

ನವದೆಹಲಿ: ಜಗತ್ತಿನಾದ್ಯಂತ ಕಾಡುತ್ತಿರುವ ಕೋವಿಡ್ 19 ಸೋಂಕಿನ ವಿಚಾರದಲ್ಲಿ ಭಾರತ ಈಗ ದಾಖಲೆಯೊಂದಕ್ಕೂ ಪಾತ್ರವಾಗಿದೆ. ದೇಶದಲ್ಲಿ ಈಗ ಗುಣವಾದವರ ಸಂಖ್ಯೆ 51 ಲಕ್ಷಕ್ಕೆ ತಲುಪಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎಂಬ ಹೆಗ್ಗಳಿಕೆಯನ್ನು ತಂದಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಹೊಸದಾಗಿ 70,589 ಕರೊನಾ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಪ್ರಮಾಣ 61 ಲಕ್ಷವನ್ನು ದಾಟಿದೆ. ಆದರೆ ಕಳೆದ 14 ಗಂಟೆಗಳಲ್ಲಿ ದೇಶದಲ್ಲಿ 776 ಜನರು ಕೋವಿಡ್ಗೆ ಬಲಿಯಾಗಿದ್ದು, ಇದುವರೆಗೆ ಒಟ್ಟು 96,318 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಸದ್ಯ ಭಾರತದಲ್ಲಿ 61.45 ಲಕ್ಷ ಕೋವಿಡ್ ಸೋಂಕಿತರು ವರದಿಯಾಗಿದ್ದು, ಆ ಪೈಕಿ 9.45 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. (ಏಜೆನ್ಸೀಸ್)