ಶಾಲಾ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡಿದರೆ ಪರವಾನಿಗೆ ರದ್ದು

udp-15-dc
Published on

ಉಡುಪಿ: ಜಿಲ್ಲೆಯ ಶಾಲಾ ಕಾಲೇಜುಗಳ ನೂರು ಮೀಟರ್​ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧವಿದೆ. ಈ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ, ಮುಂಗಟ್ಟುಗಳ ಪರವಾನಿಗೆ ರದ್ದುಪಡಿಸಲು ಸ್ಥಳಿಯ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಸೂಚನೆ ನೀಡಿದರು.

ಗುರುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋಟ್ಪಾ- 2003 ಕಾಯಿದೆ ಅನುಷ್ಠಾನ ಸಮಿತಿ ತೆಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಟ್ಪಾ ಕಾಯಿದೆ ಅನ್ವಯ ಶಾಲಾ-&ಕಾಲೇಜುಗಳ ನೂರು ಮೀಟರ್​ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದ್ದರೂ ಸಹ ಜಿಲ್ಲೆಯ 38 ಶಾಲಾ-&ಕಾಲೇಜುಗಳ ವ್ಯಾಪ್ತಿಯಲ್ಲಿಯೇ ತಂಬಾಕು ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳೂ ಕೇಳಿ ಬಂದಿವೆ. ಈ ಬಗ್ಗೆ ಕೂಡಲೇ ಕ್ರಮವಹಿಸಬೇಕು. ಈಗಾಗಲೇ ಮಣಿಪಾಲದ 11, ಬೈಂದೂರಿನ ತಾಲೂಕಿನ 1 ಕಡೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿರುವ ಅಂಗಡಿಗಳ ಲೈಸೆನ್ಸ್​ಗಳನ್ನು ರದ್ದುಪಡಿಸಲಾಗಿದೆ. ಬಾಕಿ ಉಳಿದ ಅಂಗಡಿಗಳ ಪರವಾನಿಗೆಯನ್ನು ರದ್ದುಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಈಗಾಗಲೆ ಕೋಡಿಬೆಂಗ್ರೆ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿ ಘೋಷಿಸಲಾಗಿದೆ. ಜಿಲ್ಲೆಯ ಉಳಿದ ಗ್ರಾಮಗಳಲ್ಲಿಯೂ ಸಹ ತಂಬಾಕು ಮುಕ್ತ ಗ್ರಾಮಗಳನ್ನಾಗಿಸಲು ಸ್ಥಳಿಯ ಸಂಸ್ಥೆಗಳು, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಪಂಚಾಯತ್​ ಅಭಿವೃದ್ಧಿ ಅಧಿಕಾರಿಗಳು ಸಹಕರಿಸಬೇಕು ಎಂದರು. ಜಿಲ್ಲೆಯ ಬಹುಮಹಡಿ ಕಟ್ಟಡಗಳಲ್ಲಿ ಹೆಚ್ಚು ಮನೆಗಳಿದ್ದು, ಅವುಗಳನ್ನು ತಂಬಾಕು ಮುಕ್ತ ಅಪಾರ್ಟ್​ಮೆಂಟ್​ಗಳೆಂದು ಘೋಷಿಸಲಾಗುತ್ತಿದೆ. ಈಗಾಗಲೇ ಉಡುಪಿ ತಾಲೂಕಿನ ಕ್ಲಾಸಿಕಲ್​ ನೆಸ್ಟ್​, ಕಾರ್ಕಳದ ಪಂಚಮಿ ರೆಸಿಡೆನ್ಸಿ ಮತ್ತು ಗಂಗಾ ಪ್ಯಾರಡೈಸ್​ಗಳನ್ನು ತಂಬಾಕು ಮುಕ್ತ ಅಪಾರ್ಟ್​ಮೆಂಟ್​ಗಳೆಂದು ಘೋಷಿಸಿ, ಪ್ರಮಾಣಪತ್ರ ನೀಡಲಾಗಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ.ಅರುಣ್​ ಕೆ, ಎ.ಎಸ್​.ಪಿ ಪಿ.ಎ ಹೆಗಡೆ, ಡಿ.ಎಫ್​.ಓ ಗಣಪತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net