟಿ ಅಭಿವೃದ್ಧಿ ಕಾಮಗಾರಿ ಹೆಚ್ಚಿನ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಆದರೆ ಇನ್ನೆರಡು ತಿಂಗಳಲ್ಲಿ ಮಳೆಗಾಲ ಆರಂಭವಾಗುವ ಕಾರಣ ಈ ವರ್ಷ ರಕ್ಷಣಾ ಕಾಮಗಾರಿಗಳು ಮಾತ್ರ ನಡೆಯಲಿವೆ ಎಂದು ತಿಳಿದುಬಂದಿದೆ. ಘಾಟಿ ವಿಭಾಗದಲ್ಲಿ ಕುಸಿಯಬಹುದಾದ ಜಾಗಗಳಲ್ಲಿ ಕಾಮಗಾರಿ ನಡೆಯಲಿದೆ. ಅಲ್ಲದೆ ತಿರುವುಗಳನ್ನು ಅಗಲಗೊಳಿಸುವ, ರಸ್ತೆಯ ಉದ್ದಕ್ಕೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ, ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವು, ಬಂಡೆಕಲ್ಲು ಜಾರಿ ಬೀಳಬಹುದಾದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಹಾಗೂ ಇತರ ಕಾಮಗಾರಿಗಳು ನಡೆಯಲಿವೆ. ಉಳಿದ ಹೆಚ್ಚಿನ ಕೆಲಸಗಳು ಮುಂದಿನ ವರ್ಷ ಆರಂಭವಾಗಲಿವೆ.

ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ತೆರವುಗೊಳ್ಳಬೇಕಾದ ಗಿಡ-ಮರಗಳ ಲೆಕ್ಕಾಚಾರ ಇನ್ನಷ್ಟೇ ನಡೆಯಬೇಕಿದೆ. ಗುತ್ತಿಗೆದಾರರು ಈ ಕುರಿತು ಮನವಿ ಸಲ್ಲಿಸಿದ ಕೂಡಲೇ ರಸ್ತೆಯ ಅಕ್ಕಪಕ್ಕದ ಅಗತ್ಯವಿರುವ ಭೂಮಿ ಹಾಗೂ ಮರಗಳ ಲೆಕ್ಕಾಚಾರ ಮಾಡಲಾಗುವುದು. ಆಂಟನಿ ಮರಿಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ

ಚಾರ್ಮಾಡಿ ಘಾಟಿ ರಸ್ತೆ ಅಭಿವೃದ್ಧಿ ಟೆಂಡರ್ ಹಾಗೂ ಗುತ್ತಿಗೆದಾರರ ನೇಮಕವಾಗಿದೆ. ಶಾಸಕರು, ಅಧಿಕಾರಿಗಳು ಸೇರಿ ಕಾಮಗಾರಿ ವೇಳೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ಯೋಜನೆ ರೂಪಿಸಲಾಗುವುದು. ಜಿಲ್ಲೆಯಲ್ಲಿ ಮಳೆಗಾಲ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಆರು ತಿಂಗಳು ಮಾತ್ರ ಕಾಮಗಾರಿ ನಡೆಸಬಹುದಾಗಿದೆ. ಕ್ಯಾ.ಬ್ರಿಜೇಶ್ ಚೌಟ, ಸಂಸದ, ದ.ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net