ಮಾ.23ರಂದು ರಾಷ್ಟ್ರಕವಿ ಗೋವಿಂದ ಪೈ ಜನ್ಮದಿನಾಚರಣೆ

Published on

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ 142ನೇ ಜನ್ಮದಿನಾಚರಣೆಯನ್ನು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಮಾ.23ರಂದು ಮಂಜೇಶ್ವರದ ಕವಿಮನೆ ಗಿಳಿವಿಂಡಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ.

ಬುಧವಾರ ಮಂಜೇಶ್ವರದ ಗಿಳಿವಿಂಡಲ್ಲಿ ನಡೆದ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ ರಚಿಸಲಾಯಿತು. ಸಮಾರಂಭದ ಸ್ವಾಗತಿ ಸಮಿತಿ ಅಧ್ಯಕ್ಷರಾಗಿ ಕಾಸರಗೋಡು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಪ್ರಧಾನ ಕಾರ್ಯದರ್ಶಿಯಾಗಿ ಗಿಳಿವಿಂಡು ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು, ಖಜಾಂಚಿಯಾಗಿ ಬಾಲಕೃಷ್ಣ ಶೆಟ್ಟಿಗಾರ್ ಆಯ್ಕೆಯಾದರು.

ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ, ಸಭಾ ಕಾರ್ಯಕ್ರಮ, ಬಹುಭಾಷಾ ಕವಿಗೋಷ್ಠಿ ಮೊದಲಾದ ಕಾರ್ಯಕ್ರಮಗಳನ್ನು 23ರಂದು ಬೆಳಗ್ಗೆ 9.30ರಿಂದ ಗಿಳಿವಿಂಡಲ್ಲಿ ಆಯೋಜಿಸಲಾಗಿದೆ. ಮಹಾಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗ್ರಂಥಾಲಯಕ್ಕೆ ಗಿಳಿವಿಂಡು ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಂಥಾಲಯ-ವಾಚನಾಲಯ ಕಟ್ಟಡವನ್ನು ಲೋಕಾರ್ಪಣೆಗೊಳಿಸಲಾಗುವುದು. ಎರಡೂ ರಾಜ್ಯಗಳ ವಿವಿಧ ವಲಯಗಳ ಗಣ್ಯರು, ಕವಿ, ಸಾಹಿತಿಗಳು ಪಾಲ್ಗೊಳ್ಳಲಿರುವ ಸಮಾರಂಭದಲ್ಲಿ ಈರ್ವರು ಸಾಹಿತ್ಯ ಸಾಧಕರಿಗೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಗಿಳಿವಿಂಡು ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ಕಮಲಾಕ್ಷ ಡಿ, ಕಮಲಾಕ್ಷ ಕನಿಲ, ಆಶಾ ದಿಲೀಪ್ ಸುಳ್ಯಮೆ, ವನಿತಾ ಆರ್.ಶೆಟ್ಟಿ, ಉಮೇಶ್ ಕೆ.ಮಂಜೇಶ್ವರ, ಈಶ್ವರ ಮಾಸ್ತರ್ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net