

ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮುದ್ದಿನ ಮಗನ ಹೆಸರು ಏನಿರಬಹುದು ಎಂದು ಅವರಿಬ್ಬರ ಅಭಿಮಾನಿಗಳು ಹಲವು ದಿನಗಳಿಂದ ತಲೆ ಕೆಡಿಸಿಕೊಂಡಿದ್ದರು. ಮಗಳಿಗೆ ಆಯ್ರಾ ಎಂದು ಹೆಸರಿಟ್ಟಿದ್ದ ಯಶ್ ಮತ್ತು ರಾಧಿಕಾ ಪಂಡಿತ್, ಮಗನಿಗೆ ಏನು ಹೆಸರಿಡಬಹುದು ಎಂಬ ಕುತೂಹಲ ಎಲ್ಲರಿಗೂ ಇತ್ತು.
ಆ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಇತ್ತೀಚೆಗೆ ಯಶ್ ಅವರ ಫಾರ್ಮ್ ಹೌಸ್ನಲ್ಲಿ ನಾಮಕರಣ ಸಮಾರಂಭವನ್ನು ಆಯೋಜಿಸಲಾಗಿದ್ದು, ಈ ಸಂದರ್ಭದಲ್ಲಿ ಯಥರ್ವ್ ಎಂಬ ಹೆಸರನ್ನು ಇಡಲಾಗಿದೆ.
ಯಥರ್ವ್ ಎಂದರೆ ಸಂಪೂರ್ಣ ಎಂದರ್ಥ. ನಾಮಕರಣದ ವಿಡಿಯೋ ಶೇರ್ ಮಾಡಿರುವ ಯಶ್ ದಂಪತಿ, 'ನಮ್ಮನ್ನು ಪೂರ್ಣಗೊಳಿಸಿದವನು' ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, 'ರಾರಾಜಿಸುತ ಬದುಕು ಮಗನೇ. ಹರಸಿ ಹಾರೈಸಿ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಂಗನಾ ರಣಾವತ್ಗೆ ಅಭಿಮಾನಿಗಳ ಕೊರತೆ
ಕೆಲವು ದಿನಗಳ ಹಿಂದೆ, ತಮ್ಮ ಮಗನಿಗೆ ಒಂದು ಹೆಸರು ಹುಡುಕಿದ್ದೇವೆ ಎಂದು ರಾಧಿಕಾ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ಅದನ್ನು ಸದ್ಯದಲ್ಲೇ ಅಧಿಕೃತವಾಗಿ ಹೇಳುವುದಾಗಿ ಹೇಳಿದ್ದರು. ಅದರಂತೆ, ಮಂಗಳವಾರ ಸೋಷಿಯಲ್ ಮೀಡಿಯಾ ಮೂಲಕ ನಾಮಕರಣದ ವಿಡಿಯೋ ಬಿಡುಗಡೆ ಮಾಡುವ ಮೂಲಕ, ಮಗನಿಗೆ ಯಥರ್ವ್ ಎಂಬ ಹೆಸರನ್ನು ಇಟ್ಟಿರುವುದಾಗಿ ಘೋಷಿಸಿದ್ದಾರೆ.