

ನವದೆಹಲಿ: 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಿನ್ನೆ ನಡೆಸಿದ ಪ್ರತಿಭಟನೆ ಕೆಲವು ಕಡೆಗಳಲ್ಲಿ ಉಗ್ರರೂಪ ಪಡೆದಿತ್ತು. ರಾಜಕೀಯ ಪಕ್ಷಗಳ ಕಾರ್ಯಕರ್ತರು, ನಾಯಕರು ಬೀದಿಗಿಳಿದು ಅಸಮಾಧಾನ ವ್ಯಕ್ತಪಡಿಸಿದರು. ಅದರಲ್ಲೂ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಹಾಗೇ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನಾಕಾರರು ಟ್ರ್ಯಾಕ್ಟರ್ ಒಂದಕ್ಕೆ ಬೆಂಕಿಯಿಟ್ಟಿದ್ದು ಬಹುದೊಡ್ಡ ವಿವಾದಕ್ಕೆ ಕಾರಣವಾಗಿದೆ. ರಾಜಪಥ್ನ ಮಾನ್ಸಿಂಗ್ ಕ್ರಾಸ್ನಲ್ಲಿ ಹೋಗುತ್ತಿದ್ದ ಟ್ರ್ಯಾಕ್ಟರ್ನ್ನು ನಿಲ್ಲಿಸಿ, ಅದರಲ್ಲಿದ್ದವರನ್ನು ಕೆಳಗೆ ಇಳಿಸಿ ಅದಕ್ಕೆ ಬೆಂಕಿ ಹಚ್ಚಿದ್ದರು. ಈ ಘಟನೆಯನ್ನು ಇಂದು ಪ್ರಧಾನಿ ನರೇಂದ್ರ ಮೋದಿಯವರು ಉತ್ತರಾಖಂಡದ ಆರು ಬೃಹತ್ ಯೋಜನೆಗಳ ಉದ್ಘಾಟನೆಯ ವೇಳೆಯೂ ಪ್ರಸ್ತಾಪ ಮಾಡಿ, ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಹಾರ್ಟ್ ಚೆಕಪ್ಗೂ ಕರೊನಾ ಸೋಂಕಿನ ಭಯ.. ಹೃದಯ ಜೋಪಾನ…
ಈ ಕೃತ್ಯ ನಡೆಸಿದವರು ಯುವ ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾಗಿತ್ತು. ಘಟನೆಗೆ ಸಂಬಂಧಪಟ್ಟಂತೆ ಐವರನ್ನು ಪೊಲೀಸರು ನಿನ್ನೆಯೇ ಬಂಧಿಸಿದ್ದರು. ಇಂದು ಯುವ ಕಾಂಗ್ರೆಸ್ನ ಪಂಜಾಬ್ ಮುಖ್ಯಸ್ಥ ಬ್ರೈಂಡರ್ ಧಿಲ್ಲಾನ್ರನ್ನು ಅರೆಸ್ಟ್ ಮಾಡಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಇದುವರೆಗೆ ಆರು ಮಂದಿಯನ್ನು ಬಂಧಿಸಲಾಗಿದ್ದು, 2 ವಾಹನಗಳನ್ನು ಜಪ್ತಿ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)