ವಿಜಯವಾಣಿ ಸುದ್ದಿಜಾಲ ಕುಂದಾಪುರ

ಬೇಸಿಗೆ ಸಂದರ್ಭ ನಾಡ, ಹಡವು, ಬಡಾಕೆರೆ, ಸೇನಾಪುರ ಗ್ರಾಮಗಳಲ್ಲಿ ಉಪ್ಪು ನೀರಿನ ಸಮಸ್ಯೆಯಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಸೌಪರ್ಣಿಕಾ ನದಿಗೆ ಕೋಣ್ಕಿ- ಹೇರೂರು ಭಾಗದಲ್ಲಿ ವೆಂಟೆಡ್ ಡ್ಯಾಂ ನಿರ್ಮಿಸಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಾಲ್ಕು ಗ್ರಾಮಸ್ಥರಿಂದ ಅನಿರ್ದಿಷ್ಟಾವಧಿ ಧರಣಿ ಬುಧವಾರ ಆರಂಭಗೊಂಡಿತು.
ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಈಗಲೂ ಸ್ಥಳೀಯ ಗ್ರಾಮಗಳ ಜನ ಉಪ್ಪು ನೀರು ಕುಡಿಯುವ ಪರಿಸ್ಥಿತಿಯಿದ್ದು, ಉಪ್ಪು ನೀರಿಗೆ ತೆರಿಗೆ ಕಟ್ಟುತ್ತಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ರೋಸಿಹೋಗಿದ್ದು, ಕೊನೆಯ ಪ್ರಯತ್ನವೆಂಬಂತೆ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಲಾಗಿದೆ ಎಂದರು. ರಾಜೀವ ಪಡುಕೋಣೆ ಹಾಗೂ ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಫಿಲಿಪ್ ಡಿಸಿಲ್ವಾ ಮಾತನಾಡಿದರು.
ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನಾ ನಾಡ, ನಾಡ ವಲಯಾಧ್ಯಕ್ಷೆ ಮನೋರಮಾ ಭಂಡಾರಿ, ಪ್ರಮುಖರಾದ ಶೀಲಾವತಿ, ಶೋಭಾ ಕೆರೆಮನೆ, ರಾಜೇಶ್ ಪಡುಕೋಣೆ, ನಿಸರ್ಗ ಪಡುಕೋಣೆ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಾಡ, ಹಡವು, ಬಡಾಕೆರೆ, ಸೇನಾಪುರ ಗ್ರಾಮಗಳ ಗ್ರಾಮಸ್ಥರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಜನವಾದಿ ಮಹಿಳಾ ಸಂಘಟನೆ ನಾಡ ವಲಯ, ಭಾರತೀಯ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ ಬೆಂಬಲ ನೀಡಿವೆ.
ಸ್ಥಳಕ್ಕೆ ತಹಸೀಲ್ದಾರ್ ಭೇಟಿ
ತಹಸೀಲ್ದಾರ್ ಭೀಮ್‌ಸೇನ್ ಕುಲಕರ್ಣಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರಿಂದ ಅಹವಾಲು ಸ್ವೀಕರಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಜಿಪಂ ಬೈಂದೂರು ಉಪವಿಭಾಗದ ಸಹಾಯಕ ಇಂಜಿನಿಯರ್ ರಾಜ್‌ಕುಮಾರ್, ಕಾರ್ಯಪಾಲಕ ಇಂಜಿನಿಯರ್ ಉದಯ ಶೆಟ್ಟಿ, ಪಿಡಿಒ ಹರೀಶ್, ಗ್ರಾಮ ಲೆಕ್ಕಾಧಿಕಾರಿ ಉಪಸ್ಥಿತರಿದ್ದರು.