ನಟ ಪುನೀತ್ ರಾಜಕುಮಾರ್ ಫೌಂಡೇಷನ್​ ಸಹಾಯಾರ್ಥ ನಡೆಯಬೇಕಿದ್ದ ಶೋಗೆ ಪೊಲೀಸರ ತಡೆ, ಇಂದಿನ ಕಾರ್ಯಕ್ರಮ ರದ್ದು..

Puneeth
Published on

ಬೆಂಗಳೂರು: ಇತ್ತೀಚೆಗೆ ಅಗಲಿರುವ ನಟ, ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಂಸ್ಥೆಯ ಸಹಾಯಾರ್ಥ ಇಂದು ನಡೆಯಬೇಕಿದ್ದ ಶೋವೊಂದನ್ನು ಬೆಂಗಳೂರು ಪೊಲೀಸರು ತಡೆದಿದ್ದು, ಇಂದಿನ ಆ ಕಾರ್ಯಕ್ರಮ ರದ್ದಾಗಿದೆ.

ಕಾಮಿಡಿಯನ್​ ಮುನಾವರ್ ಫಾರೂಕಿ ಎಂಬವರಿಂದ ನಡೆಯಬೇಕಿದ್ದ ಈ ಹಾಸ್ಯಭರಿತ ಮನರಂಜನಾ ಕಾರ್ಯಕ್ರಮ ಇಂದು ಬೆಂಗಳೂರಿನ ಗುಡ್ ಷೆಪರ್ಡ್​ ಆಡಿಟೋರಿಯಮ್​ನಲ್ಲಿ ನಡೆಯಬೇಕಿತ್ತು. ಆದರೆ ಮುನಾವರ್ ಫಾರೂಕಿ ಅವರ ಈ ಕಾರ್ಯಕ್ರಮ ನಡೆದಲ್ಲಿ ವಿಧ್ವಂಸಕ ಕೃತ್ಯ ನಡೆಯುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ಪೊಲೀಸರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮುನಾವರ್ ಫಾರೂಕಿ ಅವರ ಈ ಕಾರ್ಯಕ್ರಮ ನಡೆದಲ್ಲಿ ಸಾರ್ವಜನಿಕ ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇರುವುದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿರುವುದರಿಂದ, ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ತಡೆ ಹಾಕಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.

ಕಾರ್ಯಕ್ರಮ ರದ್ದಾಗಿರುವ ಕುರಿತು ಟ್ವಿಟರ್​ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಮುನಾವರ್, ಪುನೀತ್ ರಾಜಕುಮಾರ್ ಅವರ ಫೌಂಡೇಷನ್ ಸಹಾಯಾರ್ಥವಾಗಿ ನಾವು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಪುನೀತ್ ಅವರ ಫೌಂಡೇಷನ್​ ಅನುಮತಿ ಪಡೆದೇ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಪುನೀತ್ ಅವರ ಹೆಸರು ಬಳಸಿ ಶೋ ಟಿಕೆಟ್​ ಮಾರಾಟ ಮಾಡಬಾರದು ಎಂದು ಪುನೀತ್ ಅವರ ಫೌಂಡೇಷನ್​ ಅವರು ಸೂಚಿಸಿದ್ದ ಹಿನ್ನೆಲೆಯಲ್ಲಿ ಅದನ್ನು ಹೇಳಿಕೊಂಡಿರಲಿಲ್ಲ ಎಂಬುದಾಗಿ ಅವರು ಹೇಳಿದ್ದಾರೆ. ಅಲ್ಲದೆ ಶೋ ರದ್ದುಗೊಳಿಸಿರುವ ಕುರಿತು ತಮ್ಮ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net