

ನವದೆಹಲಿ: ನಟ ಪುಲ್ಕಿತ್ ಸಾಮ್ರಾಟ್ ಮತ್ತು ನಟಿ ಕೃತಿ ಖರ್ಬಂದಾ ಶುಕ್ರವಾರ(ಮಾರ್ಚ್ 15)ರಂದು ಸಂಜೆ ದಾಂಪತ್ಯಕ್ಕೆ ಕಾಲಿಡುತ್ತಿದ್ದು, ದೆಹಲಿ ಎನ್‌ಸಿಆರ್‌ನ ಐಟಿಸಿ ಗ್ರ್ಯಾಂಡ್ನಲ್ಲಿ ಅತಿಥಿಗಳಿಗಾಗಿ ಅದ್ದೂರಿಯಾಗಿ ಔತಣಕೂಟ ಆಯೋಜಿಸಿದ್ದಾರೆ. ಅವರ ಮದುವೆಯ ಮೆನುವು ಭಾರತದ ವಿವಿಧ ರಾಜ್ಯಗಳು ಮತ್ತು ಪ್ರದೇಶದ ಆಹಾರ ಪದಾರ್ಥಗಳನ್ನು ಒಳಗೊಂಡಿದೆ.
ಈ ತಾರಾ ಜೋಡಿಯ ವಿವಾಹ ಕಾರ್ಯಕ್ರಮಕ್ಕೆ ಸ್ನೇಹಿತರು, ಹಿತೈಷಿಗಳು ಮತ್ತು ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ.
ವರದಿಗಳ ಪ್ರಕಾರ ಮದುವೆಯ ಮೆನುವು ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ, ಕೋಲ್ಕತ್ತಾ, ಬನಾರಸ್, ಮಧ್ಯಪ್ರದೇಶ ಮತ್ತು ದೆಹಲಿಯ ಅತ್ಯುತ್ತಮ ಭಕ್ಷ್ಯಗಳನ್ನು ಒಳಗೊಂಡಿದೆ.
ಪುಲ್ಕಿತ್ ಮತ್ತು ಕೃತಿ ಅವರ ಮೆಹೆಂದಿ ಮತ್ತು ಸಂಗೀತ ಸಮಾರಂಭಗಳು ಮಾರ್ಚ್ 14, ಗುರುವಾರ ದೆಹಲಿಯಲ್ಲಿ ನಡೆದಿವೆ ಎಂದು ವರದಿಯಾಗಿದೆ ಮತ್ತು ಅವರ ಹಲ್ದಿ ಸಮಾರಂಭವು ಶುಕ್ರವಾರ ಬೆಳಗ್ಗೆ ನಡೆದಿದೆ.
ಶುಕ್ರವಾರ ಸಂಜೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ರಿಚಾ ಚಡ್ಡಾ, ವರುಣ್ ಶರ್ಮಾ, ಮಿಕಾ ಸಿಂಗ್, ಫರ್ಹಾನ್ ಅಖ್ತರ್ ಮತ್ತು ಇತರರು ಮದುವೆಗೆ ಹಾಜರಾಗುವ ನಿರೀಕ್ಷೆಯಿದೆ.
ಪುಲ್ಕಿತ್ ಮತ್ತು ಕೃತಿ 2019 ರಲ್ಲಿ ತಮ್ಮ ಪಾಗಲ್ಪಂತಿ ಚಿತ್ರದ ಸೆಟ್‌ನಲ್ಲಿ ಪ್ರೀತಿಯ ಸೆಳೆತಕ್ಕೆ ಬಿದ್ದರು. ಅಂದಿನಿಂದ ಅವರು ಸ್ಥಿರವಾದ ಸಂಬಂಧವನ್ನು ಹೊಂದಿದ್ದಾರೆ. ಇಬ್ಬರೂ ಸಾರ್ವಜನಿಕವಾಗಿ ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವುದರಿಂದ ಹಿಂದೆ ಸರಿಯದಿದ್ದರೂ, ಅವರು ತಮ್ಮ ಮದುವೆಯನ್ನು ಗುಟ್ಟಾಗಿ ಇಟ್ಟಿದ್ದರು.