

ಬಂಟ್ವಾಳ: ಪುತ್ತೂರಿಗೆ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾ.ಪಂ.ಮತ್ತು ಬಾಳ್ತಿಲ ಗ್ರಾಪಂ ವ್ಯಾಪ್ತಿಯ ಮಧ್ಯೆ ಇರುವ ಕುಂದಾಯಮಜಲು ಎಂಬಲ್ಲಿ ನದಿ ತೀರದಲ್ಲಿ ಜಾಕ್‌ವೆಲ್ ನಿರ್ಮಾಣಕ್ಕಾಗಿ ಬಂಡೆಕಲ್ಲನ್ನು ಸ್ಫೋಟಿಸಿದ್ದರಿಂದ ಹಲವಾರು ಮನೆಗಳಿಗೆ ಹಾನಿಯಾದ ಹಿನ್ನ್ನೆಲೆಯಲ್ಲಿ ಗ್ರಾಮಸ್ಥರು ಗುರುವಾರ ಹಠಾತ್ ಪ್ರತಿಭಟನೆ ನಡೆಸಿ ಕಾಮಗಾರಿ ಸ್ಥಗಿತಗೊಳಿಸಿದರು.
ನೀರು ಸರಬರಾಜಿಗಾಗಿ ಕುಂದಾಯಮಜಲಿನ ನದಿತೀರದಲ್ಲಿ ಕಾಮಗಾರಿಯ ಗುತ್ತಿಗೆ ಸಂಸ್ಥೆ ಅಕ್ರಮವಾಗಿ ಬಂಡೆಕಲ್ಲು ಸ್ಫೋಟಿಸುತ್ತಿದ್ದು, ಬುಧವಾರ ರಾತ್ರಿ ವೇಳೆ ಬಂಡೆಕಲ್ಲನ್ನು ಸ್ಫೋಟಿಸಿದ ಪರಿಣಾಮ ಪರಿಸರದ ಹಲವಾರು ಮನೆಗಳ ಗೋಡೆ ಬಿರುಕುಬಿಟ್ಟು ಹಾನಿಯಾಗಿದೆ.
ಬಂಡೆ ಸ್ಫೋಟದಿಂದ ತೊಂದರೆಗೊಳಗಾದ ಗ್ರಾಮಸ್ಥರು ಬೆಳಗ್ಗೆ ಕಾಮಗಾರಿ ಸ್ಥಳದಲ್ಲಿ ಹಠಾತ್ ಪ್ರತಿಭಟನೆ ನಡೆಸಿದ್ದು, ಸುದ್ದಿ ತಿಳಿದ ನರಿಕೊಂಬು ಗ್ರಾ.ಪಂ ಅಧ್ಯಕ್ಷ ಸಂತೋಷ್ ಕುಮಾರ್ ಹಾಗೂ ಗ್ರಾ.ಪಂ ಸದಸ್ಯರಾದ ಪ್ರಕಾಶ್, ಯೋಗೀಶ್, ಬಾಳ್ತಿಲ ಗ್ರಾ.ಪಂ ಸದಸ್ಯ ಶಿವರಾಜ್ ಹಾಗೂ ಸ್ಥಳೀಯ ದೈವಸ್ಥಾನವೊಂದರ ಪ್ರಮುಖ ದಿನೇಶ್ ಸಹಿತ ಪ್ರಮುಖರು ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರಿಗೆ ಸಾಥ್ ನೀಡಿದರು.
ಕಳೆದ ಹಲವು ದಿನಗಳಿಂದ ಬಂಡೆಗಳನ್ನು ಸ್ಫೋಟಿಸಲಾಗುತ್ತಿದ್ದು, ಸಂಬಂಧಪಟ್ಟವರಿಗೆ ಇದರಿಂದಾಗುವ ತೊಂದರೆಯ ಬಗ್ಗೆ ತಿಳಿಸಲಾಗಿದ್ದರೂ ಬುಧವಾರ ದೊಡ್ಡ ಪ್ರಮಾಣದಲ್ಲಿ ಸ್ಫೋಟ ನಡೆಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗುತ್ತಿಗೆ ಸಂಸ್ಥೆಯ ಮ್ಯಾನೇಜರ್ ಶ್ರೀನಿವಾಸ್ ಕುಲಕರ್ಣಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಅಹವಾಲು ಆಲಿಸಿದರು.
ಬರೀಮಾರು ಗ್ರಾಮದ ಕಾಗೇಕನ ಎಂಬಲ್ಲಿ ನಡೆಯಬೇಕಾಗಿದ್ದ ಈ ಜಾಕ್‌ವೆಲ್ ಬಾಳ್ತಿಲ ಹಾಗೂ ಶಂಭೂರು ಗ್ರಾಮಗಳ ಮಧ್ಯದ ಕುಂದಾಯಮಜಲಿನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿ ಈ ಯೋಜನೆ ಅನುಷ್ಠಾನಗೊಂಡ ಬಳಿಕ ನರಿಕೊಂಬು ಮತ್ತು ಬಾಳ್ತಿಲ ಗ್ರಾಮಸ್ಥರಿಗೆ ಮೊದಲ ಆದ್ಯತೆಯಲ್ಲಿ ನೀರು ಪೂರೈಸಿ ಬಳಿಕ ತಮಗೆ ಬೇಕಾದ ಗ್ರಾಮಗಳಿಗೆ ನೀರು ಕೊಂಡೊಯ್ಯಬೇಕು ಹಾಗೂ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಎರಡು ಗ್ರಾಮಗಳ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಾಧಕ-ಬಾಧಕಗಳ ಚರ್ಚೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವವರೆಗೆ ಬಂಡೆ ಸ್ಫೋಟ ಸಹಿತ ಕಾಮಗಾರಿ ಸ್ಥಗಿತಗೊಳಿಸುವಂತೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಒಪ್ಪಿದ ಗುತ್ತಿಗೆ ಸಂಸ್ಥೆಯ ಮ್ಯಾನೇಜರ್ ಮುಂದಿನ ಸಭೆ ನಡೆಯುವರೆಗೆ ಕಾಮಗಾರಿ ಸ್ಥಗಿತಗೊಳಿಸುವುದಾಗಿ ಭರವಸೆ ನೀಡಿದರು.