

ಚಂಡೀಗಢ: ಕಾಂಗ್ರೆಸ್ನ ಹಿರಿಯ ಶಾಸಕ ಚರಣಜೀತ್ ಸಿಂಗ್ ಚನ್ನಿ ಅವರು ಇಂದು ಪಂಜಾಬ್ನ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಚಂಡೀಗಢದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ್ ಅವರು ಚನ್ನಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ಬೋಧಿಸಿದರು.
ಸಿಎಂ ಹುದ್ದೆ ಏರಿರುವ ಮೊದಲ ದಲಿತ ಸಿಖ್ ಸಮುದಾಯದವರೆಂಬ ಹೆಗ್ಗಳಿಕೆ ಗಳಿಸಿರುವ 58 ವರ್ಷ ವಯಸ್ಸಿನ ಚನ್ನಿ, ಪಂಜಾಬಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹರೀಶ್ ರಾವತ್ ಮತ್ತು ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಮಾರಂಭದಲ್ಲಿ ಭಾಗವಹಿಸಿದರು. ನಿಕಟಪೂರ್ವ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ.
ರಾಜ್ಯದ ರೂಪ್ನಗರದ ಚಮ್ಕೌರ್ ಸಾಹಿಬ್ನಿಂದ ಮೂರನೇ ಬಾರಿ ಶಾಸಕರಾಗಿರುವ ಚರಣ್ಜೀತ್ ಸಿಂಗ್ ಚನ್ನಿ, ಕ್ಯಾಪ್ಟನ್ ಸರ್ಕಾರದಲ್ಲಿ ತಾಂತ್ರಿಕ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಟ್ಟು ಒಂಭತ್ತೂವರೆ ವರ್ಷಗಳ ಕಾಲ ಪಂಜಾಬ್ ಸಿಎಂ ಆಗಿದ್ದ ಕ್ಯಾಪ್ಟನ್ ವಿರುದ್ಧ ದನಿಯೆತ್ತಿದವರಲ್ಲಿ ಚನ್ನಿ ಕೂಡ ಒಬ್ಬರು.
ಇಬ್ಬರು ಉಪಮುಖ್ಯಮಂತ್ರಿಗಳು: ಇದೇ ಸಂದರ್ಭದಲ್ಲಿ, ಸಿಎಂ ಉಮೇದುವಾರರಾಗಿದ್ದ ಹಿರಿಯ ಶಾಸಕ ಸುಖ್ಜಿಂದರ್ ಸಿಂಗ್ ರಾಂಧವ ಮತ್ತು ಮತ್ತೊಬ್ಬ ಶಾಸಕರಾದ ಓ.ಪಿ.ಸೋನಿ ಅವರು ಸಚಿವ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿದರು. ರಾಂಧವ ಮತ್ತು ಸೋನಿ ಅವರನ್ನು ರಾಜ್ಯದ ಡೆಪ್ಯುಟಿ ಸಿಎಂಗಳಾಗಿ ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮಾಜಿ ಸಿಎಂ ರಾಜಿಂದರ್ ಕೌರ್ ಭಟ್ಟಲ್ ಹೇಳಿದ್ದಾರೆ. (ಏಜೆನ್ಸೀಸ್)