ಶಶಿ,ಈಶ್ವರಮಂಗಲ
ಈಶ್ವರಮಂಗಲದಿಂದ ಪಂಚೋಡಿ, ಕರ್ನೂರು ಮೂಲಕ ಗಾಳಿಮುಖಕ್ಕೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಸಂಪರ್ಕ ರಸ್ತೆಯ ಕರ್ನೂರು ಸಮೀಪದ ಕೋಟಿಗದ್ದೆ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಅಡಿಭಾಗದಲ್ಲಿನ ಕಾಂಕ್ರೀಟ್ ನೀರಿನಲ್ಲಿ ಕೊಚ್ಚಿ ಹೋಗಿದೆ.
ಕೋಟಿಗದ್ದೆಯಲ್ಲಿದ್ದ ಓಬಿರಾಯನ ಕಾಲದ ಸೇತುವೆ ತೀರಾ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಆ ಭಾಗದ ಗ್ರಾಮಸ್ಥರು ಕಳೆದ ಹಲವಾರು ವರ್ಷಗಳಿಂದ ಹೊಸ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ಕೆಲ ತಿಂಗಳ ಹಿಂದೆ ಶಾಸಕ ಅಶೋಕ್‌ಕುಮಾರ್ ರೈ ಮತ್ತು ಉಪವಿಭಾಗಾಧಿಕಾರಿಗೆ ಗ್ರಾಮಸ್ಥರು ಮತ್ತೆ ಮನವಿ ಮಾಡಿಕೊಂಡಿದ್ದರು. ಆ ಬಳಿಕ ಸೇತುವೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಸೇತುವೆ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ ಎಂಬ ವರದಿ ನೀಡಿದ್ದರು. ಬಳಿಕದ ವಿದ್ಯಮಾನದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ 40 ಲಕ್ಷ ರೂ.ಬಿಡುಗಡೆಯಾಗಿ ಕಾಮಗಾರಿ ಆರಂಭಗೊಂಡಿತ್ತು.
ಕಳಪೆ ಕಾಮಗಾರಿ ಅಪಸ್ವರ
ಕಾಮಗಾರಿ ಆರಂಭದಲ್ಲೇ ಇಲ್ಲಿ ಕಳಪೆ ಕೆಲಸ ನಿರ್ವಹಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು, ಈ ಹಿಂದಿನ ಸೇತುವೆ ಎಂಟೂವರೆ ಮೀಟರ್ ಅಗಲ ಇದ್ದರೂ ಹೊಸ ಸೇತುವೆಯನ್ನು 7ಮೀಟರ್ ಅಗಲಕ್ಕಷ್ಟೇ ಸೀಮಿತವಾಗಿ ಹಾಗೂ 3 ಅಡಿಯಷ್ಟು ತಗ್ಗಿಸಿ ನಿರ್ಮಿಸುತ್ತಿದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಾರ್ವಜನಿಕರು ಸೇತುವೆಗೆ ಬಲಿಷ್ಠ ಪಿಲ್ಲರ್ ಹಾಕದೆ, ಎರಡು ಬದಿಗೆ ಬೀಮ್ ಅಳವಡಿಸಿದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿ ಏಪ್ರಿಲ್‌ನಲ್ಲಿ ಕಾಮಗಾರಿಗೆ ತಡೆಯೊಡ್ಡಿದ್ದರು. ಸಮರ್ಪಕ ರೀತಿಯಲ್ಲಿ ಸೇತುವೆ ಕಾಮಗಾರಿ ನಿರ್ವಹಿಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಲ್ಲದೆ. ಈ ಕುರಿತು ಪುತ್ತೂರು ಎಸಿಗೆ ದೂರು ನೀಡಿದ್ದರು. ಎಸಿ ಸೂಚನೆಯಂತೆ ಲೋಕೋಪಯೋಗಿ ಇಲಾಖೆಅಭಿಯಂತರ ಗೋಕುಲ್‌ದಾಸ್, ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ಬಿ.ರಾಜಾರಾಮ್, ಇಂಜಿನಿಯರ್ ಬಾಲಕೃಷ್ಣ ಭಟ್, ಗುತ್ತಿಗೆದಾರ ಸಂದೀಪ್ ನಾಯಕ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ,ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಭರವಸೆ ನೀಡಿದ್ದರು.
ಹುಸಿಯಾದ ಭರವಸೆ
ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಸೇತುವೆಯ ಕೆಳಭಾಗದ ಅಡಿಪಾಯ (ಮಣ್ಣು-ಕಾಂಕ್ರೀಟ್) ಕೊಚ್ಚಿಕೊಂಡು ಹೋಗುವುದರೊಂದಿಗೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಅಧಿಕಾರಿಗಳ ಭರವಸೆ ಹುಸಿಯಾಗಿದೆ. ಪ್ರಸ್ತುತ ಸೇತುವೆಯ ಗೋಡೆಗೆ ಭದ್ರ ಅಡಿಪಾಯವಿಲ್ಲದೆ ನೇತಾಡುವ ಸ್ಥಿತಿಯಲ್ಲಿದೆ. ಸೇತುವೆ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆಯ ಕೆಳಗಿನ ಭಾಗದ ಮಣ್ಣು ಕೂಡ ಕೊಚ್ಚಿ ಹೋಗಿದೆ.
ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಅಡಿಭಾಗದ ಮಣ್ಣು ಮಳೆನೀರಿನೊಂದಿಗೆ ಕೊಚ್ಚಿಕೊಂಡು ಹೋಗಿ ಸೇತುವೆಯ ಗೋಡೆ ನೇತಾಡುವ ಸ್ಥಿತಿಗೆ ಬಂದಿದೆ. ಭದ್ರ ಅಡಿಪಾಯ ಅಳವಡಿಸದೆ ಸೇತುವೆ ನಿರ್ಮಾಣ ಮಾಡಲಾಗಿದ್ದು, ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ.
– ಖಾದರ್ ಕರ್ನೂರು, ಮಾಜಿ ಪಂಚಾಯಿತಿ ಸದಸ್ಯ
ಕಳಪೆ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ, ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೆವು. ಆದರೂ ಸಮರ್ಪಕವಾಗಿ ನಿರ್ವಹಿಸಿಲ್ಲ. ಸದ್ಯ ಭದ್ರ ಅಡಿಪಾಯ ಹಾಕದೆ ನಿರ್ಮಿಸಿರುವ ಸೇತುವೆಯ ಅಡಿಪಾಯವೇ ಮಳೆನೀರಿನೊಂದಿಗೆ ಕೊಚ್ಚಿಕೊಂಡು ಹೋಗಿದೆ.
– ಅಮರನಾಥ ಆಳ್ವ ಕರ್ನೂರುಗುತ್ತು, ರೈತ ಸಂಘ-ಹಸಿರುಸೇನೆ ಜಿಲ್ಲಾಧ್ಯಕ್ಷ