"ಪ್ರತಿ ಮನೆಗೂ ಉದ್ಯೋಗ ಇಲ್ಲವೇ ತಿಂಗಳಿಗೆ 5,000 ರೂಪಾಯಿ"

uttar
Published on

ನವದೆಹಲಿ: ಆಮ್​ ಆದ್ಮಿ ಪಾರ್ಟಿ(ಎಎಪಿ)ದ ನೇತಾರ ಹಾಗೂ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಅವರು ಉತ್ತರಾಖಂಡದ ಯುವಜನತೆಯ ವಿಶ್ವಾಸ ಗೆಲ್ಲುವತ್ತ ದಾಪುಗಾಲು ಹಾಕುತ್ತಿದ್ದಾರೆ. ರಾಜ್ಯದಲ್ಲಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ, ಪ್ರತ್ಯೇಕ ಸಚಿವಾಲಯವನ್ನೇ ಸೃಷ್ಟಿಸಿ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿ ಮಾಡುವುದಾಗಿ ಆಶ್ವಾಸನೆ ನೀಡಿದ್ದಾರೆ.

ರಾಜ್ಯದ ವಿಧಾನಸಭಾ ಚುನಾವಣೆಗಳ ಸಿದ್ಧತೆಗಾಗಿ ಇಂದು ಉತ್ತರಾಖಂಡದ ಹಲ್​​ದ್ವನಿಯಲ್ಲಿ ತಿರಂಗಾ ಸಂಕಲ್ಪ ಯಾತ್ರೆ ನಡೆಸಿದ ಕೇಜ್ರಿವಾಲ್​, ತಮ್ಮ ಟ್ವಿಟರ್​ ಖಾತೆಯಲ್ಲಿ ಅದರ ವಿವರಗಳನ್ನು ಶೇರ್​ ಮಾಡಿದ್ದಾರೆ. ಜೊತೆಯಲ್ಲೇ, ರಾಜ್ಯದಲ್ಲಿ ಎಎಪಿ ಸರ್ಕಾರ ರಚನೆಯಾದರೆ, ಅಲ್ಲಿನ ಜನರಿಗೆ 6 ಗ್ಯಾರಂಟಿಗಳನ್ನು ಕೊಡುತ್ತೇನೆ ಎಂದಿದ್ದಾರೆ.

ಪ್ರತಿಯೊಂದು ಮನೆಗೆ ಉದ್ಯೋಗ ನೀಡಲಾಗುವುದು ಅಥವಾ ಉದ್ಯೋಗ ಸಿಗುವವರೆಗೆ ತಿಂಗಳಿಗೆ 5 ಸಾವಿರ ರೂಪಾಯಿ ನೀಡಲಾಗುವುದು; ನೌಕರಿಗಳಲ್ಲಿ ಉತ್ತರಾಖಂಡದ ಜನರಿಗೆ ಶೇ.80 ರಷ್ಟು ಮೀಸಲಾತಿ ನೀಡಲಾಗುವುದು; 6 ತಿಂಗಳಲ್ಲಿ 1 ಲಕ್ಷ ಸರ್ಕಾರಿ ನೌಕರಿ ಸೃಷ್ಟಿ ಮಾಡಲಾಗುವುದು; ಖಾಸಗಿ ಕ್ಷೇತ್ರಗಳ ನೌಕರಿಗಳಿಗಾಗಿ ಜಾಬ್​ ಪೋರ್ಟಲ್​ ತೆರೆಯಲಾಗುವುದು; ಜನರು ಅನ್ಯರಾಜ್ಯಗಳಿಗೆ ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಮತ್ತು ವಲಸೆ ಮಂತ್ರಾಲಯವನ್ನು ರಚಿಸಲಾಗುವುದು ಎಂದು ಕೇಜ್ರಿವಾಲ್​ ಟ್ವೀಟ್​ ಮಾಡಿದ್ದಾರೆ.

ಎಎಪಿಯು ಉತ್ತರಾಖಂಡದ ಸಿಎಂ ಅಭ್ಯರ್ಥಿಯಾಗಿ ನಿವೃತ್ತ ಕರ್ನಲ್​ ಅಜಯ್​ ಕೋತಿಯಾಲ್​ ಅವರನ್ನು ಹೆಸರಿಸಿದೆ. ಒಟ್ಟು 70 ವಿಧಾನಸಭಾ ಕ್ಷೇತ್ರಗಳಿರುವ ಉತ್ತರಾಖಂಡ ರಾಜ್ಯದಲ್ಲಿ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 56 ಸೀಟುಗಳನ್ನು ಗೆದ್ದು, ಸರ್ಕಾರ ರಚಿಸಿತ್ತು. ಕಾಂಗ್ರೆಸ್​ 11 ಸೀಟುಗಳನ್ನು ಗೆದ್ದಿತ್ತು. ಇದೀಗ ಎಎಪಿ ಈ ರಾಜ್ಯಕ್ಕೆ ಪ್ರವೇಶ ನೀಡುತ್ತಿದ್ದು, ಯಾವ ರೀತಿಯ ಬದಲಾವಣೆ ತರಲಿದೆ ಎಂದು ಕಾದುನೋಡಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net