

ಬೆಂಗಳೂರು: ಕಿಚ್ಚ ಸುದೀಪ್ ಅವರ ಬಯೋಗ್ರಫಿ ಬಿಡುಗಡೆ ಮಾಡುವ ಮೂಲಕ ಹುಟ್ಟು ಹಬ್ಬಕ್ಕೆ ಶುಭ ಕೋರಿದರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪತ್ರಕರ್ತ ಶರಣು ಹುಲ್ಲೂರು ಬರೆದ ಈ ಪುಸ್ತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಪುನೀತ್ ರಾಜ್ ಕುಮಾರ್, ಸಮಗ್ರ ಮಾಹಿತಿ, ಅಪರೂಪದ ಫೋಟೋ ಒಳಗೊಂಡಿರುವ ಕೃತಿಯ ಓದುಗರನ್ನು ಸೆಳೆಯಲಿದೆ ಎಂದರು.
ಈ ಪುಸ್ತಕದಲ್ಲಿ ಸುದೀಪ್ ಮತ್ತು ಪುನೀತ್ ಅವರ ಬಾಲ್ಯದ ಅಪರೂಪದ ಫೋಟೋ ಇದ್ದು, ಅದನ್ನು ಕಂಡು ಸಂಭ್ರಮಿಸಿದರು. ಮತ್ತು ಈ ಹೊತ್ತಿನಲ್ಲಿ ಬಾಲ್ಯದ ಹಲವು ನೆನಪುಗಳನ್ನು ಹಂಚಿಕೊಂಡರು.
ಪುಸ್ತಕ ಬಿಡುಗಡೆ ಸಂಧರ್ಭದಲ್ಲಿ ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ನಿರ್ಮಾಪಕ ಜಾಕ್ ಮಂಜು ಉಪಸ್ಥಿತರಿದ್ದರು.
ಪುಸ್ತಕದಲ್ಲೇನಿದೆ; ಇನ್ನು ಪುಸ್ತಕದ ಬಗ್ಗೆ ಹೇಳಬೇಕೆಂದರೆ, ಬಾಲ್ಯದಿಂದ ಈವರೆಗಿನ ಅನೇಕ ಸಂಗತಿಗಳನ್ನು ಈ ಪುಸ್ತಕದಲ್ಲಿ ಹಿಡಿದಿಡಲಾಗಿದ್ದು, ಸಿನಿಮಾ ರಂಗದ ಅನೇಕ ಘಟನೆಗಳಿಗೆ ಈ ಪುಸ್ತಕ ಸಾಕ್ಷಿಯಾಗಲಿದೆ. ಕಿಚ್ಚ ಸುದೀಪ್ ಅವರ ಸಮಗ್ರ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕ ಇದಾಗಿದ್ದು, ಅಪರೂಪದ ಅನೇಕ ಫೋಟೋಗಳನ್ನು ಬಳಸಲಾಗಿದೆ. ಈವರೆಗೂ ಆ ಫೋಟೋಗಳನ್ನು ಯಾರೂ ನೋಡಿರಲು ಸಾಧ್ಯವಿಲ್ಲ.
ಇದನ್ನೂ ಓದಿ: ಯಶ್-ರಾಧಿಕಾ ಮಗನ ಹೆಸರು ಕೊನೆಗೂ ಬಹಿರಂಗ …
ಸುದೀಪ್ ಅವರ ತಂದೆ, ತಾಯಿ, ಅಕ್ಕಂದಿರು, ಪತ್ನಿ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುದೀಪ್ ಅವರ ಪುತ್ರಿ, ಅಪ್ಪನಿಗಾಗಿ ಪತ್ರ ಬರೆದಿದ್ದಾರೆ. ಕಿಚ್ಚನ ಬದುಕಿನ ಅನೇಕ ಇಂಟ್ರಸ್ಟಿಂಗ್ ಸಂಗತಿಗಳನ್ನು ಒಳಗೊಂಡಿರುವ ಪುಸ್ತಕ ಇದಾಗಿದೆ. ಸುದೀಪ್ ಅವರ ಕುರಿತಾಗಿ ಬರುತ್ತಿರುವ ಮೊದಲ ಪುಸ್ತಕ ಇದಾಗಿದೆ.