PSL vs IPL ಕಾಳಗ! ಯಾವುದು ಉತ್ತಮ? ಹಲವರ ಅಭಿಪ್ರಾಯಗಳ ಬೆನ್ನಲ್ಲೇ ಹಫೀಜ್​ ಶಾಕಿಂಗ್​ ಉತ್ತರ

ವಿಜಯವಾಣಿ (24)
Published on

PSL vs IPL: ಮಾ.22ರಿಂದ ಭಾರತದಲ್ಲಿ ನಡೆಯುತ್ತಿರುವ ಐಪಿಎಲ್​ ಜಾಗತಿಕ ಮಟ್ಟದಲ್ಲಿ ವ್ಯಾಪಕ ವೀಕ್ಷಣೆಯನ್ನು ಪಡೆಯುತ್ತಿದೆ. ಈ ವಿಷಯದಲ್ಲಿ ಅನುಮಾನವೇ ಇಲ್ಲ. ಬಿಸಿಸಿಐ ಐಪಿಎಲ್​ ಲೀಗ್ ಶುರುಮಾಡಿದ ಒಂದೇ ತಿಂಗಳೊಳಗೆ ತಮ್ಮ ದೇಶದಲ್ಲಿ ಪಿಎಸ್​ಎಲ್​ಗೆ ಚಾಲನೆ ನೀಡಿರುವ ಪಾಕಿಸ್ತಾನ, ಎಂದಿನಂತೆ ತನ್ನ ನರಿ ಬುದ್ಧಿಯನ್ನು ತೋರುವಲ್ಲಿ ಮುಂದಾಗಿದೆ. ವೀಕ್ಷಕರ ಸಂಖ್ಯೆ ಹಾಗೂ ಕ್ರಿಕೆಟ್​ ಪ್ರೇಮಿಗಳ ಸಂಖ್ಯೆ ಐಪಿಎಲ್​ಗೆ ಹೆಚ್ಚು. ಜಾಗತಿಕವಾಗಿ ಇಂಡಿಯನ್ ಪ್ರೀಮಿಯರ್​ ಲೀಗ್​ನ ಫ್ರಾಂಚೈಸಿ, ಕ್ರಿಕೆಟಿಗರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದನ್ನು ಸಹಿಸಿಕೊಳ್ಳದ ಪಾಕ್​ ಮಾಜಿ ಆಟಗಾರರು, ಪಿಎಸ್​ಎಲ್​ ಮುಂದೆ ಐಪಿಎಲ್​ ಏನೇನೂ ಅಲ್ಲ ಎಂದು ಹೇಳಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಪ್ರಸಕ್ತ ಐಪಿಎಲ್​ 18ನೇ ಆವೃತ್ತಿಯ ಪಂದ್ಯಗಳು ರೋಚಕತೆಗೆ ಸಾಕ್ಷಿಯಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಉತ್ಸಾಹ, ಕುತೂಹಲ ಎಂದಿಗಿಂತ ದುಪ್ಪಟ್ಟಾಗಿದೆ. ಆರ್​ಸಿಬಿ, ಡೆಲ್ಲಿ ಕ್ಯಾಪಿಟಲ್ಸ್​, ಗುಜರಾತ್ ಟೈಟನ್ಸ್​, ಪಂಜಾಬ್​ ಕಿಂಗ್ಸ್​, ಕೋಲ್ಕತ ನೈಟ್​ ರೈಡರ್ಸ್​ ಉತ್ತಮ ಆಲ್​ರೌಂಡ್ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಮಿಂಚುತ್ತಿದೆ. ಹೀಗಿರುವಾಗ ಮತ್ತೊಮ್ಮೆ ಪಾಕ್​ ತನ್ನ ದ್ವೇಷದ ಜ್ವಾಲೆಯನ್ನು ಭಾರತೀಯ ಕ್ರಿಕೆಟ್​ ಮೇಲೆ ಚಿಮ್ಮಿರುವುದು ಮಾಜಿ ಕ್ರಿಕೆಟಿಗರನ್ನು ಪ್ರತಿಕ್ರಿಯಿಸುವಂತೆ ದೂಡುತ್ತಿದೆ. ಈ ವಿಚಾರಕ್ಕೆ ಮಾಜಿ ಬ್ಯಾಟರ್​ ಮೊಹಮ್ಮದ್​ ಹಫೀಜ್​ ಕಡೆಗೂ ಪ್ರತಿಕ್ರಿಯಿಸಿದ್ದಾರೆ.

ಕಳೆದ ಒಂದಷ್ಟು ದಿನಗಳಿಂದ ಪಾಕ್​ ಕ್ರಿಕೆಟ್​ಗೆ ವೈರಿಯಾಗಿ ಕಾಣುತ್ತಿರುವ ಹಫೀಜ್​, ದಿಗ್ಗಜ ಬ್ಯಾಟರ್​ಗಳಾದ ವಾಖರ್ ಯೂನಿಸ್​, ವಾಸಿಮ್​ ಅಕ್ರಂರನ್ನು ಎದುರು ಹಾಕಿಕೊಂಡಿದ್ದಾರೆ. ಇವರೊಂದಿಗೆ ಕೆಲವು ವಿಷಯಕ್ಕಾಗಿ ತೀವ್ರ ಜಿದ್ದಾಜಿದ್ದಿಯನ್ನು ಹೊಂದಿದ್ದಾರೆ. ಇದೆಲ್ಲದರ ಮಧ್ಯೆ ನಿಮಗೆ ಪಿಎಸ್​ಎಲ್​ ಅಥವಾ ಐಪಿಎಲ್​ ಯಾವುದು ಉತ್ತಮ, ಮನರಂಜನಾತ್ಮಕ ಎನಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಹಫೀಜ್​, 'ನನಗೆ ಎರಡೂ ಉತ್ತಮವೇ' ಎಂದು ಹೇಳಿದ್ದಾರೆ.

"ಇಲ್ಲಿ ಯಾವುದೇ ಹೋಲಿಕೆ ಇಲ್ಲ. ನನಗೆ, ಎರಡೂ ಲೀಗ್‌ಗಳು (ಐಪಿಎಲ್ ಮತ್ತು ಪಿಎಸ್‌ಎಲ್) ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳಿಗೆ ಒಳ್ಳೆಯ ಮನರಂಜನೆಯನ್ನು ನೀಡುತ್ತಿವೆ" ಎಂದು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net